ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ವಿಆರ್‌ಡಿಎಫ್‌ – ಡಿಸಿಆರ್‌ ಗೇರು ತೋಟಕ್ಕೆ ಡ್ರೋನ್ ಪ್ರಾತ್ಯಕ್ಷಿಕೆ

0

ಗೇರು ತೋಟದಲ್ಲಿ ಅಧಿಕ ಇಳುವರಿ ನಿರೀಕ್ಷಿಸಬಹುದು – ಡಾ. ಜೆ. ದಿನಕರ ಅಡಿಗ
ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ನಡೆದ ಉತ್ತಮ ಕಾರ್ಯಕ್ರಮ – ಕಡಮಜಲು ಸುಭಾಸ್‌ ರೈ

ಪುತ್ತೂರು: ವಿಜಯ ಗ್ರಾಮೀಣ ಅಭಿವೃದ್ದಿ ಪ್ರತಿಷ್ಠಾನ (ರಿ.) ಮಂಗಳೂರು, ಕೆದಂಬಾಡಿ ಗ್ರಾಮ ಸಮಿತಿ ಇದರ ಆಶ್ರಯದಲ್ಲಿ ಗೇರು ಸಂಶೋಧನಾ ನಿರ್ದೇಶನಾಲಯ ಪುತ್ತೂರು ಇದರ ಸಹಭಾಗಿತ್ವದೊಂದಿಗೆ ಗೇರು ಕೃಷಿಯಲ್ಲಿ ಕೀಟ ನಿಯಂತ್ರಣ ಬಗ್ಗೆ ಮಾಹಿತಿ ಮತ್ತು ಗೇರು ತೋಟಕ್ಕೆ ಡ್ರೋನ್ ಮೂಲಕ ಲಘು ಪೋಷಕಾಂಶಗಳ ಸಿಂಪಡಣೆ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಕೆದಂಬಾಡಿಯ ಸಿರಿ ಕಡಮಜಲು ಕೃಷಿ ಕ್ಷೇತ್ರದಲ್ಲಿ ನಡೆಯಿತು. ICAR-DCR ಪುತ್ತೂರು ಇದರ ನಿರ್ದೇಶಕ ಡಾ. ಜೆ. ದಿನಕರ ಅಡಿಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ʻಮೊತ್ತ ಮೊದಲ ಬಾರಿಗೆ ನಾವು ಗೇರು ಹೂವಿಗೆ ನೇರವಾಗಿ ವಿಜ್ಞಾನಿಗಳು ಸಂಶೋಧಿಸಿದ ಲಘು ಪೋಷಕಾಂಶಗಳನ್ನು ಸಿಂಪಡಣೆ ಮಾಡುತ್ತಿದ್ದು, ಇದರಿಂದ ಗೇರು ತೋಟದಲ್ಲಿ ಹೆಚ್ಚಿನ ಇಳುವರಿಯನ್ನು ಪಡೆಯಬಹುದು. ಅಲ್ಲದೆ ರೋಗ ನಿಯಂತ್ರಣವನ್ನು ಕೂಡ ಸುಲಭವಾಗಿ ಮಾಡಬಹುದು. ವೈಜ್ಞಾನಿಕ ಗೇರು ಕೃಷಿಕ ಸುಭಾಸ್‌ ರೈಯವರ ಕೋರಿಕೆ ಮೇರೆಗೆ ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ಆಗುತ್ತಿದೆʼ ಎಂದು ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕ್ ಆಫ್ ಬರೋಡದ ಕುಂಬ್ರ ಶಾಖೆಯ ಅಧಿಕಾರಿ ಧನಂಜಯ ರೈ ವಹಿಸಿದ್ದರು. ಡಿಸಿಆರ್‌ ವಿಜ್ಞಾನಿಗಳಾದ ಡಾ. ಟಿ.ಎಸ್. ರವಿಪ್ರಸಾದ್, ಡಾ. ಮಂಜುನಾಥ ಕೆ., ಡಾ. ಮಂಜೇಶ್, ಡಾ. ಭಾಗ್ಯ ಎಚ್.ಪಿ, ಡಾ. ಅಶ್ವತಿ ಸಿ. ಗೇರು ತೋಟಕ್ಕೆ ಬರುವ ವಿವಿಧ ಕೀಟ ಬಾಧೆಗಳ ನಿಯಂತ್ರಣ , ಪೋಷಕಾಂಶಗಳ ನಿರ್ವಹಣೆ ಮತ್ತು ಯಂತ್ರೋಪಕರಣಗಳ ಬಳಕೆ ಬಗ್ಗೆ ಮಾಹಿತಿಯನ್ನು ನೀಡಿದರು.


ವೇದಿಕೆಯಲ್ಲಿ ವಿಜಯ ಗ್ರಾಮೀಣ ಅಭಿವೃದ್ದಿ ಪ್ರತಿಷ್ಟಾನ(ರಿ) ಮಂಗಳೂರು ಇದರ ಆಡಳಿತ ಮಂಡಳಿ ನಿರ್ದೇಶಕರಾದ ಜಯಪ್ರಕಾಶ ರೈ ನೂಜಿಬೈಲು, ICAR ಕಾಸರಗೋಡು ಇದರ ನಿರ್ದೇಶಕಿ ಡಾ. ಆರತಿ ಉಪಸ್ಥಿತರಿದ್ದರು. ವೈಜ್ಞಾನಿಕ ಗೇರು ಕೃಷಿಕರಾದ ಕಡಮಜಲು ಸುಭಾಷ್ ರೈ ಪ್ರಾಸ್ತವಿಕ ಮಾತುಗಳನ್ನಾಡಿ ʻಈ ಹಿಂದೆ ನಡೆದಿರುವ ಅನೇಕ ಕೃಷಿ ಮಾಹಿತಿ ಕಾರ್ಯಕ್ರಮಗಳಲ್ಲಿ ʻಗೇರು ಕೃಷಿಗೆ ಲಘು ಪೋಷಕಾಂಶಗಳ ಸಿಂಪಡಣೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಅತ್ಯುತ್ತಮ ಕಾರ್ಯಕ್ರಮವಾಗಿದೆʼ ಎಂದರು. ವಿಜಯ ಗ್ರಾಮೀಣ ಅಭಿವೃದ್ದಿ ಪ್ರತಿಷ್ಠಾನ ಕೆದಂಬಾಡಿ ಗ್ರಾಮ ಸಮಿತಿ ಕಾರ್ಯದರ್ಶಿ ಕೃಷ್ಣಕುಮಾರ್ ಇದ್ಯಪೆ, ಕೋಶಾಧಿಕಾರಿ ಬಾಲಕೃಷ್ಣ ಚೌಟ ಪಟ್ಟೆತ್ತಡ್ಕ, ಸದಸ್ಯರಾದ ರವೀಂದ್ರನಾಥ ರೈ ಕೆಯ್ಯೂರು, ಕರುಣಾಕರ ರೈ ಕೋರಂಗ, ಕೆಯ್ಯೂರು ಗ್ರಾಮ ಸಮಿತಿಯ ವಿಶ್ವನಾಥ ಪೂಜಾರಿ ಕೆಂಗುಡೇಲು, ಎ.ಕೆ. ಜಯರಾಮ ರೈ ಅತಿಥಿಗಳಿಗೆ ಹೂ ಗುಚ್ಚ ನೀಡಿ ಗೌರವಿಸಿದರು.


ವಿಜಯ ಗ್ರಾಮೀಣ ಅಭಿವೃದ್ದಿ ಪ್ರತಿಷ್ಠಾನ ಕೆದಂಬಾಡಿ ಗ್ರಾಮ ಸಮಿತಿ ಅಧ್ಯಕ್ಷ ವಿಜಯ ಕುಮಾರ ರೈ ಕೋರಂಗ ಸ್ವಾಗತಿಸಿ, ವಂದಿಸಿದರು. ನಂತರ ಕಡಮಜಲಿನ ಸ್ವೇದ ಬಿಂದು ಗೇರು ತೋಟದಲ್ಲಿ ಡ್ರೋನ್ ಮೂಲಕ ಲಘು ಪೋಷಕಾಂಶಗಳ ಸಿಂಪಡಣೆ ಪ್ರಾತ್ಯಕ್ಷಿಕೆ ನಡೆಯಿತು.

LEAVE A REPLY

Please enter your comment!
Please enter your name here