ಪುತ್ತೂರು(ಬೆಂಗಳೂರು): ಬೆಂಗಳೂರಿನಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಟೂರ್ನಮೆಂಟ್ ರೋಚಕ ಪಂದ್ಯಾವಳಿಗೆ ಸಾಕ್ಷಿಯಾಯಿತು. ಬೆಂಗಳೂರು ಅರ್ಬನ್ ಡಿಸ್ಟ್ರಿಕ್ಟ್ ಚೆಸ್ ಅಸೋಸಿಯೇಷನ್ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ 20ಕ್ಕೂ ಹೆಚ್ಚು ದೇಶಗಳ 2000 ದಷ್ಟು ಆಟಗಾರರು ಭಾಗವಹಿಸಿದ್ದರು. ಜ.26 ರಂದು ನಡೆದ ಅಂತಿಮ ಸ್ಪರ್ಧೆಯಲ್ಲಿ ಕಲ್ಕತ್ತಾದ ಮಿತ್ರಭಾ ಗುಹಾ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ಪ್ರಶಸ್ತಿಯೊಂದಿಗೆ 4.5 ಲಕ್ಷ ರೂಪಾಯಿ ಬಹುಮಾನ ಪಡೆದುಕೊಂಡಿದ್ದಾರೆ.
ಬೆಂಗಳೂರಿನ ಕಂಠೀರವ ಒಳಾಂಗಣದಲ್ಲಿ ಜ.26ರಂದು ಕೊನೆಗೊಂಡ ಬೆಂಗಳೂರು ಅಂತರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ ಓಪನ್ ಚೆಸ್ ಟೂರ್ನಮೆಂಟ್ನ 10ನೇ ಸುತ್ತಿನ ರೋಚಕ ಹಣಾಹಣಿಯಲ್ಲಿ ಜಿಎಂ ಶ್ಯಾಮ್ ಸುಂದರ್ ವಿರುದ್ಧ ಮಿತ್ರಭಾ ಗುಹಾ ಜಯ ಸಾಧಿಸಿದ್ದರು. ಎಸ್ ಪಿ ಸೇತುರಾಮನ್, ಜಿಎಂ ದೀಪ್ತಾಯನ್ ಘೋಷ್ ವಿರುದ್ಧ ನಡೆದ ಪಂದ್ಯದಲ್ಲಿ ಡ್ರಾ ಸಾಧಿಸಿದ್ದರು. ಬಳಿಕ ತಮಿಳುನಾಡಿನ ಸೇತುರಾಮನ್ ಮತ್ತು ಮಿತ್ರಭಾ ಗುಹಾ ನಡುವೆ ನಡೆದ ಪಂದ್ಯದಲ್ಲಿ ಇಬ್ಬರೂ ತಲಾ 8 ಅಂಕಗಳನ್ನು ಗಳಿಸಿದ್ದರು. ನಂತರ ನಡೆದ ಟೈ-ಬ್ರೇಕ್ ಕಟ್-ಆಫ್ಗಳಲ್ಲಿ ಮಿತ್ರಭಾ ಗುಹಾ ಹೆಚ್ಚು ಅಂಕ ಪಡೆದು ವಿಜಯ ಸಾಧಿಸಿದ್ದಾರೆ. ಸೇತುರಾಮನ್ 2ನೇ ಸ್ಥಾನದಲ್ಲಿ ತೃಪ್ತಿ ಪಡಬೇಕಾಯಿತು. ಕರ್ನಾಟಕದ ಗ್ರ್ಯಾಂಡ್ ಮಾಸ್ಟರ್ ಪ್ರಣವ್ ಆನಂದ್ ಸೇರಿದಂತೆ 8 ಮಂದಿ ಟೈ ಸಾಧಿಸಿದ್ದು, ಟೈ ಬ್ರೇಕರ್ ಮೂಲಕ ಇಂಗ್ಲೆಂಡ್ ನ ನೈಜಲ್ ಶಾರ್ಟ್ ನಡುವೆ 3ನೇ ಸ್ಥಾನ ಪಡೆದುಕೊಂಡಿದ್ದಾರೆ. ಸೇತುರಾಮನ್ ಪ್ರಶಸ್ತಿ ಸೇರಿದಂತೆ 3.5 ಲಕ್ಷ ಬಹುಮಾನ ಮತ್ತು ನೈಜಲ್ ಶಾರ್ಟ್ ಪ್ರಶಸ್ತಿಯೊಂದಿಗೆ 2.5 ಲಕ್ಷ ಬಹುಮಾನ ಗೆದ್ದುಕೊಂಡಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶಸ್ತಿ ವಿತರಣೆ ಮಾಡಿ ಸ್ಪರ್ಧಾಳುಗಳನ್ನು ಅಭಿನಂದಿಸಿ ಮಾತನಾಡಿ, ಬೆಂಗಳೂರು ಇಂಟರ್ನ್ಯಾಶನಲ್ ಗ್ರ್ಯಾಂಡ್ಮಾಸ್ಟರ್ಸ್ ಓಪನ್ ಚೆಸ್ ಟೂರ್ನಮೆಂಟ್ ಚೆಸ್ ಬೆಳೆಸುವ ಕರ್ನಾಟಕದ ಬದ್ಧತೆಗೆ ಒಂದು ಉಜ್ವಲ ಉದಾಹರಣೆಯಾಗಿದೆ. ಇಂತಹ ಪ್ರತಿಷ್ಠಿತ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ, ಹೆಸರು ಮಾಡಿದ ಆಟಗಾರರಿಗೆ ಮತ್ತು ಉದಯೋನ್ಮುಖ ಪ್ರತಿಭೆಗಳಿಗೆ ಮಿಂಚಲು ವೇದಿಕೆಯನ್ನು ಒದಗಿಸಿದ ಬಿಯುಡಿಸಿಎ ಯ ಅಧ್ಯಕ್ಷೆ ಮೂಲತಃ ಪುತ್ತೂರಿನವರಾದ ಸೌಮ್ಯಾ ಬಿ ಯು, ಸೇರಿದಂತೆ 7 ಮಂದಿ ಮಹಿಳೆಯರ ತಂಡ ಮತ್ತು ಸ್ಪರ್ಧಾಳುಗಳಿಗೆ ಅಭಿನಂದನೆ ಸಲ್ಲಿಸಿದರು.