ಫಿಲೋಮಿನಾ ಕ್ರೀಡಾಂಗಣವೋ, ಚಿನ್ನಸ್ವಾಮಿ ಕ್ರೀಡಾಂಗಣವೋ…ಬೆಳಕಿನ ಚಿತ್ತಾರದೊಂದಿಗೆ ಪ್ರಜ್ವಲಿಸುತ್ತಿರುವ ಫಿಲೋಮಿನಾ ಕ್ರೀಡಾಂಗಣ..

0

ಸಾಮೆತ್ತಡ್ಕ ಯುವಕ ಮಂಡಲ, ಸಿಝ್ಲರ್ ಸಾಫ್ಟ್ ಡ್ರಿಂಕ್ಸ್‌ರವರಿಂದ ರಾಷ್ಟ್ರಮಟ್ಟದ ಕ್ರಿಕೆಟ್ ಆಯೋಜನೆ

ಬರಹ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಅಂದು ಕುಗ್ರಾಮವಾಗಿದ್ದ ಪುತ್ತೂರಿಗೆ ಶಿಕ್ಷಣ ಕ್ರಾಂತಿಯ ಮೂಲಕ ಹೊಸ ಭಾಷ್ಯ ಬರೆದವರು ಮೊ|ಪತ್ರಾವೋರವರು ಪುತ್ತೂರು ಹಾಗೂ ಪುತ್ತೂರಿನ ಸುತ್ತಮುತ್ತಲಿನ ಹುಡುಗರಿಗೆ ಮಾತ್ರವಲ್ಲದೆ ಹುಡುಗಿಯರಿಗೂ ಶಾಲೆ-ಕಾಲೇಜು ವಿದ್ಯಾಸಂಸ್ಥೆಗಳನ್ನು ಕಟ್ಟಿಸುವ ಮೂಲಕ ಮೊ|ಪತ್ರಾವೋರವರು ಎಲ್ಲಾ ಸಮುದಾಯಕ್ಕೂ ಆದರ್ಶಪ್ರಾಯರೆನಿಸಿದ್ದಾರೆ. ಮೊ|ಪತ್ರಾವೋರವರು ಕಟ್ಟಿಸಿದ ಶಾಲೆ-ಕಾಲೇಜಿನ ಪೈಕಿ ದರ್ಬೆಯಲ್ಲಿನ ಫಿಲೋಮಿನಾ ಕಾಲೇಜು ಎದುರಿನ ವಿಸ್ತಾರವಾದ ಕ್ರೀಡಾಂಗಣವು ಎಲ್ಲಿಯೂ ಕಾಣಸಿಗದು ಎಂಬಂತೆ ಈ ಕ್ರೀಡಾಂಗಣವು ಪುತ್ತೂರಿನ ಮಟ್ಟಿಗೆ ಮುಕುಟಪ್ರಾಯವೆನಿಸಿದೆ. ಈ ಕ್ರೀಡಾಂಗಣದಲ್ಲಿ ಸಿಝ್ಲರ್ ಗ್ರೂಪ್ಸ್‌ರವರು ಸಂಘಟಿಸುವ ರಾಷ್ಟ್ರಮಟ್ಟದ ಹಗಲು-ರಾತ್ರಿಯ ಕ್ರಿಕೆಟ್ ಪಂದ್ಯಾವಳಿಯ ದೃಶ್ಯವಂತೂ ಕ್ರೀಡಾಂಗಣದ ಮೆರುಗನ್ನು ಮತ್ತಷ್ಟು ಹೆಚ್ಚಿಸುತ್ತಿದೆ.

ಫಿಲೋಮಿನಾ ಕ್ರೀಡಾಂಗಣವೋ, ಚಿನ್ನಸ್ವಾಮಿ ಕ್ರೀಡಾಂಗಣವೋ:
ಮೇಲೆ ತೋರಿಸಿದ ಚಿತ್ರವನ್ನೇ ನೋಡಿ. ಇದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವೋ ಎಂಬಂತೆ ಭಾಸವಾಗುತ್ತಿದೆ ಅಲ್ವೇ? ಇದಕ್ಕೆ ಕಾರಣ ಇತ್ತೀಚೆಗೆ ನಡೆದ ಪುತ್ತೂರಿನ ಸಿಝ್ಲರ್ ಟ್ರೋಫಿ ಆಗಿದೆ. ಸಾಮೆತ್ತಡ್ಕ ಯುವಕ ಮಂಡಲ ಹಾಗೂ ಸಿಝ್ಲರ್ ಸಾಫ್ಟ್ ಡ್ರಿಂಕ್ಸ್ ಸಹಯೋಗದಲ್ಲಿ, ಸಿಝ್ಲರ್ ಪ್ರಸನ್ನ ಕುಮಾರ್ ಶೆಟ್ಟಿಯವರ ಮುಂದಾಳತ್ವದಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರಿಕೆಟ್ ಟ್ರೋಫಿಯ ಆಯೋಜನೆ ಮಾಡಿದ ಮೇಲೆ ಈ ಫಿಲೋಮಿನಾ ಕ್ರೀಡಾಂಗಣದ ಹಿರಿಮೆಯನ್ನು ಹೆಚ್ಚಿಸಿದೆ ಎನ್ನಬಹುದು.

ಅಂತರ್ರಾಷ್ಟ್ರೀಯ ಮಟ್ಟದ ಹಿರಿಮೆಗೊಳಗಾಗಿದೆ ಈ ಮೈದಾನ:
ಮೂರು ದಿನಗಳ ಕಾಲ ನಡೆದ ಕ್ರಿಕೆಟ್ ಟೂರ್ನಿಯನ್ನು ಆಸ್ವಾದಿಸಲು ರಾತ್ರಿ ಹೊತ್ತು ಆಗಮಿಸಿದ ಕ್ರಿಕೆಟ್ ಪ್ರೇಮಿಗಳಿಗೆ, ಅತಿಥಿ ಗಣ್ಯರಿಗೆ ಎಂಟು ಟವರ್‌ಗಳಿಂದ ಪ್ರಜ್ವಲಿಸುತ್ತಿರುವ ರಂಗು ರಂಗಿನ ಬೆಳಕಿನಿಂದ ‘ನಾವು ಎಲ್ಲಿದ್ದೇವೆ’, ‘ಫಿಲೋಮಿನಾದ ಮೈದಾನದಲ್ಲೋ ಅಥವಾ ಅಂತರ್ರಾಷ್ಟ್ರೀಯ ಮೈದಾನದಲ್ಲೋ’ ಎಂಬುದೊಂದು ಊಹೆ ಮನಸ್ಸಿನಲ್ಲಿ ಮೂಡುವುದು ಸಹಜವಾಗಿಯೇ ಇದೆ. ಇದೇ ಮೈದಾನದಲ್ಲಿ ಅಂದು ಅಂತರ್ರಾಷ್ಟ್ರೀಯ ಆಟಗಾರ್ತಿಯರಾದ ಮಿಥಾಲಿರಾಜ್, ಜೂಲನ್ ಗೋಸ್ವಾಮಿಯವರು ಕ್ರಿಕೆಟ್ ಆಡಿದ್ದರು ಎನ್ನುವುದು ಮತ್ತೊಂದು ಹಿರಿಮೆಯಾಗಿದೆ. ಸಂಘಟಕರು ಆಯೋಜಿಸಿದ ಈ ಯಶಸ್ವಿ ಕ್ರಿಕೆಟ್ ಟೂರ್ನಿಗೆ ಆಗಮಿಸಿದ ಅತಿಥಿ ಗಣ್ಯರೂ ಕೂಡ ನಾವು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕುಳಿತು ಅಂತರ್ರಾಷ್ಟ್ರೀಯ ಪಂದ್ಯವನ್ನು ವೀಕ್ಷಿಸುತ್ತಿದ್ಧೇವೆಯೋ ಎಂಬಂತೆ ಭಾಸವಾಗಬಹುದಾಗಿದೆ. ಅಷ್ಟೊಂದು ಜನಪ್ರಿಯತೆಗೆ ಈ ಫಿಲೋಮಿನಾ ಕಾಲೇಜಿನ ಕ್ರೀಡಾಂಗಣ ಸಾಕ್ಷಿಯಾಗಿದೆ ಎಂಬುದಂತೂ ನಿಜ.

ಪ್ರೇಕ್ಷಕರಿಂದ ಪ್ರಶಂಸೆಯ ಸುರಿಮಳೆ:
ಅಲೋಜಿನ್ ಲೈಟ್ಸ್‌ಗಳಿಂದ ರಾತ್ರಿ ಹೊತ್ತು ಕಂಗೊಳಿಸುತ್ತಿರುವ ಈ ಫಿಲೋಮಿನಾ ಕಾಲೇಜಿನ ಮೈದಾನದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಾಟವನ್ನು ವೀಕ್ಷಿಸಲು ನೇರಪ್ರಸಾರದ ವ್ಯವಸ್ಥೆಯನ್ನು ಕೂಡ ಸಂಘಟಕರು ಮಾಡಿರುತ್ತಾರೆ. ಸಾವಿರಾರು ಮಂದಿ ಕ್ರಿಕೆಟ್ ಪ್ರೇಕ್ಷಕರು ಅಹರ್ನಿಶಿ ಪಂದ್ಯವನ್ನು ವೀಕ್ಷಿಸುವ ಸಂದರ್ಭದಲ್ಲಿ ‘ಇದು ಫಿಲೋಮಿನಾ ಕಾಲೇಜಿನ ಮೈದಾನವೇ, ಊಹಿಸಲಸಾಧ್ಯ. ಭೇಷ್’ ಎಂದು ಕೊಂಡಾಡಿಕೊಳ್ಳುವುದು ಮಾತ್ರವಲ್ಲ, ಪಂದ್ಯಗಳನ್ನು ನೇರವಾಗಿ ಕಣ್ತುಂಬಿಕೊಳ್ಳುವ ಎಂದು ಫಿಲೋಮಿನಾ ಮೈದಾನಕ್ಕೆ ತಂಡೋಪತಂಡವಾಗಿ ಆಗಮಿಸಿಲು ಸಿಧ್ಧರಾಗಿದ್ದಾರೆ ಕೂಡ. ಫಿಲೋಮಿನಾದ ಝಗಮಗಿಸುವ ಮೈದಾನದ ಕುರಿತು ಅಷ್ಟೊಂದು ಪ್ರಶಂಸೆಯ ಸುರಿಮಳೆ ಪ್ರೇಕ್ಷಕರಿಂದ ವ್ಯಕ್ತವಾಗುತ್ತಿರುವುದು ಶ್ಲಾಘನೀಯ.

ಮೇಜರ್ ವೆಂಕಟ್ರಾಮಯ್ಯರವರ ಕನಸಿನ ಕೂಸು ಈ ಫಿಲೋಮಿನಾ ಕ್ರೀಡಾಂಗಣ…
1958ರಲ್ಲಿ ಆರಂಭವಾದ ಈ ಫಿಲೋಮಿನಾ ಕಾಲೇಜು ವಿದ್ಯಾಸಂಸ್ಥೆಯನ್ನು ವಂ|ಸೆರಾವೋ, ವಂ|ಜೆ.ಬಿ ಡಿ’ಸೋಜ, ವಂ|ಕ್ಯಾಸ್ಟಲಿನೋ ಮುಂತಾದ ಅನೇಕರು ಪ್ರಾಂಶುಪಾಲರಾಗಿ ಮುನ್ನಡೆಸಿರುತ್ತಾರೆ. ಅದರಲ್ಲೂ ಮುಖ್ಯವಾಗಿ ಈ ಭವ್ಯ ಕ್ರೀಡಾಂಗಣವು ಇಂದು ಇಷ್ಟೊಂದು ಪ್ರಜ್ವಲಿಸುತ್ತಿದೆ ಮತ್ತು ಈ ಕ್ರೀಡಾಂಗಣದಿಂದ ಅನೇಕರ ಭವಿಷ್ಯ ಉಜ್ವಲವಾಗಿದೆ ಎಂಬುದಕ್ಕೆ ಇದರ ಹಿಂದೆ ಮೇಜರ್ ವೆಂಕಟ್ರಾಮಯ್ಯರವರ ಸಾಮರ್ಥ್ಯ ಶಕ್ತಿಯೇ ಪ್ರಮುಖ ಕಾರಣವಾಗಿದೆ ಎಂದರೆ ತಪ್ಪಾಗದು. ಫಿಲೋಮಿನಾ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದ ಮೇಜರ್ ವೆಂಕಟ್ರಾಮಯ್ಯರವರ ಕನಸಿನ ಕೂಸಾದ ಈ ಕ್ರೀಡಾಂಗಣಕ್ಕೆ ಅವರು ಪಟ್ಟ ಶ್ರಮವನ್ನು ಅವರನ್ನು ಹತ್ತಿರದಿಂದ ಬಲ್ಲವರು ಮನಸ್ಸು ಬಿಚ್ಚಿ ಹೇಳುತ್ತಾರೆ. ಮೇಜರ್ ವೆಂಕಟ್ರಾಮಯ್ಯರವರು ಇಂದು ನಮ್ಮನ್ನಗಲಿರಬಹುದು, ಆದರೆ ಅವರು ಕಟ್ಟಿ ಬೆಳೆಸಿದ ಈ ಕ್ರೀಡಾಂಗಣವು ಮೇಜರ್ ವೆಂಕಟ್ರಾಮಯ್ಯರವರನ್ನು ಸದಾ ನೆನಪಿಸುವಂತೆ ಮಾಡುತ್ತಿದೆ.

LEAVE A REPLY

Please enter your comment!
Please enter your name here