ಪುತ್ತೂರು: ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣಗೊಂಡು ಜ.22ರ ರಾಮನ ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮದ ದಿನವೇ ಆರ್ಯಾಪು ಗ್ರಾಮದ ಬೊಳ್ಳಾಣ ಎಂಬಲ್ಲಿ ನವೀಕೃತಗೊಂಡ ರಾಮ ಭಕ್ತ ಆಂಜನೇಯ ಭಜನಾ ಮಂದಿರವು ಲೋಕಾರ್ಪಣೆಗೊಳ್ಳುವ ಮೂಲಕ ವಿಶೇಷ ಸಂಭ್ರಮಕ್ಕೆ ಸಾಕ್ಷಿಯಾಯಿತು.
ವೇ.ಮೂ. ಶ್ರೀ ಯೋಗೀಶ್ ಕಲ್ಲೂರಾಯ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜ.21ರಂದು ಸಂಜೆ ಆಂಜನೇಯ ದೇವರ ಭಾವಚಿತ್ರದ ಮೆರವಣಿಗೆ ನಡೆಯಿತು. ಪರ್ಲಡ್ಕ ಬೈಪಾಸ್ ಬಳಿಯಿಂದ ಹೊರಟ ಮೆರವಣಿಗೆಯು ಗೋಳಿಕಟ್ಟೆ ಮೂಲಕ ಬೊಳ್ಳಾಣ ಭಜನಾ ಮಂದಿರದ ತನಕ ಸಾಗಿತು. ನಂತರ ವಾಸ್ತು ಪೂಜೆ, ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಿತು.
ಜ.22ರಂದು ಬೆಳಿಗ್ಗೆ ಗಣಪತಿ ಹವನ, ನಂತರ ವಿವಿಧ ಭಜನಾ ತಂಡಗಳಿಂದ ಭಜನೆ, ಆಂಜನೇಯ ಸ್ವಾಮಿ ಪ್ರತಿಷ್ಠೆ, ಕಲ್ಪೋಕ್ತ ಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು. ಭಜನಾ ಮಂದಿರದ ಅಧ್ಯಕ್ಷ ಕಿಶೋರ್ ಕುಮಾರ್, ಪ್ರಧಾನ ಕಾರ್ಯದರ್ಶಿ ವಿನೋದ್ ಕುಮಾರ್, ಕೋಶಾಧಿಕಾರಿ ಯಶವಂತ, ಉಪಾಧ್ಯಕ್ಷ ಭರತ್, ಜತೆ ಕಾರ್ಯದರ್ಶಿಗಳಾದ ವಿಜಯಚಂದ್ರ ಹಗೂ ಪ್ರಮೋದ್ ಸಾಲ್ಯಾನ್, ವಿವಿಧ ರಾಜಕೀಯ, ಧಾರ್ಮಿಕ, ಸಾಮಾಜಿಕ ಸಂಘ ಸಂಸ್ಥೆಗಳ ಮುಖಂಡರು ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಂದಿರದ ಲೋಕಾರ್ಪಣೆಯನ್ನು ಜ.22ರಂದು ನಡೆಸುವುದಾಗಿ ತೀರ್ಮಾನಿಸಲಾಗಿತ್ತು. ಆದರೆ ವಿಶೇಷತೆಯೆಂದರೆ ಅದೇ ದಿನ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯು ನಡೆಯುತ್ತಿರುವ ಸಂಭ್ರಮದಲ್ಲಿ ಕಾಕತಾಳೀಯವೆಂಬಂತೆ ಬೊಳ್ಳಾಣದಲ್ಲಿ ಶ್ರೀರಾಮ ಭಕ್ತ ಆಂಜನೇಯ ಹೆಸರಿನಲ್ಲಿರುವ ನೂತನ ಭಜನಾ ಮಂದಿರವು ಲೋಕಾರ್ಪಣೆಗೊಳ್ಳುತ್ತಿರುವುದು ಇಲ್ಲಿನ ವಿಶೇಷತೆಯಾಗಿದೆ.