ನಮ್ಮ ಪ್ರಕೃತಿಯೊಂದು ನಿತ್ಯ ನಿರಂತರ ಅದ್ಭುತ. ನಿತ್ಯ ಸಾವಿರಾರು ಜೀವಿಗಳು ಹುಟ್ಟುತ್ತವೆ. ಸ್ವಲ್ಪ ಸಮಯದಲ್ಲೇ ಅಳಿದು ಹೋಗುತ್ತವೆ. ತಾನು ತನ್ನದು ಎನ್ನುತ್ತಾ ಬದುಕಿದ ಅಸಂಖ್ಯಾತ ಮಂದಿ, ಜಗತ್ತಿನಲ್ಲಿ ತಮ್ಮದೇ ಕೋಟೆ ಕಟ್ಟಿ ಮೆರೆದವರೆಲ್ಲ ಮುಂದೊಂದು ದಿನ ಹೇಳ ಹೆಸರಿಲ್ಲದಂತೆ ಅಳಿದರು. ಮಾತ್ರವಲ್ಲ ಸಮಾಜದ ನೆನಪಿನಾಳದಿಂದ ಮರೆಯಾದರು. ಆದರೆ ಸರ್ವೆಜನ ಸುಖಿನೋಭವಂತು ಎಂದ ಸಂತರು, ಮಹಾತ್ಮರು, ಸುಧಾರಕರು ಸರಳವಾಗಿ ಬದುಕಿದರು ಮಾತ್ರವಲ್ಲ ಇಂದಿಗೂ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯಾಗಿದ್ದಾರೆ. ಈ ಜಗತ್ತು ಅಂತ ವ್ಯಕ್ತಿತ್ವಗಳು ತಮ್ಮ ನಡೆ, ನುಡಿ, ನಡೆದ ದಾರಿಯ ಮೂಲಕ ನಮ್ಮೆಲ್ಲರಿಗೂ ಪ್ರೇರಕರಾಗಿ ಉಳಿದಿದ್ದಾರೆ. ಅಂಥವರಲ್ಲಿ ಮುಂಚೂಣಿಯಲ್ಲಿ ಇರುವವರು, ಯುವಶಕ್ತಿಯನ್ನು ಇಂದಿಗೂ ತಮ್ಮ ಸಿಂಹಗರ್ಜನೆಯ ವೀರವಾಣಿಯಿಂದ ಸದಾ ಎಚ್ಚರಿಸುವ ಶಕ್ತಿಯೆಂದರೆ ಅದು ವೀರಸಂನ್ಯಾಸಿ ಸ್ವಾಮಿ ವಿವೇಕನಂದರು. ಬದುಕಿದ್ದು, ಬರೇ 39 ವರ್ಷವಾದರೂ, ಇಂದಿಗೂ ಅವರ ಚಿಂತನೆಗಳು, ಮಾತುಗಳು, ಯುವಜನತೆಗೆ ನೀಡಿದ ಸ್ಪೂರ್ತಿ ಎಲ್ಲವೂ ಪ್ರಸ್ತುತ. ಅವರ ಜನ್ಮದಿನಾಚರಣೆಯನ್ನು ಬರೇ ಒಂದು ದಿನ ವಿಜೃಂಭಣೆಯಾಗಿ ಆಚರಿಸುವ ಬದಲು, ಅವರ ವಿಚಾರಧಾರೆಗಳನ್ನು ಅನುಸರಿಸಿದರೇ ಈ ದೇಶದ ಬದಲಾವಣೆ ಸಾಧ್ಯ.
ಬಾಲಕ ನರೇಂದ್ರ ದತ್ತ ಸ್ವಾಮಿ ವಿವೇಕಾನಂದರಾದ ಹೆಜ್ಜೆಗುರುತುಗಳು:
12-01-1863 ಇತಿಹಾಸ ಎಂದೂ ಮರೆಯಲಾರದ ದಿನ. ಅಂದು ಭಾರತೀಯ ಸನಾತನ ಸಂಸ್ಕೃತಿಯ ಪುನರುತ್ಥಾನದ ಹರಿಕಾರ, ಅಪ್ರತಿಮ ವಾಗ್ಮಿ, ಅನುಪಮ ಮಾನವತಾವಾದಿ, ಸ್ಪೂರ್ತಿಯ ಚಿಲುಮೆಯಾದ ಸ್ವಾಮಿ ವಿವೇಕಾನಂದರು ಹುಟ್ಟಿದ ದಿನ. ಕಲ್ಕತ್ತಾದಲ್ಲಿ ವಿಶ್ವನಾಥ ದತ್ತ ಮತ್ತು ಭುವನೇಶ್ವರಿ ದೇವಿಯ ಪುತ್ರನಾಗಿ ಜನಿಸಿದ ಸ್ವಾಮಿ ವಿವೇಕಾನಂದರ ಪೂರ್ವಾಶ್ರಮದ ಹೆಸರು ನರೇಂದ್ರದತ್ತ. ನಂತರ ಅಲ್ಲೇ ವಿವಿಧ ಹಂತದ ಶಿಕ್ಷಣಗಳನ್ನು ಪೂರೈಸುವ ಜೊತೆಗೆ ಕಲ್ಕತ್ತೆಯ ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ತತ್ತ್ವಶಾಸ ಅಧ್ಯಯನ ಮಾಡಿದರು. ನಂತರ ಶ್ರೀರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ ’ವಿವೇಕಾನಂದ’ರು ಆಧ್ಯಾತ್ಮದ ಬಗ್ಗೆ ತಿಳಿದುಕೊಂಡರಲ್ಲದೇ, ರಾಮಕೃಷ್ಣ ಮಠವನನ್ನು ಸ್ಥಾಪಿಸಿ, ಆ ಮೂಲಕ ಲಕ್ಷಾಂತರ ಅನಾಥರಿಗೆ, ಅಶಕ್ತರಿಗೆ, ಕಲಿಯುವ ಹಂಬಲವುಳ್ಳವರಿಗೆ ದಾರಿದೀಪವಾದರು. 1863ರಲ್ಲಿ ಅಮೆರಿಕಾದ ಷಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣ ಭಾರತದ ಬಗ್ಗೆ ಜಾಗತಿಕ ಮಟ್ಟದಲ್ಲಿ ಇದ್ದ ದೃಷ್ಟಿಕೋನವನ್ನು ಬದಲಾಯಿಸಿತು. ಜಾಗತಿಕವಾಗಿ ಹಾಗೂ ದೇಶದ ಒಳಗಡೆ ಹಲವು ಭಾಷಣಗಳನ್ನು ಮಾಡಿದ ಅವರು, ಜೊತೆಗೆ ಸಮಾಜದ ಎಲ್ಲ ಜನರ ಏಳಿಗೆಗಾಗಿ ಸ್ವತ: ಪ್ರಯತ್ನಿಸಿದರು. ಇಂಥ ಮಹಾನ್ ಸಾಧಕ 1902 ಜುಲೈ 4ರಂದು ಪಶ್ಚಿಮ ಬಂಗಾಳದ ಬೇಲೂರು ಮಠದಲ್ಲಿ ತನ್ನ ದೇಹವನ್ನು ತ್ಯಜಿಸಿದರು. ರಾಜ ಯೋಗ, ಕರ್ಮ ಯೋಗ, ಭಕ್ತಿ ಯೋಗ, ಜ್ಞಾನ ಯೋಗ, ಮೈ ಮಾಸ್ಟರ್, ಲೆಕ್ಚರ್ಸ್ -ಮ್ ಕೊಲೊಂಬೊ ಟು ಅಲ್ಮೊರಾ ಮುಂತಾದ ಅದ್ಬುತ ಸಾಹಿತ್ಯಗಳನ್ನು ನೀಡಿದ ವಿವೇಕಾನಂದರು ಶಾಶ್ವತವಾಗಿ ಭಾರತೀಯರ ಹೃದಯದಲ್ಲಿ ನೆಲೆ ನಿಂತರು.
ಅವರು ಚಿಂತಿಸದ ವಿಷಯವಿಲ್ಲ, ಹೇಳದ ಮಾತಿಲ್ಲ:
ಭಾರತವನ್ನು ಪ್ರಭಾವಿಸಿದ ಸ್ವಾಮಿ ವಿವೇಕಾನಂದರು ಕಾವಿ ಧರಿಸಿದ ಸಂತ. ಆದರೆ ಸಣ್ಣ ವಯಸ್ಸಿನಲ್ಲಿಯೇ ಭಾರತದ ಸಮಸ್ಯೆಗಳ ಬಗ್ಗೆ ಚಿಂತಿಸಿದ, ಅದನ್ನು ಸರಿಪಡಿಸಲು ಪ್ರಯತ್ನಿಸಿದರು. ದೇಶದ ಮೂಲೆ ಮೂಲೆಗಳಲ್ಲಿ ನಡೆದಾಡಿದ ಅವರು, ಸಮಾಜದ ಕಟ್ಟಕಡೆಯ ವ್ಯಕ್ತಿಯ ಪರಿಸ್ಥಿತಿಯನ್ನು ಅರಿತರು. ಭಾರತಕ್ಕೆ ಸ್ವಾತಂತ್ರ್ಯದ ಅನಿವಾರ್ಯತೆ, ದೇಶಪ್ರೇಮದ ಅದಮ್ಯ ಚಿಂತನೆ, ಭಾರತೀಯ ಸಮಾಜದ ವಿವಿಧ ಸಮಸ್ಯೆಗಳು ಹಾಗೂ ಅದಕ್ಕೆ ಕಾರಣಗಳು, ಹಿಂದೂಧರ್ಮದ ಮಹತ್ವ, ಬಡತನ, ಹಸಿವು, ಶಿಕ್ಷಣವಿಲ್ಲದೇ ಬಡವಾಗಿರುವ ಜನಸಮೂಹ, ಮಹಿಳಾ ಸಬಲೀಕರಣದ ಅಗತ್ಯತೆ, ಕೃಷಿ ಕೇತ್ರದಲ್ಲಾಗ ಬೇಕಾದ ಏಳಿಗೆ, ಸ್ಪಷ್ಟ ಗುರಿಯಲ್ಲದೇ, ಗುರುವಿಲ್ಲದೇ ಕುರಿಮಂದೆಯಂತೆ ಜೀವನದಲ್ಲಿ ಸಾಗುತ್ತಿರುವ ಯುವಜನರ ಗುಂಪನ್ನು ಅರ್ಥ ಮಾಡಿಕೊಂಡ ಅವರು ಸಮಾಜದ ಈ ಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸಿದರು. ಏಳಿ, ಏದ್ದೇಳಿ. ಬದುಕಿನಲ್ಲಿ ಕಾರ್ಯೋನ್ಮುಖರಾಗಿ. ನೀವು ಈ ಜಗತ್ತಿಗೆ ಬಂದ ಮೇಲೆ ಏನಾದರೂ ಗುರುತನ್ನು ಬಿಟ್ಟು ಹೋಗಿ. ಅದಿಲ್ಲದಿದ್ದರೇ ನಿಮಗೂ ಮರಕಲ್ಲುಗಳಿಗೂ ಏನು ವ್ಯತ್ಯಾಸ? ನೀವು ಬದಲಾಗಿ. ನಿನ್ನ ಭವಿಷ್ಯದ ಶಿಲ್ಪಿ ನೀನೇ. ನಿನ್ನಿಂದ ಮಾತ್ರ ಉತ್ತಮ ಸಮಾಜವನ್ನು ನಿರ್ಮಾಣ ಮಾಡಬಹುದು ಎಂದು ಕರೆ ನೀಡಿದ ಸ್ವಾಮಿ ವಿವೇಕನಂದರು ಅದಕ್ಕೋಸ್ಕರ ಭಾರತದ ಯುವಜನರ ಮೂಲಕ ದೇಶವನ್ನು ಬದಲಾಯಿಸಲು ಪ್ರಯತ್ನಿಸಿದರು.
ಇಂದಿನ ನವಭಾರತದ ’ಪ್ರಜಾಪ್ರಭುತ್ವ ಮೌಲ್ಯ’ಗಳ ಕುರಿತು ಅಂದೇ ಚಿಂತಿಸಿದ್ದ ಹರಿಕಾರ:
ಇಂದು ನಾವು ಅಳವಡಿಸಿಕೊಂಡಿರುವ ಪ್ರಜಾಪ್ರಭುತ್ವವೆಂದರೆ ಬರೇ ಪ್ರಜೆಗಳ ಅಡಳಿತವಲ್ಲ. ಅದೊಂದು ಸಮಾಜದ ಪ್ರತಿಯೊಬ್ಬರನ್ನು ಒಳಗೊಂಡ, ಪ್ರತಿಯೊಬ್ಬರ ಏಳಿಗೆಗೆ ಶ್ರಮಿಸುವ, ಪ್ರತಿಯೊಬ್ಬರ ನೋವಿಗೆ, ಸಮಸ್ಯೆಗಳಿಗೆ ಧ್ವನಿಯಾಗುವ ಮೌಲ್ಯ. ಇಂದು ಪ್ರಜಾಪ್ರಭುತ್ವದ ಹೊಸ ರೂಪವಾಗಿ ಪ್ರಜಾಸತ್ತಾತ್ಮಕ ಅಡಳಿತ ಶೈಲಿಯನ್ನು ಭಾರತ ಸೇರಿದಂತೆ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಕಾಣಬಹುದಾಗಿದೆ. ಪ್ರಜಾಸತ್ತಾತ್ಮಕ ಅಡಳಿತದ ಕಲ್ಪನೆಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಸಹಾ ತಲುಪುವುದು ಸರಕಾರದ ಕರ್ತವ್ಯವಾಗಿದೆ. ಆ ಮೂಲಕ ಸಮಾಜದ ಎಲ್ಲರನ್ನು ಮುಖ್ಯವಾಹಿನಿಗೆ ತಂದು ಅಭಿವೃದ್ದಿಯನ್ನು ಸಾಽಸಬೇಕಾದ ಅನಿವಾರ್ಯತೆ ಇಂದಿನ ಪ್ರಜಾಪ್ರಭುತ್ವ ಸರಕಾರಗಳ ಆಶಯವು ಆಗಿದೆ. ಇಂಥ ಕನಸನ್ನು ಈ ದೇಶ ಕಂಡ ವೀರಸಂತ ಸ್ವಾಮಿ ವಿವೇಕಾನಂದರು ನೂರು ವರ್ಷಗಳ ಹಿಂದೆಯೇ ಕಂಡಿದ್ದರು, ಮಾತ್ರವಲ್ಲ ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿದ್ದರು. ಲಕ್ಷಾಂತರ ಜನರು ಹಸಿವು, ಅಜ್ಞಾನಗಳಲ್ಲಿ ಉಳಿದಿರುವವರೆಗೂ ಅವರ ವೆಚ್ಚದಲ್ಲಿ ವಿದ್ಯಾವಂತರಾಗಿಯೂ, ಅವರೆಡೆಗೆ ಸ್ವಲ್ಪವೂ ಗಮನಕೊಡದಿರುವ ಪ್ರತಿಯೊಬ್ಬ ವಿದ್ಯಾವಂತನನ್ನೂ ನಾನು ದ್ರೋಹಿ ಎಂದು ಭಾವಿಸುತ್ತೇನೆ ಎಂದ ಅವರು ಆ ಮನಸ್ಥಿತಿಯನ್ನು ಬದಲಾಯಿಸಲು ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಲು ಶ್ರಮಿಸಿದರು.
ಯುವಜನರ ಬದುಕಿನ ಸ್ಪೂರ್ತಿಯ ಸೆಲೆಯೇ ವಿವೇಕಾನಂದರು:
ಸ್ವಾಮಿ ವಿವೇಕಾನಂದರೆಂದರೇ ಬಡಿದೆಬ್ಬಿಸುವ ಧ್ವನಿ! ಮಲಗಿದ್ದವರನ್ನೂ ಎಬ್ಬಿಸಿ ತನ್ನೆಡೆಗೆ ಸೆಳೆಯುವ ಧ್ವನಿ. ಅವರ ಕರೆಗೆ ಓಗೊಟ್ಟು ತಮ್ಮ ಜೀವನವನ್ನೆ ಸಮಾಜ ಸೇವೆಗಾಗಿ ಮುಡಿಪಾಗಿಟ್ಟವರು ಹಲವರು. ಮಹಾತ್ಮ ಗಾಂಽಜಿ, ಸುಭಾಷ್ಚಂದ್ರ ಭೋಸ್, ಶ್ರೀಅರವಿಂದರಂತಹ ಮಹಾನುಭಾವರನ್ನು ಸಹಾ ಪ್ರಭಾವಿಸಿದವರು ವಿವೇಕಾನಂದರು. ಇಂದಿಗೂ ಪ್ರಪಂಚದ ಅಸಂಖ್ಯಾತ ಯುವಜನರು ಈ ಕ್ಷಾತ್ರತೇಜದ ಸಂನ್ಯಾಸಿಯ ಸಂದೇಶಗಳಿಗೆ ಮಾರು ಹೋದವರೇ ಹೆಚ್ಚು. ಅವರ ಜೀವನ ಮತ್ತು ಸಂದೇಶಗಳು ನಮ್ಮ ದೇಶವಷ್ಟೇ ಅಲ್ಲ. ಜಗತ್ತಿನಾದ್ಯಂತ ಮಿಲಿಯಾಂತರ ಜನರ ಬದುಕನ್ನು ರೂಪಿಸಿವೆ. ಅದಕ್ಕಾಗಿ 1984ರಿಂದ ಭಾರತ ಸರಕಾರ ಈ ವೀರಸಂತನ ಜನ್ಮದಿನಾಚರಣೆಯನ್ನು ರಾಷ್ಟ್ರೀಯ ಯುವ ದಿನಾಚರಣೆಯನ್ನಾಗಿ ಆಚರಿಸುವುದು ಆ ಮಹಾನ್ ಚೇತನವನ್ನು ಮತ್ತೊಮ್ಮೆ ನೆನಪಿಸಿಕೊಳ್ಳಲು, ಅವರ ವಿಚಾರಧಾರೆಗಳನ್ನು ಮತ್ತೊಮ್ಮೆ ಮನನ ಮಾಡಿಕೊಂಡು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಿಗುವ ಮಹಾದಾವಕಾಶವಾಗಿದೆ. ಆದರೆ ಅದು ಬರೇ ಜನವರಿ 12ರ ಒಂದು ದಿನದ ಸಂಭ್ರಮಕ್ಕೆ ಸೀಮಿತವಾಗದೇ, ಯುವಜನರಿಗೆ ಉತ್ತಮ ಬದುಕನ್ನು ರೂಪಿಸಲು ಸ್ಪೂರ್ತಿಯಾಗುವ ದಿನವಾಗಲಿ. ವಿವೇಕನಂದರು ಅಂದು ಸಾಽಸಿದ ಕಾರ್ಯ, ಮುಂದಿಟ್ಟ ವಿಚಾರಗಳು ಬಹುಶ: ಅಂದಿಗಿಂತ ಇಂದು ಹೆಚ್ಚು ಅಗತ್ಯ ಮತ್ತು ಸಮಯೋಜಿತ. ಅವರ ದಿಕ್ಪತಗಳನ್ನು ಅನುಕರಿಸೋಣ. ನಾನು ಸ್ಮಶಾನಸದೃಶ ಲೋಕದಲ್ಲಿ ಬದುಕಿರಲು ಇಚ್ಚಿಸುವುದಿಲ್ಲ. ಜನರ ಪ್ರಪಂಚದಲ್ಲಿ ನಾನೂ ಒಬ್ಬ ಮನುಷ್ಯನಾಗಿರಲು ಬಯಸುತ್ತೇನೆ ಎಂದ ವಿವೇಕಾನಂದರ ಭಾರತವನ್ನು ಜಗತ್ತಿನ ಮಾನವೀಯತೆ ತುಂಬಿ ತುಳುಕುವ ಭವ್ಯ ತೋಟವನ್ನಾಗಿ ನಿರ್ಮಿಸೋಣ. ಅದೇ ಆ ಸಿಡಿಲಮರಿಗೆ ಈ ಭಾರತದ 60%ರಷ್ಟು ಯುವಜನರಾದ ನಾವು ಸಲ್ಲಿಸುವ ದೊಡ್ಡ ಕೊಡುಗೆ… ಅದನ್ನು ಮಾಡುವ ಪ್ರಯತ್ನವನ್ನು ನಿಸ್ವಾರ್ಥವಾಗಿ ನಾವು ಮಾಡುವ ಎನ್ನುವ ಆಶಯದೊಂದಿಗೆ…
ಮತ್ತೊಮ್ಮೆ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಹಾಗೂ ರಾಷ್ಟ್ರೀಯ ಯುವದಿನದ ಶುಭಾಶಯಗಳು…