ಉಪ್ಪಿನಂಗಡಿ:ಚರಂಡಿ, ಪುಟ್‌ಫಾತ್ ಒತ್ತುವರಿ-ಗ್ರಾ.ಪಂ.ನಿಂದ ಕಠಿಣ ಕ್ರಮದ ಎಚ್ಚರಿಕೆ

0

ಉಪ್ಪಿನಂಗಡಿ: ವ್ಯವಹಾರಿಕ ಕೇಂದ್ರವಾಗಿ ಬೆಳೆಯುತ್ತಿರುವ ಉಪ್ಪಿನಂಗಡಿ ಪೇಟೆಯ ರಸ್ತೆ ಮಾರ್ಜಿನ್ ಗಳನ್ನು ಅತಿಕ್ರಮಿಸುವ ಕೃತ್ಯಗಳು ನಡೆಯುತ್ತಿರುವುದರಿಂದ ರಸ್ತೆಯಲ್ಲಿ ನಡೆದಾಡಲೂ ಕಷ್ಟಕರವಾಗಿದೆ ಎಂದು ದೂರುಗಳು ಬರುತ್ತಿವೆ. ಆದ್ದರಿಂದ ಒತ್ತುವರಿ ಮಾಡಿಕೊಂಡಿರುವ ಚರಂಡಿ, ಪುಟ್‌ಪಾತ್‌ಗಳನ್ನು ತೆರವು ಮಾಡಬೇಕು. ಇದಲ್ಲದಿದ್ದಲ್ಲಿ ಗ್ರಾ.ಪಂ. ಕಠಿಣ ಕ್ರಮಕ್ಕೆ ಮುಂದಾಗಲಿದೆ ಎಂದು ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ ತಿಳಿಸಿದ್ದಾರೆ.


ಉಪ್ಪಿನಂಗಡಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆಯೊಡ್ಡುವ ಕೃತ್ಯದ ವಿರುದ್ಧ ಪಂಚಾಯತ್ ಆಡಳಿತ ಕಠಿಣ ಕ್ರಮ ತೆಗೆದುಕೊಳ್ಳಲಿದೆ. ವರ್ತಕರು ಹಾಗೂ ಕಟ್ಟಡದ ಮಾಲಕರು ಸುಗಮ ಸಂಚಾರಕ್ಕೆ ಪಂಚಾಯತ್ ಆಡಳಿತದೊಂದಿಗೆ ಕೈ ಜೋಡಿಸಬೇಕು ಎಂದರು.


ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವು ಪರವಾನಿಗೆ ರಹಿತ ಕಟ್ಟಡಗಳನ್ನು ನಿರ್ಮಿಸುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಅಂತಹ ನಿರ್ಮಾಣಗಳ ವಿರುದ್ಧವೂ ಪಂಚಾಯತ್ ಆಡಳಿತ ಸೂಕ್ತ ಕ್ರಮ ಜರಗಿಸುವುದು. ಪೇಟೆಯ ರಸ್ತೆಗಳಲ್ಲಿ ಪಂಚಾಯತ್ ನಿಗದಿ ಪಡಿಸಿದ ಸ್ಥಳದಲ್ಲಿ ಪಾರ್ಕಿಂಗ್ ಮಾಡುವುದು, ನಿಗದಿತ ಅವಧಿಯಲ್ಲಿಯೇ ಸಾಮಾನು ಸರಂಜಾಮುಗಳನ್ನು ವಾಹನಗಳಿಂದ ಇಳಿಸುವುದು , ಈ ಮೂಲಕ ಸುಗಮ ವಾಹನ ಸಂಚಾರಕ್ಕೆ ಸಹಕರಿಸಬೇಕೆಂದು ವಿನಂತಿಸಿದ ಅವರು, ನಿಯಮ ಉಲ್ಲಂಘನೆಗೆ ಸೊತ್ತುಗಳನ್ನು ಮುಟ್ಟುಗೋಲು ಹಾಕುವಂತಹ ಕಠಿಣ ಕ್ರಮ ಜರಗಿಸಲಾಗುವುದು ಹಾಗೂ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ದುರ್ಬಳಕೆಯನ್ನು ಮತ್ತು ಅನಗತ್ಯ ಪೋಲಾಗುವ ಕೃತ್ಯವನ್ನು ತಡೆಗಟ್ಟಬೇಕೆಂದು ವಿನಂತಿಸಿದರಲ್ಲದೆ, ನೀರು ಬಳಸುವ ಹಕ್ಕನ್ನು ಅನುಭವಿಸುವ ಜೊತೆಗೆ ನೀರಿನ ಪೋಲಾಗುವುದನ್ನು ತಡೆಗಟ್ಟುವ , ನೀರು ಬಳಕೆಯ ಬಿಲ್‌ನ್ನು ಸಕಾಲದಲ್ಲಿ ಪಾವತಿಸುವ ಕರ್ತವ್ಯ ಪಾಲಿಸಬೇಕು ಎಂದರು.


ಪತ್ರಿಕಾಗೋಷ್ಠಿಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ವಿದ್ಯಾಲಕ್ಷ್ಮಿ ಪ್ರಭು , ನೀರು ಮತ್ತು ನೈರ್ಮಲ್ಯ ಸಮಿತಿಯ ಅಧ್ಯಕ್ಷ ಕೆ ಅಬ್ದುಲ್ ರಹಿಮಾನ್, ಉಪಾಧ್ಯಕ್ಷ ಧನಂಜಯ್ ಕುಮಾರ್ , ಪಂಚಾಯತ್ ಸದಸ್ಯ ಅಬ್ದುಲ್ ರಶೀದ್, ಕಾರ್ಯದರ್ಶಿ ಗೀತಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here