ಪುತ್ತೂರು ಜೆ.ಸಿ.ಐನಿಂದ ವಿದ್ಯಾಮಾತಾ ಅಕಾಡೆಮಿಯಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ-ಹೆಚ್.ಡಿ.ಎಫ್.ಸಿ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಆಯ್ಕೆಯಾದ ಧನ್ಯಶ್ರೀಗೆ ಸನ್ಮಾನ

0

ಪುತ್ತೂರು: ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ಜೆ.ಸಿ.ಐ ಪುತ್ತೂರು ವತಿಯಿಂದ ಗಣರಾಜ್ಯೋತ್ಸವದ ಪ್ರಯುಕ್ತ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರವು ನಡೆಯಿತು.

ಕಾರ್ಯಕ್ರಮವನ್ನು ಜೆ.ಸಿ.ಐ ಪುತ್ತೂರು ಪೂರ್ವಾಧ್ಯಕ್ಷ ಶಶಿರಾಜ್ ರೈ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜೆ.ಸಿ.ಐ ಪುತ್ತೂರು ಅಧ್ಯಕ್ಷ ಮೋಹನ್ .ಕೆ. ವಿದ್ಯಾಮಾತಾ ಅಕಾಡೆಮಿಯು ಮಾಡುತ್ತಿರುವ ಸಮಾಜಮುಖಿ ಕಾರ್ಯಗಳಿಗೆ ತಮ್ಮ ಸಹಕಾರವಿದೆ, ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನ ತರಬೇತಿಯ ಮೂಲಕ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ ಎಂದರು.

ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ, ಜೆ.ಸಿ.ಐ ಪುತ್ತೂರಿನ ತರಬೇತಿ ವಿಭಾಗದ ಉಪಾಧ್ಯಕ್ಷ ಭಾಗ್ಯೇಶ್ ರೈ ಸ್ವಾಗತಿಸಿ ,ಪ್ರಾಸ್ತಾವಿಕವಾಗಿ ಮಾತನಾಡಿದರು.ಜೆ.ಸಿ.ಐ ಪುತ್ತೂರು ತರಬೇತಿ ವಿಭಾಗದ ನಿರ್ದೇಶಕ, ಇನ್ಸ್ಪೈರ್ ಲರ್ನಿಂಗ್ ಸೆಂಟರ್ ಪುತ್ತೂರು ಇದರ ಆಡಳಿತ ನಿರ್ದೇಶಕ ಸುಪ್ರೀತ್.ಕೆ.ಸಿ ವ್ಯಕ್ತಿತ್ವ ವಿಕಸನ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ತರಬೇತಿಯಲ್ಲಿರುವ ಅಭ್ಯರ್ಥಿಗಳಿಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಬೇಕಾದ ಸಮಯ ಪಾಲನೆ ಇತ್ಯಾದಿಗಳ ಬಗ್ಗೆ ತರಬೇತಿಯನ್ನು ನೀಡಿದರು.


ಹೆಚ್.ಡಿ.ಎಫ್.ಸಿ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಆಯ್ಕೆಯಾದ ಧನ್ಯಶ್ರೀರವರಿಗೆ ಸನ್ಮಾನ
ವಿದ್ಯಾಮಾತಾ ಅಕಾಡೆಮಿಯಲ್ಲಿ 2023ರ ಸಾಲಿನಲ್ಲಿ ತರಬೇತಿಯನ್ನು ಪಡೆದು ಎಚ್.ಡಿ.ಎಫ್.ಸಿ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಆಯ್ಕೆಯಾಗಿರುವ ಎಂಬಿಎ ಪದವೀಧರೆ ಕುರುಡಕಟ್ಟೆ ಪುಣಚ ಗ್ರಾಮದ ಆನಂದ ಹಾಗೂ ಪ್ರೇಮ ದಂಪತಿಗಳ ಪುತ್ರಿ ಧನ್ಯಶ್ರೀಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಧನ್ಯಶ್ರೀ ತನ್ನ ಪರಿಶ್ರಮದ ಜೊತೆಗೆ ವಿದ್ಯಾಮಾತಾ ಅಕಾಡೆಮಿಯಲ್ಲಿ ಪಡೆದ ತರಬೇತಿಯು ನನ್ನ ಜೀವನವನ್ನು ರೂಪಿಸಿಕೊಳ್ಳಲು ನೆರವಾಯಿತು. ಕೇವಲ ಪದವಿ, ಸ್ನಾತಕೋತ್ತರ ಪದವಿಗಳು ನಮ್ಮ ಬದುಕನ್ನು ಕಟ್ಟಿಕೊಡುವುದಿಲ್ಲ. ಶಿಕ್ಷಣದ ಜೊತೆಗೆ ಉದ್ಯೋಗಕ್ಕೆ ಪೂರಕವಾದ ತರಬೇತಿಯನ್ನು ಪಡೆದಾಗ ಮಾತ್ರ ನಮ್ಮ ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತದೆ ಎಂದರು.

ಜೆ.ಸಿ.ಐ ಪುತ್ತೂರಿನ ಜಂಟಿ ಕಾರ್ಯದರ್ಶಿ ಜಿತೇಶ್, ಪೂರ್ವಾಧ್ಯಕ್ಷ ದಾಮೋದರ್ ಪಾಟಾಳಿ, ಸದಸ್ಯ ಸತೀಶ್, ವಿದ್ಯಾಮಾತಾ ಅಕಾಡೆಮಿ ತರಬೇತುದಾರರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here