ಉಪ್ಪಿನಂಗಡಿ: ಮೂರು ಪವನ್ ತೂಕದ ಚಿನ್ನಾಭರಣವಿದ್ದ ಸಣ್ಣ ಪರ್ಸ್ವೊಂದನ್ನು ಮಹಿಳಾ ಭಕ್ತರೊಬ್ಬರು ಕಳೆದುಕೊಂಡಿದ್ದು, ಅದನ್ನು ಹುಡುಕಿಕೊಟ್ಟು ಮಹಿಳೆಗೆ ಹಿಂದಿರುಗಿಸುವ ಮೂಲಕ ದೇವಾಲಯದ ಸಹಾಯಕ ಅರ್ಚಕರು ಪ್ರಾಮಾಣಿಕತೆ ಮರೆದ ಘಟನೆ ವರದಿಯಾಗಿದೆ.
ಮಂಜುಳಾ ಎಂಬ ಭಕ್ತ ಮಹಿಳೆ ಉಪ್ಪಿನಂಗಡಿಯ ಶ್ರೀ ಮಹಾಕಾಳಿ ದೇವಾಲಯಕ್ಕೆ ಭೇಟಿ ನೀಡಿ ಹಿಂದಿರುಗುವ ವೇಳೆ ತನ್ನ ಆಭರಣವನ್ನಿರಿಸಿದ್ದ ಪರ್ಸನ್ನು ಕಳೆದುಕೊಂಡಿದ್ದರು. ಭಾರೀ ಜನ ಸಂದಣಿ ಇದ್ದ ಈ ಸಮಯದಲ್ಲಿ ಪರ್ಸ್ ಕಳೆದುಕೊಂದಿರುವುದು ಗೊತ್ತಾಗದೆ ಮಹಿಳೆ ಮನೆಗೆ ಹಿಂದಿರುಗಿದ್ದಾರೆ. ಬಹಳಷ್ಟು ಹೊತ್ತು ಕಳೆದ ಬಳಿಕ ದೇವಾಲಯಕ್ಕೆ ಹೋಗುವಾಗ ಇದ್ದ ಪರ್ಸ್ ಮನೆಯಲ್ಲಿ ಇಲ್ಲದಿರುವುದು ಅರಿವಿಗೆ ಬಂದು, ಕಳೆದು ಹೋದ ಪರ್ಸನ್ನು ಹುಡುಕಿಕೊಂಡು ದೇವಾಲಯ ಮತ್ತದರ ಸುತ್ತಮುತ್ತಲ ಪ್ರದೇಶಗಳನ್ನು ಹುಡುಕಾಡಿದ್ದಾರೆ. ಮಹಿಳೆಯ ಹುಡುಕಾಡುವಿಕೆ ಮತ್ತು ಮುಖದಲ್ಲಿದ್ದ ದುಗುಡವನ್ನು ಗಮನಿಸಿದ ದೇವಾಲಯದ ಸಹಾಯಕ ಅರ್ಚಕ ಅನಂತ ಕೃಷ್ಣ ಮಹಿಳೆಯನ್ನು ವಿಚಾರಿಸಿ, ತಾನೇ ಹುಡುಕಾಟ ನಡೆಸಿದಾಗ ದೇವಾಲಯದಲ್ಲಿ ಭಕ್ತರು ಸಮರ್ಪಿಸುವ ಎಳ್ಳೆಣ್ಣೆಯ ಬಳಿ ಸಣ್ಣ ಪರ್ಸ್ ಬಿದ್ದಿರುವುದು ಕಂಡು ಅದನ್ನು ಮಹಿಳೆಗೆ ನೀಡಿದರು. ಪರ್ಸ್ ನೊಳಗೆ 3 ಪವನ್ ತೂಕದ ಚಿನ್ನಾಭರಣ ಯಥಾ ಸ್ಥಿತಿಯಲ್ಲಿರುವುದನ್ನು ಕಂಡು ಮಹಿಳೆ ಸಂತಸಗೊಂಡರು.
ಇತ್ತ ಭಕ್ತಾದಿಯ ಸಂಕಷ್ಠವನ್ನು ಅರಿತು ತಾನೇ ಹುಡುಕಾಟ ನಡೆಸಿ ಪರ್ಸನ್ನು ಮಹಿಳೆಗೆ ದೊರಕಿಸಿಕೊಟ್ಟ ಅರ್ಚಕ ಅನಂತ ಕೃಷ್ಣ ರವರ ಪ್ರಾಮಾಣಿಕತೆ ಸಾರ್ವಜನಿಕ ಶ್ಲಾಘನೆಗೆ ಒಳಗಾಗಿದೆ.