ಪುತ್ತೂರು: ಕೊಂಬೆಟ್ಟು ಸುಧಾ ನರ್ಸರಿ ವಠಾರದ 3 ಮನೆಗಳಿಗೆ ಇಬ್ಬರು ಅಪರಿಚಿತರು ಜ.21ರ ನಸುಕಿನ ಜಾವ 5 ಗಂಟೆ ಸುಮಾರಿಗೆ ಬಾಗಿಲು ಬಡಿದು ಮನೆ ಸುತ್ತಮುತ್ತ ಓಡಿದ ಮತ್ತು ಅವರನ್ನು ವಿಚಾರಿಸಲು ಹೋದ ಮನೆಯವರಿಗೆ ಹಲ್ಲೆಗೆ ಮುಂದಾಗಿ ಪಕ್ಕದ ಕ್ರೀಡಾಂಗಣಕ್ಕೆ ಪರಾರಿಯಾದಾಗ ಅಲ್ಲಿ ವ್ಯಾಯಾಮ ಮಾಡುತ್ತಿದ್ದ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಘಟನೆ ನಡೆದಿದೆ.
ಇಬ್ಬರು ಅಪರಿಚಿತರು ಬೆಳಿಗ್ಗೆ 5 ಗಂಟೆ ಸುಮಾರಿಗೆ ಮನೆಯ ಸುತ್ತಮುತ್ತ ಹೋಗುತ್ತಿದ್ದು, ಮನೆಯ ಬಾಗಿಲನ್ನು ಬಡಿದಿದ್ದಾರೆ. ಈ ವೇಳೆ ಮನೆ ಮಂದಿ ಅವರನ್ನು ವಿಚಾರಿಸಲು ಹೋದಾಗ ಅಪರಿಚಿತರು ಹಲ್ಲೆಗೆ ಮುಂದಾಗಿ ಪಕ್ಕದ ಕೊಂಬೆಟ್ಟು ತಾಲೂಕು ಕ್ರೀಡಾಂಗಣಕ್ಕೆ ಪರಾರಿಯಾಗಿದ್ದು, ಈ ಸಂದರ್ಭ ಮನೆ ಮಂದಿ ಸ್ಥಳೀಯರಾದ ಪ್ರವೀಣ್ ರಾವ್ ಮತ್ತು ಪೊಲೀಸರಿಗೆ ಹಾಗು ನಗರಸಭಾ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರಿಗೆ ಮಾಹಿತಿ ನೀಡಿದ್ದರು. ಬಳಿಕ ನಗರಸಭಾ ಸದಸ್ಯರ ಜೊತೆ ಪ್ರವೀಣ್ ಮತ್ತು ಜನಾರ್ದನರವರು ಅಪರಿಚಿತರನ್ನು ಹುಡುಕಾಡುತ್ತಿರುವಾಗ ತಾಲೂಕು ಕ್ರೀಡಾಂಗಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಅಡ್ಡಾದಿಡ್ಡಿ ಓಡಾಡುತ್ತಿರುವುದು ಕಂಡು ಅವರನ್ನು ಕ್ರೀಡಾಂಗಣದಲ್ಲಿ ವ್ಯಾಯಾಮ ಮಾಡುತ್ತಿದ್ದ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳ ಸಹಾಯದಿಂದ ಹಿಡಿಯಲಾಯಿತು. ಅಪರಿಚಿತನನ್ನು ವಿಚಾರಿಸಿದಾಗ ರವಿ ಸಾಲೆತ್ತೂರು ಎಂದು ಹೇಳಿದ್ದಾರೆ. ಆದರೆ ಸ್ಪಷ್ಟ ಮಾಹಿತಿ ಸಿಗಲಿಲ್ಲ. ಅಪರಿಚಿತನನ್ನು ನಗರ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.