ಆನಡ್ಕ ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ‌ ಶುಭಲತಾ ಹಾರಾಡಿ ಇಂದು ನಿವೃತ್ತಿ

0

ಕೆಮ್ಮಾಯಿ:ಶಾಂತಿಗೋಡು ಆನಡ್ಕ ಸರಕಾರಿ ಹಿ.ಪ್ರಾ.ಶಾಲೆಯ ಮುಖ್ಯ ಗುರುಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ, ‘ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿ ಪುರಸ್ಕೃತರಾಗಿರುವ ಶ್ರೀಮತಿ ಶುಭಲತಾ ಹಾರಾಡಿ ಅವರು ಜ.31ರಂದು ವೃತ್ತಿಯಿಂದ ನಿವೃತ್ತಿ ಹೊಂದಲಿದ್ದಾರೆ.


ಬಂಟ್ವಾಳ ಕೊಯಿಲ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಉಚಿತ ಸೇವೆಯನ್ನು ಸಲ್ಲಿಸಿ ಬಳಿಕ ಸರಕಾರಿ ಶಾಲಾ ಶಿಕ್ಷಕಿಯಾಗಿ ನೇಮಕಗೊಂಡು ಕಾರ್ಕಳ ತಾಲೂಕಿನ ದುರ್ಗಾತೆಳ್ಳಾರ್‌ನಲ್ಲಿ ವೃತ್ತಿ ಜೀವನ ಆರಂಭಿಸಿದ್ದ ಇವರು ಬೆಳ್ತಂಗಡಿ ತಾಲೂಕಿನ ಕರಾಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ, ವರ್ಗಾವಣೆಗೊಂಡು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿಯಲ್ಲಿ 27 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿದ್ದರು.

ಈ ಅವಧಿಯಲ್ಲಿ ಹಾರಾಡಿ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗಾಗಿ ಉತ್ತಮ ಕಾರ್ಯ ಯೋಜನೆಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳ ಮತ್ತು ಪೋಷಕರ ಪ್ರೀತಿ, ವಿಶ್ವಾಸ ಗಳಿಸಿದ್ದರು.ವರ್ಗಾವಣೆಗೊಂಡು ಬಳಿಕ ಸುಳ್ಯ ತಾಲೂಕಿನ ಮುರೂರು ಶಾಲೆಯಲ್ಲಿ ಸೇವೆ ಸಲ್ಲಿಸಿ ಭಡ್ತಿ ಹೊಂದಿ ಆನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮುಖ್ಯಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಸುಮಾರು 38 ವರ್ಷಗಳ ಸುದೀರ್ಘ ಸೇವೆಯಿಂದ ನಿವೃತ್ತಿ ಹೊಂದುತ್ತಿದ್ದಾರೆ.ಇವರ ಸೇವಾ ಅವಧಿಯಲ್ಲಿ ಆನಡ್ಕ ಶಾಲೆಗೆ ಉತ್ತಮ ನಲಿ-ಕಲಿ ಪ್ರಶಸ್ತಿ, ಉತ್ತಮ ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಮೇಲುಸ್ತುವಾರಿ ಸಮಿತಿ ಪ್ರಶಸ್ತಿ, ರಾಜ್ಯಮಟ್ಟದ ಕೃಷಿ ಮೇಳದಲ್ಲಿ ಪ್ರಾಥಮಿಕ ವಿಭಾಗದಲ್ಲಿ ಕೃಷಿ ಚಟುವಟಿಕೆಗಳಿಗಾಗಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಬಂದಿವೆ.


ಶಾಲೆಯ ಸರ್ವಾಂಗೀಣ ಪ್ರಗತಿಗಾಗಿ ದಾನಿಗಳ ನೆರವಿನೊಂದಿಗೆ ಶಾಲೆಗೆ ಹಲವು ಸೌಲಭ್ಯ,ಕೊಡುಗೆಗಳನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.ಸ್ವತ: .ದಾನಿಯೂ ಆಗಿರುವ ಇವರು ತನ್ನ ಕಡೆಯಿಂದ ವರ್ಷಕ್ಕೊಂದು ಕೊಡುಗೆಯನ್ನು ಶಾಲೆಗೆ ನೀಡುತ್ತಿದ್ದರು.ಶಾಲಾ ಸಮೀಪದ ಗುಡ್ಡವನ್ನು ತೆರವುಗೊಳಿಸಿ ಆಟದ ಮೈದಾನವನ್ನು ವಿಸ್ತರಿಸಿ ದಾನಿಗಳ ನೆರವಿನಿಂದ ಅಭಿವೃದ್ಧಿಪಡಿಸಿದ್ದಾರೆ.


ಶಿಕ್ಷಣ ಇಲಾಖೆ 2023-2024ನೇ ಸಾಲಿನಲ್ಲಿ ಇವರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.ನೋಣಯ್ಯ-ಗುಲಾಬಿ ದಂಪತಿಯ ಪುತ್ರಿಯಾಗಿರುವ ಇವರು ಪತಿ ಹರೀಶ್ ಅವರೊಂದಿಗೆ ಹಾರಾಡಿಯಲ್ಲಿ ವಾಸವಿದ್ದಾರೆ.ಇವರು ಮಗ ವಿಕ್ರಮ್, ಮಗಳು ವಿನುತಾ, ಸೊಸೆ, ಅಳಿಯ ಇಂಜಿನಿಯರ್‌ಗಳಾಗಿದ್ದು ಬೆಂಗಳೂರಿನಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ

LEAVE A REPLY

Please enter your comment!
Please enter your name here