ಪುರುಷರಕಟ್ಟೆ: ಶ್ರೀಗುರುದೇವ ವಿವಿಧೋದ್ದೇಶ ಸಹಕಾರ ಸಂಘದ 22ನೇ ಶಾಖೆ ಶುಭಾರಂಭ

0

ಪುತ್ತೂರು: ‘ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ’ ಹಾಗೂ ರಾಜ್ಯ ಮಟ್ಟದ ‘ಉತ್ತಮ ಸಹಕಾರ ಸಂಘ ಪ್ರಶಸ್ತಿ’ ಪುರಸ್ಕೃತಗೊಂಡು ಬೆಳ್ತಂಗಡಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ 22ನೇ ಶಾಖೆಯು ಜ.28ರಂದು ನರಿಮೊಗರು ಗ್ರಾಮದ ಪುರುಷರಕಟ್ಟೆ ಸಿದ್ದಣ್ಣ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು.


ಅಂತರ್‌ರಾಜ್ಯ ಸಂಸ್ಥೆಯಾಗಿ ಬೆಳೆಯಲಿ-ಸತೀಶ್ ಕುಮಾರ್ ಕೆಡೆಂಜಿ:
ನೂತನ ಶಾಖೆಯನ್ನು ಉದ್ಘಾಟಿಸಿದ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ, ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಪುತ್ತೂರಿನ ಎರಡನೇ ಶಾಖೆ ಪ್ರಾರಂಭವಾಗಿದೆ. ಸಂಘವು ಅತೀ ಕಡಿಮೆ ಅವಧಿಯಲ್ಲಿ ರೂ.1000 ಕೋಟಿ ವ್ಯವಹಾರ ನಡೆಸುವ ಗಣನೀಯ ಸಾಧನೆ ಮಾಡಿದೆ. ಹಿರಿಯ ನಿರ್ದೇಶಕರ ಮಾರ್ಗದರ್ಶನ, ಕಿರಿಯ ಸಿಬಂದಿಗಳ ಕಾರ್ಯಶೀಲತೆಯಲ್ಲಿ ಬೃಹತ್ ಆಗಿ ಬೆಳೆದಿದೆ. ಹಲವು ರೀತಿಯ ಸಹಕಾರ ಸಂಘಗಳಿದ್ದು ಪೈಪೋಟಿಯ ಯುಗದಲ್ಲಿದ್ದು ನಗುಮೊಗದ ಸೇವೆ ಹಾಗೂ ಶೀಘ್ರವಾಗಿ ಸಾಲ ಮಂಜೂರಾತಿ ಮಾಡಿದರೆ ಜನ ಇಷ್ಟಪಡುತ್ತಾರೆ. ಬ್ಯಾಂಕ್ ಮುನ್ನಡೆಯಲು ಠೇವಣಿಗಾರರಗಿಂತ ಸಾಲಗಾರರೇ ಮುಖ್ಯ. ನೀಡಿದ ಸಾಲ ಮರುಪಾವತಿಸುವಲ್ಲಿ ಸಿಬ್ಬಂದಿಗಳ ಕಾರ್ಯದಕ್ಷತೆ, ಕ್ರಿಯಾಶೀಲತೆ ಪ್ರಮುಖವಾಗಿದೆ. ಈ ಸಂಘವು ಅಂತರಾಜ್ಯ ಸಂಸ್ಥೆಯಾಗಿ ಬೆಳೆಯಲಿ. ಪುತ್ತೂರಿನಲ್ಲಿ ಈಗಾಗಲೇ ಎರಡು ಶಾಖೆ ಪ್ರಾರಂಭವಾಗಿದ್ದು ಇನ್ನೂ 8 ಶಾಖೆಗಳು ಪ್ರಾರಂಭವಾಗಲಿ. ಮುಂದಿನ ಶಾಖೆಗಳ ಉದ್ಘಾಟನೆಯನ್ನು ಅದ್ದೂರಿಯಾಗಿ ನಡೆಸಬೇಕು ಎಂದರು.


ಸಂಘದ ಶಾಖೆ ಹಳ್ಳಿ ಹಳ್ಳಿಗಳಿಗೂ ವಿಸ್ತರಿಸಲಿ:ಹರಿಣಿ ನಿತ್ಯಾನಂದ:
ಭದ್ರತಾ ಕೋಶ ಉದ್ಘಾಟಿಸಿದ ನರಿಮೊಗರು ಗ್ರಾ.ಪಂ ಅಧ್ಯಕ್ಷೆ ಹರಿಣಿ ನಿತ್ಯಾನಂದ ಮಾತನಾಡಿ, ನಮ್ಮ ಗ್ರಾಮದಲ್ಲಿ ಪ್ರಾರಂಭಗೊಂಡ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಶಾಖೆಗಳು ಹಳ್ಳಿ ಹಳ್ಳಿಗಳಿಗೆ ವಿಸ್ತರಿಸಲಿ. ಸಂಘದ ಮುಖಾಂತರ ಜನರಿಗೆ ಉತ್ತಮ ಸೇವೆ ದೊರೆಯಲಿ ಎಂದು ಶುಭ ಹಾರೈಸಿದರು.


ಎರಡು ಗ್ರಾಮಗಳ ಆಶೋತ್ತರಗಳಿಗೆ ಧ್ವನಿಯಾಗಲಿ_ನವೀನ್ ಡಿ:
ಗಣಕಯಂತ್ರ ವಿಭಾಗವನ್ನು ಉದ್ಘಾಟಿಸಿದ ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನವೀನ್ ಡಿ. ಮಾತನಾಡಿ, ಪುರುಷರಕಟ್ಟೆಯಲ್ಲಿ ಪ್ರಾರಂಭವಾದ ಗುರುದೇವ ವಿವಿಧೋದ್ದೇಶ ಸಹಕಾರ ಸಂಘವು ನರಿಮೊಗರು, ಶಾಂತಿಗೋಡು ಎರಡು ಗ್ರಾಮಗಳ ಜನರ ಆಶೋತ್ತರಗಳ ಈಡೇರಿಕೆಗೆ ಧ್ವನಿಯಾಗಿ ಕೆಲಸ ಮಾಡುವಂತಾಗಲಿ. ಸಂಘದ ಶಾಖೆಗಳು ರಾಜ್ಯವ್ಯಾಪಿ ಪಸರಿಸಲಿ ಎಂದು ಆಶಿಸಿದರು.


ಜನರ ಸೇವೆ ಮಾಡಲು ಸಹಕಾರಿ ಕ್ಷೇತ್ರ ಉತ್ತಮ ಅವಕಾಶ-ಭಾಸ್ಕರ ಆಚಾರ್ ಹಿಂದಾರ್:
ನಿರಖು ಠೇವಣಿ ಪ್ರಮಾಣ ಪತ್ರ ವಿತರಿಸಿದ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಗಳ ಸಂಚಾಲಕ ಭಾಸ್ಕರ ಆಚಾರ್ ಹಿಂದಾರ್ ಮಾತನಾಡಿ, ಸಹಕಾರಿ ಕ್ಷೇತ್ರಕ್ಕೆ ಬಾರದವರು ಯಾರೂ ಇಲ್ಲ. ಎಲ್ಲಾ ವರ್ಗದ ಜನರೂ ಸಹಕಾರ ಸಂಘಕ್ಕೆ ಬರುತ್ತಾರೆ. ಜನ ಉತ್ತಮ ಸೇವೆ ಬಯಸುತ್ತಿದ್ದು ಜನರ ಸೇವೆ ಮಾಡಲು ಸಹಕಾರಿ ಕ್ಷೇತ್ರ ಉತ್ತಮ ಅವಕಾಶವಾಗಿದೆ. ಸಿಬ್ಬಂದಿಗಳ ಉತ್ತಮ ಉತ್ತಮ ಸೇವೆ, ಆಡಳಿತ ಮಂಡಳಿಯ ಸಹಕಾರ ಹಾಗೂ ಊರಿನವರ ಪ್ರೋತ್ಸಾಹ ದೊರೆತಾಗ ಸಂಸ್ಥೆ ಉತ್ತಮವಾಗಿ ಬೆಳೆಯುತ್ತದೆ. ಸಂಸ್ಥೆಯಿಂದ ಉತ್ತಮ ಸೇವೆ ದೊರೆತಾಗ ಜನರ ಬಂದೇ ಬರುತ್ತಾರೆ. ಸಂಘವು ಅಭಿವೃದ್ಧಿ ಆಗುತ್ತದೆ ಎಂದು ಹೇಳಿದ ಅವರು ಪುರುಷರಕಟ್ಟೆಯಲ್ಲಿ ಪ್ರಾರಂಭವಾಗುವ ಯಾವುದೇ ಉದ್ಯಮ, ಸಂಸ್ಥೆಗಳ ನೆಲಕಚ್ಚಿದ ಉದಾಹರಣೆಗಳಿಲ್ಲ ಎಂದರು.


ಪುತ್ತೂರಿನಲ್ಲಿ ಇನ್ನಷ್ಟು ಶಾಖೆಗಳು ಪ್ರಾರಂಭವಾಗಲಿ:ಜಯಂತ ನಡುಬೈಲು:
ಮುಖ್ಯ ಅತಿಥಿ ಸಂಪ್ಯ ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು ಮಾತನಾಡಿ, 15 ವರ್ಷದಲ್ಲಿ 22 ಶಾಖೆ ಪ್ರಾರಂಭಿಸಿರುವ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಸಾಧನೆ ಶ್ಲಾಘನೀಯ. ಪ್ರಾಮಾಣಿಕತೆ ಹಾಗೂ ಆತ್ಮ ವಿಸ್ವಾಸದ ಸೇವೆಯಿಂದ ಈ ಸಾಧನೆ ಸಾಧ್ಯವಾಗಿದೆ. ವಾರ್ಷಿಕವಾಗಿ ರೂ.1000ಕೋಟಿ ವ್ಯವಹಾರ ಮಾಡುತ್ತಿರುವ ಸಹಕಾರಿ ಸಂಘದ ಸಾಧನೆ ರಾಷ್ಟ್ರೀಯ ಬ್ಯಾಂಕ್‌ಗೆ ಸಮನವಾಗಿದೆ. ಬೆಳೆಯುತ್ತಿರುವ ಪುತ್ತೂರಿನಲ್ಲಿ ಇನ್ನಷ್ಟು ಶಾಖೆಗಳು ಪ್ರಾರಂಭವಾಗಲಿ. ನಮ್ಮ ಸಹಕಾರ ನಿರಂತವಿದೆ ಎಂದರು.


ಪ್ರಾಮಾಣಿಕ, ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ-ಪದ್ಮನಾಭ ಮಾಣಿಂಜ:
ಅಧ್ಯಕ್ಷತೆ ವಹಿಸಿದ್ದ ಸಂಘ ಅಧ್ಯಕ್ಷ ಎನ್.ಪದ್ಮನಾಭ ಮಾಣಿಂಜ ಮಾತನಾಡಿ, ನಮ್ಮ ಶಾಖೆಯ ಮುಖಾಂತರ ಗ್ರಾಹಕರಿಗೆ ಪ್ರಾಮಾಣಿಕ, ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತ ಆಡಳಿತವನ್ನು ಸಿಬಂದಿಗಳ ಮೂಲಕ ನೀಡಲಾಗುವುದು. ಅದರ ಮೂಲಕ ನಿಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳುವಂತೆ ತಿಳಿಸಿದರು. ದೂರದ ಬೆಳ್ತಂಗಡಿಯಿಂದ ಬಂದು ಪುರುಷರಕಟ್ಟೆಯಲ್ಲಿ ಶಾಖೆ ಪ್ರಾರಂಭಿಸಲು ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದ ಅವರು ಸಂಸ್ಥೆಯನ್ನು ಬೆಳೆಸುವ ಹೊಣೆ ನಿಮ್ಮ ಮೇಲಿದೆ ಎಂದರು.


ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವಂತ ಎಲ್ಲಾ ಸೇವೆಗಳು ನಮ್ಮ ಸಂಘದಲ್ಲಿ-ಮೋನಪ್ಪ ಪೂಜಾರಿ:
ಸಂಘದ ವಿಶೇಷಾಧಿಕಾರಿ ಯಂ.ಮೋನಪ್ಪ ಪೂಜಾರಿ ಕಂಡೆತ್ಯಾರು ಮಾತನಾಡಿ, 2008ರಲ್ಲಿ ಪ್ರಾರಂಭವಾದ ಸಹಕಾರಿ ಸಂಘ 22 ಶಾಖೆಗಳನ್ನು ಹೊಂದಿದೆ. 8 ಜಿಲ್ಲೆಯ ಕಾರ್ಯವ್ಯಾಪ್ತಿ ಹೊಂದಿರುವ ಸಂಘದಲ್ಲಿ ಪ್ರಸ್ತುತ 40,000 ಸದಸ್ಯರು, ರೂ.2ಕೋಟಿ ಪಾಲು ಬಂಡವಾಳ, ರೂ.171ಕೋಟಿ ಠೇವಣಿ ಹೊಂದಿದೆ. ರೂ.147 ಸಾಲ ವಿತರಿಸಿ ಕಳೆದ ವರ್ಷ ರೂ.1000ಕೋಟಿ ಮಿಕ್ಕಿ ವ್ಯವಹಾರ ನಡೆಸಿದೆ. ಸಂಘವು ಸತತವಾಗಿ ಶೇ.98 ಸಾಲ ವಸೂಲಾತಿಯ ಸಾಧನೆ ಮಾಡಿದೆ. ಸಂಘವು 2025ಕ್ಕೆ 25 ಶಾಖೆ ಹೊಂದುವ ಯೋಜನೆಯಿದೆ. ನಮ್ಮ ಸಂಘದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ದೊರೆಯುವಂತ ಎಲ್ಲಾ ಸೇವೆ ಲಭ್ಯವಿದೆ. ಗ್ರಾಹಕರಿಗೆ ಶೀಘ್ರ ಸೇವೆ ನೀಡುವ ನಿಟ್ಟಿನಲ್ಲಿ 22 ಶಾಖೆಗಳಲ್ಲಿಯೂ ಆನ್‌ಲೈನ್ ವ್ಯವಸ್ಥೆ ಹೊಂದಿದೆ. ಹಣ ವರ್ಗಾವಣೆಗೆ ಅನುಕೂಲವಾಗಲು ಸಹಕಾರಿ ಕ್ಷೇತ್ರದಲ್ಲಿ ಪ್ರಥಮವಾಗಿ ಐಎಫ್‌ಎಸ್ ಕೋಡ್ ಪಡೆದುಕೊಂಡಿದೆ. ಫೋನ್ ಫೇ., ಎಟಿಎಂ ಪ್ರಾರಂಭಿಸಲು ಸಾಫ್ಟ್‌ವೇರ್ ಅಭಿವೃದ್ಧಿ ಪಡಿಸಲಾಗುವುದು. ಕೃಷಿ ಸಾಲ ಹೊರತು ಪಡಿಸಿ ಉಳಿದ ಎಲ್ಲಾ ಸಾಲಗಳನ್ನು ಕ್ಷಿಪ್ರವಾಗಿ ಕನಿಷ್ಠ ಬಡ್ಡಿದರದಲ್ಲಿ ನೀಡಲಾಗುವುದು. ರೂ.5. ಕೋಟಿ ತನಕ ಉದ್ಯಮ ಸಾಲ ನೀಡಲು ಸರಕಾರದಿಂದ ಅನುಮತಿ ದೊರೆತಿದೆ. ರೂ.5ಲಕ್ಷದ ಸಾಲಗಾರರ ಮರಣ ನಿಧಿ ಹೊಂದಿದೆ. ಆರು ಮಂದಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ದತ್ತು, ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಪುರುಷರಕಟ್ಟೆ ಶಾಖೆಯ 2.80ಕೋಟಿ ಠೇವಣಿಯನ್ನು ಹೊಂದಿದೆ ಎಂದರು.


ನರಿಮೊಗರು ಶ್ರೀಮೃತ್ಯಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡ ಕರೆಮನೆ ಉಳಿತಾಯ ಖಾತೆ ಪುಸ್ತಕ ವಿತರಿಸಿದರು.ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ರವೀಂದ್ರ ಕೆ.ಕಲ್ಕಾರ್ ಹಾಗೂ ಮುಂಡೂರು ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ಬಿ.ಟಿ ಮಹೇಶ್ವಂದ್ರ ಸಾಲಿಯಾನ್ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.


ಪ್ರತಿಭಾ ಪುರಸ್ಕಾರ, ಸನ್ಮಾನ:
ಕ್ರೀಡಾ ಕ್ಷೇತ್ರದ ಸಾಧಕರಾದ ದೀಕ್ಷಾ ಹಾಗೂ ಭವಿತ್ ಪರವಾಗಿ ಆತನ ತಂದೆ ಶ್ರೀಧರ ಪೂಜಾರಿಯವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಶಾಖೆಗೆ ಸ್ಥಳಾವಕಾಶ ನೀಡಿದ ಸಿದ್ದಣ್ಣ ಪ್ರಭು ಕಟ್ಟಡದ ಮ್ಹಾಲಕ ನವೀನ್ ಪ್ರಭುರವರನ್ನು ಕಾರ್ಯಕ್ರಮದಲ್ಲಿ ಸನ್ಮಾಸಲಾಯಿತು. ಶಾಖೆ ತೆರೆಯಲು ಸಹಕರಿಸಿದ ಕೆ.ಕೃಷ್ಣಪ್ಪ ಪೂಜಾರಿ ಕೈಂದಾಡಿ, ರಾಮಕೃಷ್ಣ ಎಸ್.ಡಿ ಸರ್ವೆ, ಉದಯಚಂದ್ರ ಕೆ., ಜನಾರ್ದನ ಪೂಜಾರಿ ಮುಗೇರಡ್ಕ, ಜಯಲಕ್ಷ್ಮೀ ಮಗೇರಡ್ಕ, ಹೂವಪ್ಪ ಪೂಜಾರಿ ಮುಗೇರಡ್ಕ, ಚಂದ್ರಕಲಾ ಮುಕ್ವೆ, ಲೋಹಿತ್ ಕಲ್ಕಾರ್, ರವೀಂದ್ರ ಕೆ. ಕಲ್ಕಾರ್, ಪುರಂದರ ಬಂಗೇರ ಒತ್ತೆಮುಂಡೂರು, ಶರತ್ ಕೈಪಂಗಳ, ಮೋನಪ್ಪ ಪೂಜಾರಿ ಮುಂಡೋಡಿ, ಎಮ್ ಬಾಲಕೃಷ್ಣ ಪೆರಿಯಡ್ಕ, ದಿನೇಶ್ ಕೈಪಂಗಳರವರನ್ನು ಕೃತಜ್ಞತಾ ಪತ್ರ ನೀಡಿ ಗೌರವಿಸಲಾಯಿತು.


ಪ್ರಗತಿಪರ ಕೃಷಿಕ ಕೆ.ಎಸ್ ಚಂದ್ರಶೇಖರ, ನರಿಮೊಗರು ಗ್ರಾ.ಪಂ ಸದಸ್ಯ ನವೀನ್ ರೈ ಶಿಬರ, ನರಿಮೊಗರು ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ವೇದನಾಥ ಸುವರ್ಣ, ಸರ್ವೆ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ರಾಮಕೃಷ್ಣ ಸರ್ವೆದೋಳ, ಕಟ್ಟಡದ ಮ್ಹಾಲಕ ನವೀನ್ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಗೌರಿ ಹೊನ್ನಪ್ಪ ಶಾಂತಿಗೋಡು ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಭಗೀರಥ ಜಿ. ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ಥ್ ಕುಮಾರ್ ಹಾಗೂ ಕಡಬ ಶಾಖೆಯ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಆನಂದ ಪೂಜಾರಿ ಸರ್ವೆದೋಳ ವಂದಿಸಿದರು.
ನಿರ್ದೇಶಕರಾದ ಸಂಜೀವ ಪೂಜಾರಿ, ಜಗದೀಶ್ಚಂದ್ರ ಡಿ,ಕೆ., ಡಾ.ರಾಜರಾಮ್ ಕೆ.ಬಿ., ಜಯವಿಕ್ರಮ, ಕೆ.ಪಿ ದಿವಾಕರ, ತನುಜಾ ಶೇಖರ್, ಚಂದ್ರಶೇಖರ್, ಶೇಖರ ಬಂಗೇರ, ಧರಣೇಂದ್ರ ಕುಮಾರ್, ಪುರುಷರಕಟ್ಟೆ ಶಾಖಾ ವ್ಯವಸ್ಥಾಪಕ, ಪವನ್ ಕೆ., ಕೇಂದ್ರ ಕಚೇರಿ ವ್ಯವಸ್ಥಾಪಕ ಕೀರ್ತನ್ ಕುಮಾರ್ ಹಾಗೂ ಮಾರುಕಟ್ಟೆ ವ್ಯವಸ್ಥಾಪಕ ಶಿವಪ್ರಕಾಶ್ ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here