ಆದರ್ಶನಗರ ಅಂಗನವಾಡಿಯ ಬಳಿಯ ಗಿಡ-ಗಂಟಿ ತೆರವು:ಕಾರ್ಯಕರ್ತೆ, ಸಹಾಯಕಿಯವರ ಕಾರ್ಯಕ್ಕೆ ಶ್ಲಾಘನೆ

0

ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾಮದ ಆದರ್ಶನಗರ ಅಂಗನವಾಡಿಯ ಆವರಣದ ಹೊರಗಡೆ ಗಿಡ-ಗಂಟಿಗಳು ತುಂಬಿ ಹೋಗಿದ್ದು, ಪುಟಾಣಿಗಳಿರುವ ಅಂಗನವಾಡಿಯ ಸುತ್ತ ಈ ರೀತಿ ಗಿಡ-ಗಂಟಿಗಳು ಆವರಿಸುವುದರಿಂದ ಹಾವು- ಚೇಳುಗಳು ಬರುವ ಸಾಧ್ಯತೆಯ ಬಗ್ಗೆ ‘ಸುದ್ದಿ ಬಿಡುಗಡೆ’ ಪತ್ರಿಕೆಯಲ್ಲಿ ವರದಿ ಬಂದ ಬಳಿಕವೂ 34 ನೆಕ್ಕಿಲಾಡಿ ಗ್ರಾ.ಪಂ. ಸ್ಪಂದಿಸಿದಿದ್ದಾಗ ಕೊನೆಗೇ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯವರು ಕೆಲಸದವರನ್ನು ನೇಮಿಸಿ ಗಿಡ-ಗಂಟಿಗಳನ್ನು ತೆರವುಗೊಳಿದ್ದಾರೆ.


ಆದರ್ಶನಗರದ ಅಂಗನವಾಡಿಯ ಆವರಣ ಶುಚಿತ್ವದಿಂದ ಕೂಡಿದ್ದರೂ, ಆವರಣದ ಹೊರಗೆ ರಸ್ತೆ ಬದಿಯು ಹುಲ್ಲುಗಳು, ಗಿಡ-ಗಂಟಿಗಳಿಂದ ಆವೃತ್ತವಾಗಿತ್ತು. ಕೆಲವು ಕಡೆಗಳಲ್ಲಿ ಗಿಡ-ಗಂಟಿಗಳು ಅಂಗನವಾಡಿಯ ಆವರಣ ಗೋಡೆಯೇ ಕಾಣದಂತೆ ಆವರಿಸಿತ್ತಲ್ಲದೇ, ಅಂಗನವಾಡಿಯ ಆವರಣದೊಳಗೆ ಬಾಗಿತ್ತು. ಅಂಗನವಾಡಿಯ ಹಿಂಬದಿ ರಸ್ತೆ ಬದಿಯಲ್ಲಿ ಬೆಳೆದ ಗಿಡ-ಗಂಟಿಗಳು ಅಂಗನವಾಡಿಯ ಮೇಲ್ಚಾವಣಿಯನ್ನೇ ಆವರಿಸಲು ಮುಂದಾಗಿದ್ದವು. ಇದು ಹಾವು- ಚೇಳುಗಳ ಆವಾಸ ತಾಣವಾದರೆ ಮಕ್ಕಳ ಸುರಕ್ಷತೆಯ ಭೀತಿಯೂ ಎದುರಾಗುವ ಸಾಧ್ಯತೆಯಿತ್ತು. ಇಲ್ಲಿ ಮಾತ್ರ ಅಲ್ಲದೇ, ಆದರ್ಶನಗರದ ರಸ್ತೆ ಬದಿಯೂ ಗಿಡಗಂಟಿಗಳಿಂದ ಆವೃತ್ತವಾಗಿತ್ತು. ಈ ಬಗ್ಗೆ ‘ಸುದ್ದಿ ಬಿಡುಗಡೆ’ ಪತ್ರಿಕೆಯಲ್ಲಿ ಸಚಿತ್ರ ವರದಿ ಬಂದಿತ್ತು. ಅಲ್ಲದೇ, ಇದರ ತೆರವಿಗೆ ಕ್ರಮ ಕೈಗೊಳ್ಳುವಂತೆ ಗ್ರಾ.ಪಂ.ಗೆ ಗ್ರಾಮಸ್ಥರು ಮನವಿ ಕೂಡಾ ನೀಡಿದ್ದರು. ಆದರೂ ಗ್ರಾ.ಪಂ. ಈ ಬಗ್ಗೆ ಕ್ರಮಕ್ಕೆ ಮುಂದಾಗದಿದ್ದಾಗ ಅಂಗನವಾಡಿಯ ಕಾರ್ಯಕರ್ತೆ ಹಾಗೂ ಸಹಾಯಕಿಯವರು ಕೆಲಸಕ್ಕೆ ಜನ ನೇಮಿಸಿ ಅಂಗನವಾಡಿಯ ಆವರಣಗೋಡೆಯ ಸುತ್ತದ ಗಿಡ-ಗಂಟಿಗಳನ್ನು ತೆರವುಗೊಳಿಸಿದ್ದಾರೆ. ಇವರ ಈ ಕಾರ್ಯ ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.

ಗ್ರಾ.ಪಂ.ಗೆ ಈ ಬಗ್ಗೆ ಎರಡು ದಿನಗಳ ಹಿಂದೆ ಮನವಿ ಬಂದಿತ್ತು. ಪತ್ರಿಕೆಯ ವರದಿಯೂ ಗಮನಕ್ಕೆ ಬಂದಿತ್ತು. ಆದರೆ ಜ.12ರಂದು ಗ್ರಾ.ಪಂ.ನ ಸಾಮಾನ್ಯ ಸಭೆ ನಡೆಯಲಿದ್ದು, ಈ ಅರ್ಜಿಯನ್ನು ಸಾಮಾನ್ಯ ಸಭೆಯಲ್ಲಿಟ್ಟು ಚರ್ಚಿಸಿ ಅಲ್ಲಿ ನಿರ್ಣಯ ಕೈಗೊಂಡು ಮತ್ತೆ ಅದರಂತೆ ಮುಂದುವರಿಯುವ ನಿರ್ಧಾರ ಮಾಡಲಾಗಿತ್ತು. ಆದರೆ ಅದಕ್ಕೆ ಮೊದಲೇ ಅಂಗನವಾಡಿಯವರು ಅಲ್ಲಿನ ಸುತ್ತಲಿನ ಗಿಡ-ಗಂಟಿಗಳನ್ನು ತೆರವು ಮಾಡಿದ್ದಾರೆ.
ಸುಜಾತ ರೈ ಅಲಿಮಾರ್
ಅಧ್ಯಕ್ಷರು, 34 ನೆಕ್ಕಿಲಾಡಿ ಗ್ರಾ.ಪಂ.

LEAVE A REPLY

Please enter your comment!
Please enter your name here