‘ನೂರು ಜನ ಬಿಸಿರಕ್ತದ ಯುವಕರನ್ನು ಕೊಡಿ ನಾನು ನನ್ನ ರಾಷ್ಟ್ರದ ಚಿತ್ರಣವನ್ನು ಬದಲಿಸುತ್ತೇನೆ’ ಎಂದಿದ್ದರು ವಿವೇಕಾನಂದರು. ಇದು ಅವರಿಗೆ ಯುವಕರಲ್ಲಿದ್ದ ಅಮಿತ ವಿಶ್ವಾಸವಾಗಿತ್ತು. ಭವ್ಯ ಭಾರತದ ದಿಕ್ಸೂಚಿಯನ್ನು ನಿರ್ಧರಿಸುವ ಶಕ್ತಿ ಯುವ ಜನತೆಯಲ್ಲಿದೆ ಎಂದು ಅಮಿತವಾಗಿ ನಂಬಿದ್ದರು. ವಿಶ್ವ ಸರ್ವ ಧರ್ಮ ಸಮ್ಮೇಳನದಲ್ಲಿ ಭಾರತದ ಶಕ್ತಿ ಏನು ಎಂದು ಜಗಜ್ಜಾಹಿರು ಮಾಡಿದ್ದರು. ಆದರೆ ಇಂದಿನ ಯುವಕರಲ್ಲಿ ವಿವೇಕಾನಂದರಿಗಿದ್ದ ಆ ಪ್ರಜ್ಞೆ ಎಲ್ಲಿಗೆ ಹೋಯಿತು..? ಇಂದಿನ ಯುವಕರ ಗುರಿ ಎತ್ತ ನೆಟ್ಟಿದೆ…? ಇಂದಿನ ಯುವಕರ ಅಂತರಾತ್ಮದ ಭಾವಗಳೇನು..? ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭದಲ್ಲಿ ನಾವಿದ್ದೇವೆ ಎಂದೆನಿಸುತ್ತಿದೆ. ಯೌವ್ವನಕ್ಕೆ ಬಂದ ಯುವಕರು ತಮ್ಮ ಶಕ್ತಿಯನ್ನು ಮಚ್ಚು ಬೀಸುವೂದಕ್ಕೋ… ಗಾಂಜಾ ಅಮಲನ್ನು ಸಹಿಸಿಕೊಳ್ಳುವುದಕ್ಕೊ… ಎಲ್ಲೋ ಗುಂಪು ಕಟ್ಟಿಕೊಂಡು ಪಾರ್ಟಿ ಪುಂಡಾಟ ನಡೆಸುವುದಕ್ಕೋ ಬಳಸಿಕೊಳ್ಳುತ್ತಿದ್ದಾರೆಯೆ ಎನಿಸುತ್ತದೆ ನಮ್ಮ ಮಾಧ್ಯಮ ಸುದ್ದಿಗಳನ್ನು ನೋಡಿದಾಗ.
ಇಂದು ವಿವೇಕಾನಂದರು ನೆನಪಾಗುವುದು ಬರಿಯ ಧಾರ್ಮಿಕ ಕಾರಣಕ್ಕಷ್ಟೇ ಮಾತ್ರವಾದರೆ ಭವ್ಯ ಭಾರತದ ಕನಸಿಗೆ ನಾವು ತಣ್ಣೀರೆರಚಿದಂತೆಯರ ಸರಿ. ವಿವೇಕಾನಂದರು ಈ ಮಣ್ಣಿನ ಅಸ್ಮಿತೆ,ನಮ್ಮ ಅತ್ಮ ಬಲದ ಸ್ಪೂರ್ತಿ, ವಿಶ್ವ ಗುರುವೆಂಬ ಭಾರತದ ಕನಸಿ ಅಡಿಪಾಯ ಎಂದರೆ ತಪ್ಪಿಲ್ಲ.ಅಂತಹ ಒಬ್ಬ ಮಹಾನ್ ಚೇತನ ಇಂದು ಬರೆ ಒಂದು ದಿನದ ಆಚರಣೆ ಹೆಸರಿಗಷ್ಟೇ ಸೀಮಿತವಾಗಿ ಮುಗಿದು ಹೋಗುತ್ತಿರುವುದು ನಿಜಕ್ಕೂ ಖೇಧಕರ.
ಆತ್ಮ ಬಲವೊಂದಿದ್ದರೆ ಏನನ್ನೂ ಸಾಧಿಸಬಹುದು ಎಂದು ಜಗತ್ತಿಗೆ ಸಾರಿದವರು ಸ್ವಾಮಿ ವಿವೇಕಾನಂದರು. ಭಾರತದ ಸಂಸ್ಕೃತಿ,ಧರ್ಮ ಪರಂಪರೆಯನ್ನು ವಿಶ್ವಕ್ಕೆ ಜಗಜ್ಜಾಹಿರು ಮಾಡಿದ ಹೀರೋ.,ಧರ್ಮದ ವೈಶಾಲ್ಯ ನಿರೂಪಣೆ ಕೊಟ್ಟು ಭಾರತೀಯರು ಎದೆ ತಟ್ಟಿಕೊಳ್ಳುವಂತೆ ಮಾಡಿದ ಮಹಾನ್ ಸಂತ. ಇಂತಹಾ ವೈಚಾರಿಕ ಗುರುವಿನ ಪಾದದಡಿ ಬೆಳೆದ ನಾವು, ಅಂದರೆ ಯುವಕರು ಧರ್ಮದ ಸಂಕುಚಿತ ಮನೋಭಾವಗಳಿಗೆ ಕಟ್ಟು ಬಿದ್ದು ಧರ್ಮದ ಗೋಡೆಗಳನ್ನು ಶ್ರಮ ಪಟ್ಟು ಕಟ್ಟುತ್ತಾ,ನಾಳೆಯ ಬೃಹತ್ ಕಂದಕಕ್ಕೆ ಕಾರಣರಾಗುತ್ತಿದ್ದೇವೆಯೆ ಎಂಬ ಆತಂಕವು ಮೂಡುತ್ತದೆ. ರಾಜಕೀಯ,ಧರ್ಮ, ಸಂಸ್ಕೃತಿಗಳ ನಡುವಿನ ಅಂತರವನ್ನು ಅರಿಯದ ಸ್ಥಿತಿಯಲ್ಲಿ ಕಾಣುತ್ತಿರುವುದು ನಿಜಕ್ಕೂ ನಮ್ಮ ದೇಶದ ಬೃಹತ್ ಶಕ್ತಿಯೊಂದರ ಸೋರಿಕೆಯೇ ಸರಿ.
ಯುವಕರು ಸ್ವಾಲಂಬಿಗಳಾಗ ಬೇಕು ಹೇಡಿಗಳಾಗ ಬಾರದು, ತಮ್ಮ ಬದುಕಿನ ಶಿಲ್ಪಿಗಳಾಗಬೇಕೆಂದು ಬಯಸಿದ್ದರು ವಿವೇಕಾನಂದರು. ಆದರೆ ಶಿಕ್ಷಣದೊಂದಿಗೆ ನೈತಿಕತೆಯ ಅರಿವಿನ ಕೊರತೆಯೊ, ಸ್ವಾವಲಂಬಿ ಬದುಕಿಗೆ ಸರಿಯಾದ ನಿರ್ದೇಶನದ ಕೊರತೆಯೊ, ಭವ್ಯ ಬದುಕಿನ ಕಲ್ಪನಾ ಶಕ್ತಿಯ ಕೊರತೆಯೋ ತಿಳಿಯದು ಇಂದಿನ ಯುವಕರಲ್ಲಿ ಸಾಮಾಜಿಕ ಕಳಕಳಿಯಾಗಲಿ, ನಿಜವಾದ ದೇಶಾಭಿಮಾನವಾಗಲಿ ವಿರಳಾತಿ ವಿರಳ. ಹೀಗಿದ್ದಾಗ ಈ ಯುವಕರು ರಾಜಕೀಯ ವ್ಯವಸ್ಥೆಯ ದಾಳಗಳಾಗಿ ಬಳಸಲ್ಪಡುವುದೇ ಹೆಚ್ಚು ‘ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ’ ಎನ್ನುವಂತೆ ಮಜವಾಗಿ ತಿಂದುಂಡು ವಿಹರಿಸುವ ಹವ್ಯಾಸವು ಮೈಗೂಡುತ್ತ ಯೋಚನಾ ಶಕ್ತಿಯ ಕುಂದುವಿಕೆಗೆ ಕಾರಣರಾಗುತ್ತಿದ್ದಾರೆ. ಕಡೆಗೆ ತನಗೆ ಯಾರು ಇಲ್ಲ ಎನ್ನುವಲ್ಲಿ ಆತ್ಮಹತ್ಯೆಯ ವರೆಗೂ ಸಾಗುವೂದು ಒಂದು ವಿಧವಾದರೆ, ಕಷ್ಟಗಳಿಗೆ ಎದೆಗೊಟ್ಟು ನಿಲ್ಲುವ ಶಕ್ತಿಯನ್ನು ಕೂಡ ಕಳೆದು ಕೊಳ್ಳುತ್ತಿದ್ದಾರೆ. ತತ್ಪರಿಣಾಮ ತನ್ನ ಸೋಲಿಗೆ ಯಾರನ್ನೂ ತೋರಿಸುವ ವ್ಯವಸ್ಥೆಯೊಳಗೆ ಬಂಧಿಗಳಾಗುತ್ತಾರೆ.
ಹೌದು, ವಿವೇಕ ನಮ್ಮದಾಗದ ಹೊರತು ಅದು ಯಾರದೋ ಸೊತ್ತಾದೀತು. ನಮ್ಮ ಜೀವನದ ಕನಸು ನಮ್ಮದೇ ಆಗಿದ್ದಾದರೆ ಯಾವುದೇ ಯುವಕ ತನ್ನದಾದ ಜೀವನವನ್ನು ಕಟ್ಟಿಕೊಳ್ಳಬಹುದು, ಅಂತೆಯೆ ಪರರಿಗೂ ಸಹಾಯಕರಾಗಬಹುದು. ಇಂದು ನಮಗೆ ವಿವೇಕಾನಂದರಿಗಿದ್ದಂತಹ ಅದಮ್ಯ ಇಚ್ಛಾ ಶಕ್ತಿಯಾಗಲಿ, ಮೇಧಾ ಶಕ್ತಿಯಾಗಲಿ, ಜ್ಞಾನವಾಗಲಿ ಇರಬೇಕೆಂದಲ್ಲ ಕನಿಷ್ಠ ಅವರು ನುಡಿದ ಸತ್ಯದ ಪಥವನ್ನು ಅರಿತದ್ದೇ ಆದರೆ ನಾಳಿನ ಬದುಕು ನಮ್ಮದೇ.
ಜನಾರ್ದನ ದುರ್ಗ,
ಪದವೀಧರ ಶಿಕ್ಷಕರು, ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿ,
ನಿಡ್ಪಳ್ಳಿ ಗ್ರಾಮ ಮತ್ತು ಅಂಚೆ ಪುತ್ತೂರು ತಾಲೂಕು. ದ.ಕ ಜಿಲ್ಲೆ-574259