




ಉಪ್ಪಿನಂಗಡಿ: ಕಲಿಕೆಯೆಂದರೆ ಕೇವಲ ಪಠ್ಯಪುಸ್ತಕದೊಳಗೆ ಬಂದಿಯಾಗುತ್ತಿದ್ದ ಕಾಲವಿತ್ತು. ತರಗತಿಯ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಪಾಠ, ಮನೆಗೆ ಬಂದು ಹೋಂ ವರ್ಕ್ ಇಷ್ಟೇ ಆಗಿತ್ತು ವಿದ್ಯಾರ್ಥಿ ಜೀವನ. ಕಾಲಕ್ರಮೇಣ ಆಧುನಿಕತೆಗೆ ತೆರೆದುಕೊಂಡಂತೆ ಎಲ್ಲವೂ ಬದಲಾಗತೊಡಗಿದೆ. ಅಲ್ಲೊಂದು ಇಲ್ಲೊಂದು ಖಾಸಗಿ ಶಾಲೆಗಳು ವ್ಯತಿರಿಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದನ್ನು ಬಿಟ್ರೆ ಬೇರೇನೂ ಇರಲಿಲ್ಲ. ಆದರೆ ಕಾಲ ಬದಲಾದಂತೆ ಸರ್ಕಾರಿ ಶಾಲೆಗಳು ಕೂಡಾ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಖಾಸಗಿ ಶಾಲೆಗಳಿಗೂ ಪೈಪೋಟಿ ನೀಡತೊಡಗಿದೆ.



ಇದಕ್ಕೆ ಉದಾಹರಣೆಯಾಗಿ ನಮ್ಮೂರ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾರ ಇಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಕಲಿಕೆಯೊಂದಿಗೆ ವ್ಯಾವಹಾರಿಕ ಜ್ಞಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮೆಟ್ರಿಕ್ ಮೇಳವನ್ನು ಜ.16ರಂದು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಅಧ್ಯಕ್ಷ ಅಝೀಝ್ ಬಿ.ಕೆ.ಅವರು ಸಾಂಕೇತಿಕವಾಗಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಜಯಶ್ರೀ ಎಂ, ಪಂಚಾಯತ್ ಸದಸ್ಯರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷೆ ತೇಜಾವತಿ, ಸದಸ್ಯರಾದ ಪದ್ಮನಾಭ ಶೆಟ್ಟಿ, ಅಝೀಝ್ ಜಿ, ಹಾಗೂ ಪೋಷಕರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಮತ್ತು ಸದಸ್ಯರು, ಊರ ವಿದ್ಯಾಭಿಮಾನಿಗಳು, ಅಧ್ಯಾಪಕ ವೃಂದದವರು, ಅಕ್ಷರ ದಾಸೋಹ ಸಿಬ್ಬಂದಿಗಳು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






ಅತ್ಯುತ್ಸಾಹದಿಂದ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಪೋಷಕರು, ಹಳೆ ವಿದ್ಯಾರ್ಥಿಗಳು, ಊರವರು ಪಾಲ್ಗೊಂಡು ಈ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿದರು. ಈ ಕಾರ್ಯಕ್ರಮದ ಮುಂಚೆ ಹಳೆ ವಿದ್ಯಾರ್ಥಿಗಳ, ಪೋಷಕರಿಗೆ ಹಾಗೂ ಊರವರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ಆಯೋಜಿಸಲಾಗಿತ್ತು. ಹಳೆವಿದ್ಯಾರ್ಥಿ ನವಾಝ್ ಕೆಮ್ಮಾರ ಅವರು ತನ್ನ ಹುಟ್ಟು ಹಬ್ಬವನ್ನು ಈ ಕಾರ್ಯಕ್ರಮದಲ್ಲೇ ಎಲ್ಲರಿಗೂ ಐಸ್ ಕ್ರೀಮ್ ಹಂಚುವ ಮೂಲಕ ಆಚರಿಸಿಕೊಂಡರು. ಸರ್ವರೂ ಜೊತೆಗೂಡಿ ಸಂಭ್ರಮಿಸುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆದು ನಾಡಿನ ಐಕ್ಯತೆ ಸೌಹಾರ್ದತೆ ಏಕತೆಗೆ ಕೆಮ್ಮಾರ ಶಾಲೆ ಒಂದು ಸುಂದರವಾದ ವೇದಿಕೆಯಾಗಲಿ ಎಂದು ಊರ ವಿದ್ಯಾಭಿಮಾನಿಗಳು ಆಶಿಸಿದರು.









