ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ನಗರೋತ್ತಾನ ಯೋಜನೆಯಡಿಯಲ್ಲಿ ಮಂಜೂರಾಗಿರುವ ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಅಭಿನಂದನೆ ಸಲ್ಲಿಸಿ ಇಲ್ಲಿನ ಕೋರ್ಟ್ ರಸ್ತೆಯಲ್ಲಿ ಅಳವಡಿಸಿದ ಬ್ಯಾನರ್ಗೆ ಹಾನಿಗೊಳಿಸಲಾಗಿದೆ ಎಂದು ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೋರ್ಟ್ ರಸ್ತೆಯಲ್ಲಿ ಈ ಹಿಂದೆ ನಡೆದ ಕಾಂಕ್ರಿಟೀಕರಣ ರಸ್ತೆ ಕಾಮಗಾರಿ ಕಳಪೆಯಾಗಿ ಅಲ್ಲಲ್ಲಿ ಕಾಂಕ್ರೀಟ್ ಕಿತ್ತು ಹೋಗಿ ಸಂಚಾರಕ್ಕೆ ತೊಂದರೆಯಾಗುತ್ತಿರುವುದಕ್ಕೆ ಸದರಿ ರಸ್ತೆಯನ್ನು ಸುಸಜ್ಜಿತವಾಗಿ ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಕಾಂಕ್ರೀಟ್ ರಸ್ತೆ ಮೇಲೆ ವೈಟ್ ಟಾಪಿಂಗ್ ಮಾಡುವ ಕಾಮಗಾರಿಗೆ ಶಾಸಕ ಅಶೋಕ್ ಕುಮಾರ್ ರೈ ಯವರು ರೂ.42 ಲಕ್ಷ ಅನುದಾನ ಮಂಜೂರುಗೊಳಿಸಿ ಕಾಮಗಾರಿಯ ಶಂಕುಸ್ಥಾಪನೆ ಮಾಡಿದ್ದರು. ಅನುದಾನ ಮಂಜೂರು ಮಾಡಿರುವ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಅಭಿನಂದನೆ ಸಲ್ಲಿಸುವ ಫ್ಲೆಕ್ಸ್ನ್ನು ಮುಖ್ಯ ರಸ್ತೆಯಿಂದ ಕೋರ್ಟ್ ರಸ್ತೆಗೆ ತಿರುಗುವಲ್ಲಿ ನಗರ ಕಾಂಗ್ರೆಸ್ ವತಿಯಿಂದ ಅಳವಡಿಸಲಾಗಿತ್ತು. ಈ ಫ್ಲೆಕ್ಸ್ನ್ನು ರಾತ್ರಿ ಯಾರೋ ಕಿಡಿಗೇಡಿಗಳು ಹರಿದು ಹಾನಿಗೊಳಿಸಿದ್ದಾರೆ. ಹಾನಿಗೊಳಿಸಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಆಲಿಯವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.