ನೆಲ್ಯಾಡಿ: ಯಾವುದೇ ಪರವಾನಿಗೆ ಇಲ್ಲದೇ ಪಿಕ್ ಅಪ್ ವಾಹನದಲ್ಲಿ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣ ಪತ್ತೆ ಹಚ್ಚಿರುವ ಉಪ್ಪಿನಂಗಡಿ ಪೊಲೀಸರು ಪಿಕ್ಅಪ್ ವಾಹನ, ಮರಳು ಹಾಗೂ ಚಾಲಕನನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ಇಚ್ಲಂಪಾಡಿ ಗ್ರಾಮದ ಪೆರಿಯಶಾಂತಿ ಎಂಬಲ್ಲಿ ಜ.16ರಂದು ಸಂಜೆ ನಡೆದಿದೆ.
ಯಾವುದೇ ಪರವಾನಿಗೆಯನ್ನು ಹೊಂದದೇ ಹೊಳೆಯಿಂದ ಮರಳನ್ನು ಕಳವು ಮಾಡಿ ಪಿಕ್ ಅಪ್(ಕೆಎ21, ಬಿ3606) ವಾಹನದಲ್ಲಿ ಸಾಗಿಸುತ್ತಿರುವುದನ್ನು ಉಪ್ಪಿನಂಗಡಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ರಾಜೇಶ ಕೆ.ವಿ. ಹಾಗೂ ಸಿಬ್ಬಂದಿಗಳು ಪೆರಿಯಶಾಂತಿಯಲ್ಲಿ ಪತ್ತೆ ಹಚ್ಚಿದ್ದಾರೆ. ಈ ವೇಳೆ ವಾಹನ ನಿಲ್ಲಿಸಿ ಪರಾರಿಯಾಗಲು ಯತ್ನಿಸಿದ ಚಾಲಕ ನೆಲ್ಯಾಡಿ ನಿವಾಸಿ ಸಿಬು ಜಾನ್ (41ವ.)ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಮರಳು ಸಾಗಾಟಕ್ಕೆ ಬಳಸಿದ್ದ ಪಿಕ್ಅಪ್ ವಾಹನ ಹಾಗೂ ವಾಹನದಲ್ಲಿದ್ದ ಅಂದಾಜು 50 ಬುಟ್ಟಿಗಳಷ್ಟು ಮರಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಕುರಿತಂತೆ ಉಪ್ಪಿನಂಗಡಿ ಪೊಲೀಸರು ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.