ಪುತ್ತೂರು: ಅಯೋಧ್ಯಾ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯವಾಗಿ ರಾವಣನ ಮಾನಸಿಕತೆ ಮತ್ತು ಬಾಬರಿ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬಂದಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಸಮಾರಂಭವು ಇಡೀ ದೇಶದ ಜನರು ರಾಮನ ಆರಾಧನೆಯನ್ನು ಮಾಡಬೇಕು. ಇದು ದೇಶದ ಹಬ್ಬವಾಗಿದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಆದರೂ ಕಾಂಗ್ರೆಸ್ ಪಕ್ಷ ರಾಮ ಮಂದಿರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆಪಾದಿಸುತ್ತಿದೆ. ಮಂತ್ರಾಕ್ಷತೆ ವಿತರಣೆ,ಪ್ರಾಣ ಪ್ರತಿಷ್ಠೆ ವಿಧಿಗಳ ಬಗ್ಗೆಯೂ ಅಪಸ್ವರ ಎತ್ತಿದೆ. ಕಾಂಗ್ರೆಸ್ ರಾವಣನ ಮಾನಸಿಕತೆ ಮತ್ತು ಬಾಬರಿ ಸಂಸ್ಕೃತಿಯನ್ನು ಮೈಗೂಡಿಸಿದೆ ಎಂದು ಅವರು ಹೇಳಿದರು.
1984ರಲ್ಲಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಅಯೋಧ್ಯಾ ಆಂದೋಲನ ಆರಂಭಗೊಂಡಿತು. ರಾಮಜಾನಕಿ ರಥಯಾತ್ರೆ ನಡೆಸಲಾಯಿತು. ದೇಶದ ಆರೂವರೆ ಲಕ್ಷ ಹಳ್ಳಿಗಳಲ್ಲಿ ಇಟ್ಟಿಗೆ ಪೂಜೆ ಮಾಡಿ ಪ್ರತೀ ಮನೆಯಿಂದ ಒಂದೂ ಕಾಲು ರೂಪಾಯಿ ಮುಷ್ಟಿ ಕಾಣಿಕೆ ಸಂಗ್ರಹಿಸಿ ಅಯೋಧ್ಯೆಗೆ ಕಳಿಸಲಾಯಿತು. ಇದಾದ ಬಳಿಕ 1986ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು ರಾಮ ಜನ್ಮಭೂಮಿ ಸ್ಥಳದ ವಿವಾದಿತ ಕಟ್ಟಡದಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿದರು. ಇದರ ಬೆನ್ನಲ್ಲೇ ಮುಸ್ಲಿಂ ವ್ಯಕ್ತಿಗಳು ಸೇರಿಕೊಂಡು ಅಖಿಲ ಭಾರತ ಬಾಬರಿ ಕ್ರೀಯಾ ಸಮಿತಿ ರಚಿಸಿಕೊಂಡು ಹೋರಾಟಕ್ಕಿಳಿದರು. ಕಾಂಗ್ರೆಸ್ ಪಕ್ಷ ಆ ಸಮಿತಿಗೂ ಬೆಂಬಲ ನೀಡಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿತು. ಅಂದಿನಿಂದ ಇಂದಿನವರೆಗೂ ಕಾಂಗ್ರೆಸ್ ಈ ದೇಶದ ಬಹುಸಂಖ್ಯಾತರ ಭಾವನೆಗಳಿಗೆ ವಿರುದ್ಧವಾಗಿಯೇ ಕೆಲಸ ಮಾಡುತ್ತಾ ಬಂದಿದೆ ಎಂದವರು ಹೇಳಿದರು.
ರಾಜ್ಯ ಸರಕಾರವು ರಜೆ ಘೋಷಣೆ ಮಾಡಬೇಕು:
ಈಗಾಗಲೇ ಕೇಂದ್ರ ಸರಕಾರಿ ನೌಕರರಿಗೆ ಜ.22ರಂದು ಅರ್ಧ ದಿನ ರಜೆ ನೀಡಲಾಗಿದೆ. ಅದರಂತೆ ರಾಜ್ಯ ಸರಕಾರ ಕೂಡ ತನ್ನ ನೌಕರರಿಗೆ ರಜೆ ನೀಡಬೇಕೆಂದು ಸಂಜೀವ ಮಠಂದೂರು ಆಗ್ರಹಿಸಿದರು. ಜ.22ರಂದು ಎಲ್ಲ ಹಿಂದೂಗಳು ತಮ್ಮ ಮನೆಯಲ್ಲಿ ಭಗವಾಧ್ವಜ ಹಾರಿಸುವಂತೆ ವಿನಂತಿಸಿದ ಅವರು, ಪ್ರತಿಷ್ಠಾಪನೆ ಸಂದರ್ಭ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಉತ್ಸವ, ಕೀರ್ತನೆ ಇತ್ಯಾದಿಗಳಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಅಯೋಧ್ಯೆ ಮಂದಿರ ಪ್ರಾಣ ಪ್ರತಿಷ್ಠೆಗೆ ದೇಶದ ಶಂಕರಾಚಾರ್ಯ ಪೀಠದ ಮಠಾಧಿಪತಿಗಳು ಹೋಗದೇ ಇರಲು ನಿರ್ಧರಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಉನ್ನತ ಸ್ಥಾನದಲ್ಲಿರುವವರ ನಡುವಿನ ವಿಚಾರ. ಆ ಮಟ್ಟದಲ್ಲೇ ಇದು ಸರಿಯಾಗಲಿದೆ ಎಂಬ ವಿಶ್ವಾಸವಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವಾ, ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ ಜೀವಂಧರ ಜೈನ್, ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ನಿತೀಶ್ ಕುಮಾರ್ ಶಾಂತಿವನ, ಪುರುಷೋತ್ತಮ ಮುಂಗ್ಲಿಮನೆ, ಯುವರಾಜ ಪೆರಿಯತ್ತೋಡಿ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಸುರೇಶ್ ಆಳ್ವ ಉಪಸ್ಥಿತರಿದ್ದರು.