ಪುತ್ತೂರು: ಕಾಲ ಗತಿಯನ್ನು ಮೀರಲು ಯಾರಿಂದಲೂ ಸಾಧ್ಯವಿಲ್ಲ. ರಾಮಾಯಣ ಬೆಳೆಯಲು ಮೂಲ ಕಾರಣವೇ ರಥದಚಕ್ರ. ರಾಮಾಯಣವು ಒಂದು ಸಂಜೀವಿನಿ. ಪ್ರತಿಯೊಬ್ಬರ ಜೀವನದಲ್ಲೂ ಮಾತು ಔಷಧಿಯಾಗಿ ಒದಗುತ್ತದೆ. ಅನೇಕರ ಬದುಕಿನಲ್ಲಿ ಮಾತು ಎಂಬುದು ಸಂಜೀವಿನಿಯಾಗಿದೆ ಎಂದು ಖ್ಯಾತ ಯಕ್ಷಗಾನ ಅರ್ಥಧಾರಿ ಹರೀಶ್ ಬೊಳಂತಿಮೊಗರು ಹೇಳಿದರು.
ಇವರು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ವಿವೇಕಾನಂದ ಫಾರ್ಮಸ್ಯೂಟಿಕಲ್ ಸೈನ್ಸ್ ಸ್ ನಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠೆಯ ಪ್ರಯುಕ್ತ ನಡೆದ ಸಂಜೀವಿನಿಯ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ನಾವು ಮಾಡುವ ಎಲ್ಲಾ ಕೆಲಸವೂ ಭಗವಂತನ ಸೇವೆಯಾಗಿದೆ. ಯಾವ ಕೆಲಸವನ್ನು ಮಾಡುವುದಾದರೂ ಅದರಲ್ಲೊಂದು ಅಳಿಲು ಸೇವೆ ಇದ್ದೇ ಇದೆ. ರಾಮಾಯಣದಲ್ಲಿ ಅಳಿಲು ಸೇವೆ ಎಂಬ ಪದ ಬಹು ಪ್ರಸಿದ್ಧವಾದದ್ದು. ಪ್ರತಿಯೊಂದು ಕೆಲಸದಲ್ಲೂ ಭಗವಂತನ ಸೇವೆಯನ್ನುಕಾಣಬೇಕು. ನಮಗೆ ಅತ್ಯಂತ ಪ್ರಿಯವಾದ ವಸ್ತುವನ್ನು ಇನ್ನೊಬ್ಬರಿಗೆ ದಾನ ನೀಡಿದಾಗ ಸಿಗುವ ಸಂತೋಷಕ್ಕಿಂತ ಮಿಗಿಲಾದದ್ದು ಬೇರೇನಿಲ್ಲ. ಬಾಯಾರಿದವನಿಗೆ ಕೊಡುವ ನೀರು, ಹಸಿದವನಿಗೆ ಕೊಡುವ ಅನ್ನ ಮತ್ತು ನೋವಲ್ಲಿ ಇದ್ದವನಿಗೆ ನೀಡುವ ಒಳ್ಳೆಯ ಮಾತು ಇವುಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೂರು ರತ್ನಗಳು. ದ್ವೇಷ ಎಂಬ ರಾಕ್ಷಸ ಗುಣವನ್ನು ನಮ್ಮೊಳಗಿನಿಂದ ತ್ಯಜಿಸದಾಗ ಭಾರತವು ರಾಮರಾಜ್ಯವಾಗುವುದರಲ್ಲಿ ಸಂದೇಹವಿಲ್ಲ ಎಂದು ತಿಳಿಸಿದರು.
ಅತಿಥಿಗಳು ಶ್ರೀ ರಾಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ವೇದಿಕೆಗೆ ಆಗಮಿಸಿದರು. ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನುಉದ್ಘಾಟಿಸಲಾಯಿತು.
ವೇದಿಕೆಯಲ್ಲಿ ಫಾರ್ಮಸ್ಯೂಟಿಕಲ್ ಸೈನ್ಸಸ್ ಕಾಲೇಜಿನ ಆಡಳಿತ ಸಮಿತಿಯ ಅಧ್ಯಕ್ಷ ಗೋಪಿನಾಥ್ ಶೆಟ್ಟಿ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ಜೊತೆ ಕಾರ್ಯದರ್ಶಿ ರೂಪಲೇಖಾ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿವೇಕಾನಂದ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಸ್ಯೂಟಿಕಲ್ ಸೈನ್ಸ್‌ಸ್‌ನ ಪ್ರಾಂಶುಪಾಲ ಗುರುರಾಜ್.ಎಮ್.ಪಿ ಸ್ವಾಗತಿಸಿ, ಅಸಿಸ್ಟೆಂಟ್ ಪ್ರೊಫೆಸರ್ ಬಾಲಸುಬ್ರಹ್ಮಣ್ಯ ವಂದಿಸಿ, ಫಾರ್ಮಸ್ಯೂಟಿಕಲ್ ಸೈನ್ಸಸ್‌ನ ಪ್ರಥಮ ವರ್ಷದ ವಿದ್ಯಾರ್ಥಿನಿಯರಾದ ವಿಭಾ, ಪ್ರಗತಿ, ಅನ್ವಿತಾ ನಿರೂಪಿಸಿದರು.