ಜಾಗ ಕೊಡದವರಿಗೆ ನಾವ್ಯಾಕೆ ಕಚೇರಿ ಕೊಡಬೇಕು? – 34 ನೆಕ್ಕಿಲಾಡಿ ಸಾಮಾನ್ಯ ಸಭೆಯಲ್ಲಿ ವಿಎ ಕಚೇರಿ ಬಗ್ಗೆ ಚರ್ಚೆ

0

ಉಪ್ಪಿನಂಗಡಿ: ಕಂದಾಯ ಇಲಾಖೆಯ ಭೂಮಿಯನ್ನು ಗ್ರಾ.ಪಂ.ಗೆ ಹಸ್ತಾಂತರಿಸಿದರೆ, ಗ್ರಾಮ ಕರಣಿಕರ ಕಚೇರಿಗೆ ಹಾಗೂ ಗ್ರಾ.ಪಂ. ಉಪಯೋಗಕ್ಕೆ ಕಟ್ಟಡವನ್ನು ನಿರ್ಮಿಸುತ್ತೇವೆ ಎಂದು ಗ್ರಾ.ಪಂ. ಕಂದಾಯ ಇಲಾಖೆಗೆ ಪತ್ರ ಬರೆದಿದ್ದರೂ, ಕಂದಾಯ ಇಲಾಖೆಯಿಂದ ಯಾವುದೇ ಉತ್ತರವಿಲ್ಲ. ಹಾಗಾದರೆ ಪಂಚಾಯತ್ ಕಟ್ಟಡದಲ್ಲಿ ಗ್ರಾಮ ಕರಣಿಕರ ಕಚೇರಿಗೆ ನಾವ್ಯಾಕೆ ಅವಕಾಶ ಕೊಡಬೇಕು ಎಂಬ ಪ್ರಶ್ನೆ 34 ನೆಕ್ಕಿಲಾಡಿ ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ಕೇಳಿ ಬಂತು.


ಗ್ರಾ.ಪಂ. ಅಧ್ಯಕ್ಷೆ ಸುಜಾತ ರೈ ಅಲಿಮಾರ್ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜ.12ರಂದು ನಡೆದ ಸಾಮಾನ್ಯ ಸಭೆಯಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸತೀಶ ಕೆ. ಬಂಗೇರ ಅವರು ಡಿಸೆಂಬರ್ ತಿಂಗಳ ಜಮಾ ಖರ್ಚಿನ ಬಗ್ಗೆ ವಿವರ ನೀಡುತ್ತಿದ್ದಾಗ, ಸದಸ್ಯ ಪ್ರಶಾಂತ್ ಎನ್. ಮಾತನಾಡಿ, ಕಳೆದ ಬಾರಿಯ ಖರ್ಚಿನಲ್ಲಿ ಪಂಚಾಯತ್ ಎದುರು ಕಟ್ಟಡಕ್ಕೆ ಶೀಟ್ ಅಳವಡಿಕೆ, ಕಟ್ಟಡದ ಬದಿ ಕಟ್ಟೆ ಕಟ್ಟಿದ ಕೂಲಿ, ಅಂಚೆ ಕಚೇರಿ ಬಳಿ ಶೌಚಾಯಲ ತುರ್ತು ದುರಸ್ತಿಗೆ 7,3೦೦, ಪಂಚಾಯತ್ ಎದುರು ಕಟ್ಟಡಕ್ಕೆ ಸುಣ್ಣ, ಬಣ್ಣ ಬಳಿಯಲು ಸಾಮಗ್ರಿ ಬಿಲ್ಲು ಹಾಗೂ ಕೂಲಿ ಪಾವತಿ 8920, ಪಂಚಾಯತ್ ಎದುರು ಕಟ್ಟಡಕ್ಕೆ ಶೀಟ್ ಖರೀದಿ, ಕಚೇರಿ ಒಳಗಡೆ ರ್‍ಯಾಕ್ ಅಳವಡಿಕೆಗೆ 17,4೦೦ ಹೀಗೆ ಮೂರು ಬಿಲ್ ಮಾಡಿ ಒಟ್ಟು 33,62೦ ರೂ. ಖರ್ಚು ತೋರಿಸಲಾಗಿದೆ. ಇದೇನು ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಪಿಡಿಒ ಸತೀಶ್ ಬಂಗೇರ, ಕೂಲಿ, ಸಾಮಗ್ರಿ ಖರೀದಿ ಹೀಗೆ ಪ್ರತ್ಯೇಕ ಪ್ರತ್ಯೇಕ ಬಿಲ್ ಮಾಡಲಾಗಿದೆ ಎಂದರು. ಆ ಕಟ್ಟಡ ದುರಸ್ತಿ ಮಾಡುತ್ತಿರುವುದು ಯಾಕಾಗಿ ಎಂದು ಪ್ರಶಾಂತ್ ಎನ್. ಮರು ಪ್ರಶ್ನಿಸಿದಾಗ, ಇಲ್ಲಿನ ವಿಎ ಅವರಿಗೆ ಕಚೇರಿ ಇಲ್ಲ. ಈಗ ಗ್ರಾ.ಪಂ. ಸಭಾಂಗಣದ ಒಂದು ಬದಿಯಲ್ಲಿ ಅವರಿಗೆ ವ್ಯವಸ್ಥೆ ಮಾಡಿಕೊಡಲಾಗಿದೆ. ಇದರಿಂದ ಸಭಾಂಗಣದಲ್ಲಿ ಗ್ರಾ.ಪಂ.ನ ಸಭೆಗಳು ನಡೆಯುವಾಗ ತೊಂದರೆಯಾಗುತ್ತದೆ. ಆದ್ದರಿಂದ ವಿಎ ಅವರನ್ನು ಗ್ರಾ.ಪಂ. ಕಚೇರಿಯ ಎದುರಿನ ಕಟ್ಟಡಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದರು. ಆಗ ಪ್ರಶಾಂತ್ ಅವರು ಮಾತನಾಡಿ, ಈ ನಿರ್ಧಾರ ಮಾಡಿದವರು ಯಾರು? ನಮಗೆ ಇದರ ವಿಷಯನೇ ಗೊತ್ತಿಲ್ಲ. ಆ ಕಟ್ಟಡದ ದುರಸ್ತಿ ಮಾಡಲು ನಿರ್ಣಯವಾಗಿದೆಯಾ ಎಂದು ಪ್ರಶ್ನಿಸಿದರು. ಆಗ ಪಿಡಿಒ ಅವರು ಉತ್ತರಿಸಿ, ಅದಕ್ಕೆ 94 ಸಾವಿರ ರೂಪಾಯಿ ಕ್ರಿಯಾಯೋಜನೆ ಕೂಡಾ ತಯಾರಿಸಲಾಗಿದೆ ಎಂದರು. ಈ ಬಗ್ಗೆ ಇನ್ನಷ್ಟು ಚರ್ಚೆ ನಡೆದಾಗ ಪಿಡಿಒ ಅವರು ಕ್ರಿಯಾ ಯೋಜನೆಯ ಪುಸ್ತಕವನ್ನು ತಂದು ತೋರಿಸಿದರು. ಆಗ ಅಲ್ಲಿಗೆ ವಿಎ ಕಚೇರಿಯನ್ನು ಸ್ಥಳಾಂತರಿಸಲು ನಿರ್ಣಯವಾಗಿಲ್ಲ ಎಂದು ಪ್ರಶಾಂತ್ ತಿಳಿಸಿದರಲ್ಲದೆ, ವಿಎ ಅವರಿಗೆ ಆದರ್ಶನಗರ ವಸತಿ ಗೃಹದಲ್ಲಿ ಕಚೇರಿಗೆ ಕೊಠಡಿ ಕೊಡಿ ಎಂದು ನಾವು ಹೇಳಿದ್ದು. ನೆಕ್ಕಿಲಾಡಿಯಲ್ಲಿ ಕಂದಾಯ ಇಲಾಖೆಯ ಜಾಗದಲ್ಲಿ ಈ ಹಿಂದೆ ವಿಎ ಕಚೇರಿ ಇತ್ತು. ಆ ಕಚೇರಿ ಈಗ ನಾದುರಸ್ತಿಯಲ್ಲಿದೆ. ಆದ್ದರಿಂದ ಕಂದಾಯ ಇಲಾಖೆಯವರು ಆ ಜಾಗವನ್ನು ಗ್ರಾ.ಪಂ.ಗೆ ಹಸ್ತಾಂತರಿಸಿದರೆ, ಅದರಲ್ಲಿ ಕಟ್ಟಡ ಕಟ್ಟಿ ಒಂದು ಕೊಠಡಿಯನ್ನು ವಿಎ ಅವರ ಕಚೇರಿಗೂ, ಬಾಕಿ ಉಳಿದ ಕೊಠಡಿಯನ್ನು ಗ್ರಾ.ಪಂ.ನ ಉಪಯೋಗಕ್ಕೂ ಬಳಸುವುದೆಂದು ನಿರ್ಣಯಿಸಿ, 1.19 ಲಕ್ಷ ರೂ.ವನ್ನು ಕ್ರಿಯಾಯೋಜನೆ ತಯಾರಿಸಲಾಗಿತ್ತಲ್ಲದೆ, ನಮ್ಮ ಯೋಜನೆಯನ್ನು ವಿವರಿಸಿ ಜಾಗ ಹಸ್ತಾಂತರಕ್ಕೆ ಕಂದಾಯ ಇಲಾಖೆಗೆ ಪತ್ರ ಬರೆಲಾಗಿತ್ತು. ಆದರೆ ಅವರಿಂದ ಯಾವುದೇ ಉತ್ತರವಿಲ್ಲ. ಅವರು ನಮಗೆ ಜಾಗ ಹಸ್ತಾಂತರ ಮಾಡುವುದಿಲ್ಲವಾದರೆ, ನಾವ್ಯಾಕೆ ವಿಎ ಅವರಿಗೆ ಕಚೇರಿ ಕೊಡಲಿ ಎಂದು ಪ್ರಶ್ನಿಸಿದರು ಹಾಗೂ ಪಂಚಾಯತ್ ಎದುರಿನ ಕಟ್ಟಡಕ್ಕೆ ಪ್ರತ್ಯೇಕ ಪ್ರತ್ಯೇಕ ಬಿಲ್ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಆಗ ಪಿಡಿಒ ಅವರು ಹಾಗಾದರೆ ಇನ್ನು ಮುಂದೆ ಕ್ರಿಯಾಯೋಜನೆಯಲ್ಲಿ ಇಡದೇ ಯಾವುದೇ ಕಾಮಗಾರಿಗೆ ಬಿಲ್ ಪಾಸ್ ಮಾಡುವುದಿಲ್ಲ ಎಂದರು. ಈ ಬಗ್ಗೆ ಚರ್ಚೆಗಳು ನಡೆದು ಕೊನೆಗೇ, ಕಂದಾಯ ಇಲಾಖೆಯ ಜಾಗದಲ್ಲಿರು ವಿಎ ಕಚೇರಿ ದುರಸ್ತಿಗೆ ಇಟ್ಟಿರುವ 1.19 ಲಕ್ಷ ರೂ.ವನ್ನು ಹಾಗೂ ಪಂಚಾಯತ್ ಎದುರಿನ ಕಟ್ಟಡ ದುರಸ್ತಿಗೆ ಇಟ್ಟಿರುವ 94 ಸಾವಿರವನ್ನು ಒಟ್ಟುಗೂಡಿಸಿ, ಗ್ರಂಥಾಲಯಕ್ಕೆ ಅನುದಾನ ಇಡುವ ಬಗ್ಗೆ ತೀರ್ಮಾನವಾಯಿತ್ತಲ್ಲದೆ, ಒಂದೋ ವಿಎ ಕಚೇರಿ ಗ್ರಾ.ಪಂ. ಎದುರಿನ ಕಟ್ಟಡಕ್ಕೆ ಸ್ಥಳಾಂತರಗೊಳ್ಳಬೇಕು. ಇಲ್ಲದಿದ್ದಲ್ಲಿ ಆದರ್ಶನಗರದಲ್ಲಿರುವ ಗ್ರಾ.ಪಂ.ನ ವಸತಿ ಗೃಹಕ್ಕೆ ಸ್ಥಳಾಂತರಗೊಳ್ಳಬೇಕು. ಇಲ್ಲದಿದ್ದಲ್ಲಿ ಕಂದಾಯ ಇಲಾಖೆಯ ಜಾಗದಲ್ಲಿ ಅವರೇ ಕಟ್ಟಡ ನಿರ್ಮಿಸಿ ಅಲ್ಲಿಗೆ ಸ್ಥಳಾಂತರಗೊಳ್ಳಬೇಕೆಂದು ತೀರ್ಮಾನಿಸಲಾಯಿತು.

ಮಕ್ಕಳ ಗ್ರಾಮ ಸಭೆಯನ್ನು ಶಾಂತಿನಗರ ಶಾಲೆಯಲ್ಲಿ ಮಾಡಲು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಅದನ್ನು ಏಕಾಏಕಿ ಗ್ರಾ.ಪಂ.ನಲ್ಲಿ ನಡೆಸುವ ತೀರ್ಮಾನ ತೆಗೆದುಕೊಂಡು ಅದನ್ನು ಅಲ್ಲಿ ನಡೆಸಲಾಗಿದೆ. ಇಲ್ಲಿ ಅಧ್ಯಕ್ಷರು ಉಳಿದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಸದಸ್ಯ ಪ್ರಶಾಂತ್ ಎನ್. ಆರೋಪಿಸಿದರು. ಅದಕ್ಕೆ ಗ್ರಾ.ಪಂ. ಅಧ್ಯಕ್ಷೆ ಸುಜಾತ ರೈ ಅಲಿಮಾರ್ ಅವರು ಸ್ಪಷ್ಟನೆ ನೀಡಿ, ಈ ಬಗ್ಗೆ ಸುತ್ತೋಲೆ ಬಂದಿತ್ತು. ಅಲ್ಲದೇ, ಮಕ್ಕಳು ಗ್ರಾ.ಪಂ.ಗೆ ಬಂದರೆ ಇಲ್ಲಿನ ವ್ಯವಸ್ಥೆಗಳನ್ನು ನೋಡಬಹುದಲ್ವಾ ಎಂಬ ಉದ್ದೇಶದಿಂದ ಗ್ರಾ.ಪಂ.ನಲ್ಲಿ ಮಕ್ಕಳ ಗ್ರಾಮ ಸಭೆ ನಡೆಸಲಾಗಿದೆ. ಇದರ ಹಿಂದೆ ಬೇರಾವ ಉದ್ದೇಶನೂ ಇಲ್ಲ ಎಂದರು. ಬಂದ ಮಕ್ಕಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಿಲ್ಲ ಎಂದು ಪ್ರಶಾಂತ್ ಆರೋಪಿಸಿದರು. ಆಗ ಉತ್ತರಿಸಿದ ಸುಜಾತ ರೈಯವರು ಇಲ್ಲಿ ಮಕ್ಕಳಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲು ಮುಂದಾದಾಗ ಶಿಕ್ಷಕರೇ ಎಲ್ಲರದ್ದೂ ಹೊಟ್ಟೆ ತುಂಬಿದೆ. ಆದ್ದರಿಂದ ಊಟದ ವ್ಯವಸ್ಥೆ ಬೇಡ ಎಂದು ನಿರಾಕರಿಸಿದ್ದರು ಎಂದರು. ಸದಸ್ಯ ವಿಜಯಕುಮಾರ್ ಮಾತನಾಡಿ, ಸಭೆಗೆ ಬಂದವರಿಗೆ ಸರಿಯಾದ ವ್ಯವಸ್ಥೆ ಮಾಡಬೇಕಿತ್ತು ಎಂದರು.
ನೆಕ್ಕಿಲಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಮತ್ತು ಶಿಕ್ಷಣ ಇಲಾಖೆಯ ಅನುದಾನದಲ್ಲಿ ಶೌಚಾಲಯವನ್ನು ನಿರ್ಮಿಸಲಾಗಿದೆ. ಅದು ಇನ್ನೂ ಹಸ್ತಾಂತರವಾಗಿಲ್ಲ. ಅಧಿಕಾರಿಗಳು ಎನ್‌ಒಸಿನೂ ನೀಡಿಲ್ಲ. ಆದರೂ ಅಷ್ಟು ತರಾತುರಿಯಾಗಿ ಇದರ ಉದ್ಘಾಟನೆ ಯಾಕೆ ಮಾಡಿದ್ದು ಎಂದು ಪ್ರಶಾಂತ್ ಎನ್. ಪ್ರಶ್ನಿಸಿದರು. ಆಗ ಅಧ್ಯಕ್ಷೆ ಸುಜಾತ ರೈ ಮಾತನಾಡಿ, ಇದರ ಉದ್ಘಾಟನೆಗೆ ದಿನಾಂಕ ನಿಗದಿ ಮಾಡಿದ್ದು ಪಂಚಾಯತ್ ಅಲ್ಲ. ಅದು ಶಾಲೆಯ ಮುಖ್ಯ ಶಿಕ್ಷಕಿಯವರು ಮಾಡಿದ್ದು. ನನ್ನನ್ನು ಕರೆದಿದ್ದರು ನಾನು ಹೋಗಿದ್ದೆ ಎಂದರು. ಆಗ ಪ್ರಶಾಂತ್ ಎನ್. ಮಾತನಾಡಿ, ಇದರ ಕಾಮಗಾರಿಯ ಬಹುಪಾಲು ನಡೆದದ್ದು ನರೇಗಾದಿಂದ ಆದ್ದರಿಂದ ಇದರಲ್ಲಿ ಗ್ರಾ.ಪಂ.ನ ಪಾಲು ಹೆಚ್ಚಿದೆ. ಇದರ ಉದ್ಘಾಟನೆಗೆ ಗ್ರಾ.ಪಂ. ದಿನ ನಿಗದಿ ಮಾಡಬೇಕಿತ್ತು ಎಂದರಲ್ಲದೆ, ಇದೇ ರೀತಿ ಶಾಂತಿನಗರದ ಶಾಲೆಯಲ್ಲೂ ಶೌಚಾಲಯ ಕಟ್ಟಲಾಗಿದೆ. ಆದರೆ ಅಲ್ಲಿ ಉದ್ಘಾಟನೆ ಆಗಿಲ್ಲ. ಗ್ರಾ.ಪಂ. ದಿನಾಂಕ ನಿಗದಿಗೊಳಿಸಿ ಈ ಎರಡೂ ಕಾರ್ಯಕ್ರಮವನ್ನು ಶಾಸಕರನ್ನು ಒಳ್ಳೆಯ ಕಾರ್ಯಕ್ರಮ ಮಾಡಬಹುದಿತ್ತು ಎಂದರು. ಹಾಗೂ ಈ ಕಾರ್ಯಕ್ರಮಕ್ಕೆ ಸದಸ್ಯರನ್ನೇಕೆ ಕರೆದಿಲ್ಲ ಎಂದು ಪಿಡಿಒ ಅವರನ್ನು ಪ್ರಶ್ನಿಸಿದರು. ಆಗ ಪಿಡಿಒ ಅವರು ಇದು ಗ್ರಾ.ಪಂ.ನಲ್ಲಿ ನಿರ್ಣಯ ಆದ ಕಾರ್ಯಕ್ರಮವಲ್ಲ. ಹಾಗಾಗಿ ಕರೆದಿಲ್ಲ ಎಂದರು.
ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಡಿ., ಸದಸ್ಯರಾದ ವೇದಾವತಿ, ತುಳಸಿ, ಹರೀಶ ಕೆ., ಸ್ವಪ್ನ, ಎ.ರತ್ನಾವತಿ, ಗೀತಾ ಉಪಸ್ಥಿತರಿದ್ದು, ಚರ್ಚೆಯಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here