ಪುತ್ತೂರು: ಮನೆಯೊಂದು ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮನೆ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಸರ್ವೆ ಗ್ರಾಮದ ಸೊರಕೆ ಪೆರಂಟೋಲು ಎಂಬಲ್ಲಿ ಜ.9ರಂದು ರಾತ್ರಿ ನಡೆದಿದೆ.
ಪೆರಂಟೋಲು ನಿವಾಸಿ ಕುಂಡ ಹಾಗೂ ಅವರ ಪುತ್ರ ಕರಿಯ, ಸೊಸೆ ಗಿರಿಜಾರವರು ವಾಸವಾಗಿದ್ದ ಟರ್ಪಾಲು ಹೊದಿಕೆಯ ಕಚ್ಚಾ ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಜ.9ರಂದು ರಾತ್ರಿ ಗಂಟೆ 7.30ರ ವೇಳೆಗೆ ಮನೆಯಲ್ಲಿ ಯಾರು ಇಲ್ಲದ ವೇಳೆ ಬೆಂಕಿ ಹೊತ್ತಿಕೊಂಡಿದ್ದು ಮನೆಯೊಳಗಿದ್ದ ಬಟ್ಟೆ ಬರೆ, ಪಾತ್ರೆ, ಮನೆಯ ದಾಖಲೆ ಸೇರಿದಂತೆ ಇತರ ಎಲ್ಲ ವಸ್ತುಗಳು ಬೆಂಕಿಗಾಹುತಿಯಾಗಿದೆ. ಮರದ ಕಂಬ ಹಾಕಿ ಮೇಲೆ ಟರ್ಪಾಲು ಹೊದಿಸಿ ಮನೆ ಮಾಡಿಕೊಂಡು ಅದರಲ್ಲಿ ಜೀವನ ನಡೆಸುತ್ತಿದ್ದ ಕುಟುಂಬಕ್ಕೆ ಇದೀಗ ಆ ಮನೆಯೂ ಇಲ್ಲದಾಗಿದ್ದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಘಟನೆಯಿಂದ 1.5 ಲಕ್ಷ ರೂ.ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಮುಂಡೂರು ಗ್ರಾಮ ಆಡಳಿತಾಧಿಕಾರಿ ಉಮೇಶ್ ಕಾವಡಿ, ಗ್ರಾಮ ಸಹಾಯಕ ಹರ್ಷಿತ್ ನೇರೋಳ್ತಡ್ಕರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೇಲಧಿಕಾರಿಗಳಿಗೆ ವರದಿ ಮಾಡಿರುವುದಾಗಿ ತಿಳಿದು ಬಂದಿದೆ.
ನಮಗೆ ಇದ್ದ ಸಣ್ಣ ಮನೆಯೂ ಬೆಂಕಿಗೆ ಆಹುತಿಯಾಗಿದ್ದು ನಮಗೆ ಯಾರಾದರೂ ಸಹಾಯ ಮಾಡಿ ಎಂದು ಮನೆಯ ಯಜಮಾನ ಕುಂಡ ಮನವಿ ಮಾಡಿಕೊಂಡಿದ್ದಾರೆ.