ಪುತ್ತೂರು: ಕೊಳ್ತಿಗೆ ಗ್ರಾಮದಲ್ಲಿ ಆನೆಯೊಂದು ಕಾಣಿಸಿಕೊಂಡಿದ್ದು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಜ.18ರಂದು ರಾತ್ರಿ ಕೊಳ್ತಿಗೆ ಗ್ರಾಮದ ಕೋರಿಕ್ಕಾರು ಗಣೇಶ್ ಭಂಡಾರಿ ಎಂಬವರ ತೋಟಕ್ಕೆ ದಾಳಿ ನಡೆಸಿದ ಆನೆ ಹಾನಿಗೊಳಿಸಿದೆ. ಜ.19ರಂದು ಕೋರಿಕ್ಕಾರು ರಸ್ತೆಯಲ್ಲಿ ಪ್ರತ್ಯಕ್ಷಗೊಂಡಿದ್ದ ಆನೆ ರಾತ್ರಿ ವೇಳೆ ಕೊರ್ಬಂಡ್ಕ ಶಾಲೆಯ ಬಳಿ ಇದ್ದುದನ್ನು ಸ್ಥಳೀಯರು ನೋಡಿದ್ದು ಅದನ್ನು ಸ್ಥಳಿಯರು ಸೇರಿಕೊಂಡು ಅಲ್ಲಿಂದ ಓಡಿಸಿದ್ದರು. ಅದೇ ದಿನ ರಾತ್ರಿ ರಾಘವ ಗೌಡ ವರ್ಕೊಂಬು ಎಂಬವರ ತೋಟಕ್ಕೆ ಲಗ್ಗೆ ಇಟ್ಟಿರುವ ಆನೆ ತೋಟದಲ್ಲಿ ಹಾನಿಗೊಳಿಸಿರುವುದಾಗಿ ತಿಳಿದು ಬಂದಿದೆ.
ಜ.20ರಂದು ಬೆಳಿಗ್ಗೆ ದರ್ತಗುಂಡಿ ಯಶೊಧ ಎಂಬವರ ತೋಟಕ್ಕೆ ನುಗ್ಗಿದ ಆನೆ ತೋಟದಲ್ಲಿ ಬಾಳೆ ಗಿಡಗಳನ್ನು ನಾಶಗೊಳಿಸಿದೆ. ರಾತ್ರಿ ವೇಳೆಗೆ ಪೆರ್ಲಂಪಾಡಿ ರಬ್ಬರ್ ಪ್ಲಾಂಟೇಶನ್‌ನಲ್ಲಿ ಆನೆ ಇರುವ ಬಗ್ಗೆ ಮಾಹಿತಿಯಿದ್ದು ಆನೆ ಗೂಳಿಡುವ ಶಬ್ದವನ್ನು ಸ್ಥಳಿಯರು ಕೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಖಚಿತ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿರುವುದಾಗಿ ತಿಳಿದು ಬಂದಿದೆ. ಅನೇಕ ಕಡೆಗಳನ್ನು ಆನೆ ಲದ್ದಿ ಹಾಕಿರುವುದು ಮತ್ತು ಆನೆ ನಡೆದಾಡಿದ ಹೆಜ್ಜೆ ಗುರುತುಗಳು ಪತ್ತೆಯಾಗಿದೆ.
ಆನೆಯನ್ನು ಓಡಿಸುವ ಪ್ರಯತ್ನವನ್ನು ಕೂಡಾ ಸ್ಥಳೀಯರು ನಡೆಸಿರುವುದಾಗಿ ತಿಳಿದು ಬಂದಿದೆ. ಆನೆಗುಂಡಿ ಪ್ರದೇಶದಿಂದ, ಉಬರಾಜೆಯಾಗಿ ಆನೆ ಇಲ್ಲಿಗೆ ಬಂದಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಕೊಳ್ತಿಗೆ ಗ್ರಾ.ಪಂ ಅಧ್ಯಕ್ಷ ಪ್ರಮೋದ್ ಕೆ.ಎಸ್, ಸದಸ್ಯ ಪವನ್ ಡಿ.ಜಿ ದೊಡ್ಡಮನೆ, ಮಾಜಿ ಸದಸ್ಯ ತೀರ್ಥಾನಂದ ದುಗ್ಗಳ, ಬೆಳ್ಳಾರೆ ಫಾರೆಸ್ಟ್ ಪ್ರಸಾದ್ ಕೆ.ಜೆ, ಆನೆಗುಂಡಿ ವಲಯಾರಣ್ಯಾಧಿಕಾರಿ ಲೋಕೇಶ್, ಗಾರ್ಡ್ ದೀಪಕ್ ಹಾಗೂ ಊರವರು ಸೇರಿಕೊಂಡು ತಡರಾತ್ರಿ ವರೆಗೂ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪೆರ್ನಾಜೆ, ನೂಜಿಬೈಲ್‌ಗೂ ಆನೆ ಬಂದಿತ್ತು:
ಪೆರ್ನಾಜೆ ಹಾಗೂ ಈಶ್ವರಮಂಗಲ ಸಮೀಪದ ನೂಜಿಬೈಲ್‌ನಲ್ಲಿ ಇತ್ತೀಚೆಗೆ ಕಾಡಾನೆಯೊಂದು ತೋಟಗಳಿಗೆ ದಾಳಿ ನಡೆಸಿತ್ತು. ಅದೇ ಆನೆ ಕೊಳ್ತಿಗೆ, ಪೆರ್ಲಂಪಾಡಿ ಪರಿಸರಕ್ಕೂ ಬಂದಿದೆ ಎನ್ನುವ ಸಂಶಯ ವ್ಯಕ್ತವಾಗಿದೆ.
ಕೆಲಸಕ್ಕೆ ಹೋಗಲು ಕಾರ್ಮಿಕರು ಹಿಂದೇಟು..!
ಕೊಳ್ತಿಗೆ, ಪೆರ್ಲಂಪಾಡಿ, ಕೊಂರ್ಬಡ್ಕ ಮೊದಲಾದ ಪರಿಸರದಲ್ಲಿ ಆನೆ ಓಡಾಡಿದ್ದರಿಂದ ಸ್ಥಳೀಯ ಕಾರ್ಮಿಕರು ತೋಟದ ಕೆಲಸಕ್ಕೆ ಮತ್ತು ರಬ್ಬರ್ ತೋಟಕ್ಕೆ ಕೆಲಸಕ್ಕೆ ಹೋಗಲು ಹಿಂಜರಿಯುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಶಾಲಾ ಮಕ್ಕಳು ಕೂಡಾ ಭಯದಿಂದ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟಿನಲ್ಲಿ ಗ್ರಾಮಕ್ಕೆ ಆನೆ ಬಂದಿರುವ ಸುದ್ದಿ ಕೊಳ್ತಿಗೆ ಗ್ರಾಮ ಮತ್ತು ಆಸು ಪಾಸಿನ ಜನತೆಯನ್ನು ನಿದ್ದೆಯಿಲ್ಲದಂತೆ ಮಾಡಿದೆ.
ಜಾಗ್ರತೆ ವಹಿಸಿ-ಪ್ರಮೋದ್ ಕೆ.ಎಸ್
ಕೊಳ್ತಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್ ಅವರು ವೀಡಿಯೋ ಮುಖಾಂತರ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಗ್ರಾಮಕ್ಕೆ ಆನೆ ಬಂದಿರುವ ವಿಚಾರ ಸಹಜವಾಗಿ ಜನತೆ ಆತಂಕಕ್ಕೆ ಒಳಗಾಗಿದ್ದು ಊರವರು ಮತ್ತು ಅರಣ್ಯ ಇಲಾಖೆಯವರು ಸೇರಿಕೊಂಡು ಆನೆಯನ್ನು ಹುಡುಕಾಡುವ ಪ್ರಯತ್ನ ಮಾಡಿದ್ದೇವೆ. ಆನೆ ಎಲ್ಲಿಯಾದರೂ ಕಂಡು ಬಂದಲ್ಲಿ ಮಾಹಿತಿ ನೀಡಿ, ಸುಳ್ಳು ಸುದ್ದಿಯನ್ನು ಯಾರೂ ಹಬ್ಬಿಸಬೇಡಿ. ಸಂಜೆ 7 ಗಂಟೆಯ ಬಳಿಕ ಹೊರಗಡೆ ಓಡಾಡುವಾಗ ಜಾಗ್ರತೆ ವಹಿಸಿ ಎಂದು ಪ್ರಮೋದ್ ಕೆ.ಎಸ್ ಮನವಿ ಮಾಡಿದ್ದಾರೆ.
ಆತಂಕದಲ್ಲಿ ಗ್ರಾಮಸ್ಥರು:
ಕಾಡಾನೆ ಗ್ರಾಮದಲ್ಲಿ ಓಡಾಟ ನಡೆಸುತ್ತಿರುವ ಸುದ್ದಿ ಕೇಳಿ ಕೊಳ್ತಿಗೆ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಜ.20ರಂದು ರಾತ್ರಿ ವೇಳೆ ಪೆರ್ಲಂಪಾಡಿ ಪರಿಸರದ ಜನರು ಮನೆಯಿಂದ ಹೊರಗಡೆ ಬರಲೂ ಹೆದರುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.