ಪುತ್ತೂರು: ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಪಶು ಸಂಗೋಪನಾ ಇಲಾಖೆ, ಕೆಯ್ಯೂರು ಗ್ರಾಮ ಪಂಚಾಯತ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ತಿಂಗಳಾಡಿ ಇದರ ಸಹಯೋಗದೊಂದಿಗೆ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರ ಜ.19ರಂದು ಗ್ರಾಪಂ ವ್ಯಾಪ್ತಿಯಲ್ಲಿ ನಡೆಯಿತು. ಗ್ರಾಪಂ ಸಭಾಂಗಣದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೆಯ್ಯೂರು ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಧರ್ಮಪಾಲ್, ಪಶು ವೈದ್ಯಾಧಿಕಾರಿಗಳಾದ ಕುಮಾರ್, ಗಿರಿಧರ್, ಪಶುಸಖಿ ಶುಭಾಷಿಣಿ, ಪ್ರಶಾಂತ್, ಪಂಚಾಯತ್ ಸಿಬ್ಬಂದಿಗಳಾದ ಶಿವಪ್ರಸಾದ್, ರಾಕೇಶ್, ಮಾಲತಿ, ಧರ್ಮಣ್ಣ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಪಂಚಾಯತ್ ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಸ್ವಾಗತಿಸಿ, ವಂದಿಸಿದರು.
ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ 4 ತಂಡಗಳಿಂದ ಗ್ರಾಮದ 4 ಕಡೆಗಳಲ್ಲಿ ಲಸಿಕಾ ಶಿಬಿರ ನಡೆಯಿತು. ಶಿಬಿರದಲ್ಲಿ ಸುಮಾರು 650 ನಾಯಿಗಳಿಗೆ ಲಸಿಕೆ ಹಾಕಲಾಯಿತು.
ನಾಯಿಗಳನ್ನು, ನಾಯಿ ಮರಿಗಳನ್ನು ರಸ್ತೆಗೆ ತಂದು ಬಿಡುವುದು ಕಂಡು ಬಂದರೆ ಅವರ ಮೇಲೆ ಕಾನೂನು ಕ್ರಮ
`ನಾಯಿ ಒಂದು ಸಾಕು ಪ್ರಾಣಿಯಾಗಿರುವುದರಿಂದ ಯಾರೂ ಕೂಡ ತಮ್ಮ ನಾಯಿಗಳನ್ನು ರಸ್ತೆ ಬದಿಗೆ ಬಿಡಬಾರದು, ಹಾಗೇ ನಾಯಿ ಮರಿಗಳನ್ನು ಕೂಡ ರಸ್ತೆಗೆ ತಂದು ಬಿಡಬಾರದು. ನಾಯಿಗಳನ್ನು, ನಾಯಿ ಮರಿಗಳನ್ನು ರಸ್ತೆಗೆ ತಂದು ಬಿಡುವುದು ಕಂಡು ಬಂದರೆ ಅವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು, ಗ್ರಾಮದ ಹಿತದೃಷ್ಟಿಯಿಂದ ಸಾರ್ವಜನಿಕರು ಪಂಚಾಯತ್ ಜೊತೆ ಸಹಕರಿಸಬೇಕು.’
ಶರತ್ ಕುಮಾರ್ ಮಾಡಾವು,
ಅಧ್ಯಕ್ಷರು ಕೆಯ್ಯೂರು ಗ್ರಾಪಂ