ನರಿಮೊಗರು, ಕೋಡಿಂಬಾಳ, ಬಜಕೆರೆ, ಎಡಮಂಗಲ, ಕಾಣಿಯೂರು ರೈಲು ನಿಲ್ದಾಣಗಳಲ್ಲಿ ಪ್ಲಾಟ್ ಫಾರ್ಮ್ ಅಭಿವೃದ್ಧಿ

0

ಪುತ್ತೂರು: ಬೆಂಗಳೂರು-ಮಂಗಳೂರು ನಡುವಿನ ರೈಲ್ವೇ ಮಾರ್ಗದಲ್ಲಿ ಮೀಟರ್‌ಗೇಜ್ ಬದಲು ಬ್ರಾಡ್ ಗೇಜ್‌ಗೆ ಹಳಿ ಪರಿವರ್ತನೆಯಾದ ಬಳಿಕ ಗ್ರಾಮೀಣ ಭಾಗದ ಕೆಲ ರೈಲ್ವೇ ನಿಲ್ದಾಣಗಳಲ್ಲಿ ಪ್ಲಾಟ್ ಫಾರ್ಮ್ ಹಳಿಗೆ ಸಮಾನಾಂತರವಾಗಿ ರೈಲು ಏರಲು ಹಾಗೂ ಹತ್ತಲು ಉಂಟಾಗಿದ್ದ ಸಮಸ್ಯೆಗೆ ಶೀಘ್ರ ಮುಕ್ತಿ ಸಿಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಗ್ರಾಮೀಣ ಭಾಗದ ರೈಲು ನಿಲ್ದಾಣಗಳಲ್ಲಿ ಪ್ಲಾಟ್ ಫಾರ್ಮ್ ನ್ನು ಎತ್ತರಿಸುವ ಕಾಮಗಾರಿ ಆರಂಭಗೊಂಡಿದೆ. ಶೀಘ್ರ ಕಾಮಗಾರಿ ಅಂತಿಮಗೊಂಡು ಪ್ರಯಾಣಿಕರಿಗೆ ವರದಾನವಾಗಲಿದೆ.


ಐದು ನಿಲ್ದಾಣಗಳಲ್ಲಿ ಅಭಿವೃದ್ಧಿ:
ದಕ್ಷಿಣ ಕನ್ನಡ ಜಿಲ್ಲೆಯ ಐದು ರೈಲು ನಿಲ್ದಾಣಗಳ ಪ್ಲಾಟ್ ಫಾರ್ಮ್ ಎತ್ತರಿಸಲಾಗುತ್ತದೆ. ಕಡಬ ಸಮೀಪದ ಕೋಡಿಂಬಾಳ, ಬಜಕೆರೆ, ಎಡಮಂಗಲ, ಕಾಣಿಯೂರು, ಪುತ್ತೂರು ತಾಲೂಕಿನ ನರಿಮೊಗರು ರೈಲು ನಿಲ್ದಾಣಗಳ ಪ್ಲಾಟ್ ಫಾರ್ಮ್ ಅನ್ನು ಎತ್ತರಿಸುವ ಕಾಮಗಾರಿ ಆರಂಭಗೊಂಡಿದೆ. ಇಲ್ಲಿನ ಪ್ಲಾಟ್ ಫಾರ್ಮ್ ಗಳನ್ನು ಸುಮಾರು 250 ಮೀಟರ್ ಉದ್ದ ಹಾಗೂ ನಿಯಮಿತ ಎತ್ತರಕ್ಕೆ ಉನ್ನತ ಮಟ್ಟದ ಪ್ಲಾಟ್ ಫಾರ್ಮ್ ಅಭಿವೃದ್ಧಿ ಕೆಲಸ ನಡೆಯಲಿದೆ. ಜತೆಗೆ ಕುಡಿಯುವ ನೀರು, ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಶೆಲ್ಟರ್ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಜತೆಗೆ ರೈಲು ನಿಲ್ದಾಣದಲ್ಲಿ ಅಗತ್ಯ ಅಭಿವೃದ್ಧಿ ಕೆಲಸಗಳನ್ನೂ ನಡೆಸಲಾಗುತ್ತದೆ. ಒಟ್ಟು 4.50 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜೂನ್ ತಿಂಗಳ ಮೊದಲು ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಮೀಟರ್‌ಗೇಜ್‌ನಿಂದ ಬ್ರಾಡ್ ಗೇಜ್‌ಗೆ ರೈಲ್ವೇ ಹಳಿ ಪರಿವರ್ತನೆಯಾದ ಬಳಿಕ ಹಳಿ ಎತ್ತರವಾಗಿ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ಗೆ ಸಮವಾಗಿತ್ತು. ಆದರೆ ರೈಲ್ವೇ ಇಲಾಖೆ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ಏರಿಸುವ ಕೆಲಸ ನಡೆಸದೇ ಪ್ರಯಾಣಿಕರು ರೈಲು ಹತ್ತಲು ಹಾಗೂ ಇಳಿಯಲು ಸಮಸ್ಯೆ ಅನುಭವಿಸಬೇಕಾಗಿತ್ತು, ಜತೆಗೆ ಅಪಾಯಕಾರಿಯಾಗಿಯೂ ಇತ್ತು. ಅಲ್ಲದೇ ಈ ಸಮಸ್ಯೆ ಬಗೆಹರಿಸುವಂತೆ ಹಲವು ವರ್ಷಗಳಿಂದ ಬೇಡಿಕೆಯೂ ಇಲಾಖೆ, ಜನಪ್ರತಿನಿಧಿಗಳಿಗೆ ಸಲ್ಲಿಸಲಾಗಿತ್ತು.

ಸ್ಥಳೀಯರಿಗೆ ಪ್ರಯೋಜನವಾಗಲಿ:
ಮಂಗಳೂರು-ಬೆಂಗಳೂರು ನಡುವೆ ನಿತ್ಯ ಹಲವಾರು ರೈಲುಗಳು ಓಡಾಟ ನಡೆಸುತ್ತಿದ್ದರೂ ಜಿಲ್ಲೆಯ ಸ್ಥಳೀಯರಿಗೆ ಇದರ ಪ್ರಯೋಜನ ಅಷ್ಟಾಗಿ ದೊರೆತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಎಕ್ಸ್ ಪ್ರೆಸ್ ರೈಲುಗಳಿಗೆ ನಿಲುಗಡೆ ನೀಡಲಾಗುತ್ತಿಲ್ಲ. ಮಂಗಳೂರು-ಸುಬ್ರಹ್ಮಣ್ಯ ನಡುವೆ ಬೆಳಗ್ಗೆ, ಮಧ್ಯಾಹ್ನ, ಸಂಜೆ ಲೋಕಲ್ ರೈಲು ಸಂಚರಿಸಬೇಕೆಂಬ ಬೇಡಿಕೆಯೂ ಈಡೇರಿಲ್ಲ. ರೈಲು ನಿಲ್ದಾಣ ಅಭಿವೃದ್ಧಿಯ ಜತೆಗೆ ಜನತೆಯ ಬೇಡಿಕೆಗಳಿಗೂ ಸ್ಪಂದನೆ ಸಿಕ್ಕಿದಲ್ಲಿ ರೈಲು ಸೇವೆ ಸ್ಥಳೀಯರಿಗೂ ಪ್ರಯೋಜನವಾಗಲಿದೆ ಎಂಬುದು ಸ್ಥಳೀಯ ಜನರ ಅಭಿಪ್ರಾಯ.

LEAVE A REPLY

Please enter your comment!
Please enter your name here