ಜಿಲ್ಲಾಡಳಿತ ಹೈ ಅಲರ್ಟ್:
* ತನಿಖಾಧಿಕಾರಿ ಪರ ಎಪಿಪಿ ದಿವ್ಯರಾಜ್ ಹೆಗ್ಡೆ ಉರ್ಲಾಂಡಿ ವಾದ ಮಂಡನೆ-ಬಂಧಿತರಿಗೆ ಫೆ.5ರವರೆಗೆ ಪೊಲೀಸ್ ಕಸ್ಟಡಿ
* ಆರೋಪಿಗಳಾದ ಸಯ್ಯದ್ ಬಶೀರ್, ಕಿರಣ್ ಪರ ಮಂಗಳೂರಿನ ಖ್ಯಾತ ನ್ಯಾಯವಾದಿ ಅರುಣ್ ಬಂಗೇರ ಕೋರ್ಟ್ಗೆ ಹಾಜರ್
ಪುತ್ತೂರು: ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕೇಡಿ ಗ್ರಾಮದ ಗೋಳಿಯಂಗಡಿ ಸಮೀಪದ ಕಡ್ತ್ಯಾರ್ ಎಂಬಲ್ಲಿ ಜ.28ರಂದು ಸಂಜೆ 5.30ರ ವೇಳೆಗೆ ಕುಕ್ಕೇಡಿಯ ಕುಚ್ಚೋಡಿ ನಿವಾಸಿ ಸಯ್ಯದ್ ಬಶೀರ್ ಎಂಬವರಿಗೆ ಸೇರಿದ ಸಾಲಿಡ್ ಫಯರ್ ವರ್ಕ್ಸ್ ಹೆಸರಿನ ಸುಡುಮದ್ದು ತಯಾರಿಕಾ ಘಟಕದಲ್ಲಿ ಭೀಕರ ಸ್ಪೋಟ ಸಂಭವಿಸಿ ಕಾರ್ಮಿಕರಾಗಿದ್ದ ಕೇರಳದ ತ್ರಿಶೂರ್ ನಿವಾಸಿ ವರ್ಗೀಸ್ (69), ಹಾಸನದ ಅನ್ನನಾಯ್ಕನಹಳ್ಳಿ ಚೇತನ್ ಎ.ಯು. (27) ಹಾಗೂ ಪಾಲಕ್ಕಾಡ್ನ ಕೈರಾಡಿ ಕುರುಂಬೂರು ನಿವಾಸಿ ಸ್ವಾಮಿ ಯಾನೆ ನಾರಾಯಣ ಕೆ. (56)ರವರು ದಾರುಣವಾಗಿ ಮೃತಪಟ್ಟ ಘಟನೆ ಬಳಿಕ ದ.ಕ. ಜಿಲ್ಲಾಡಳಿತ ಹೈಅಲರ್ಟ್ ಆಗಿದೆ.
ಪೊಲೀಸ್ ಇಲಾಖೆ ನೇತೃತ್ವದಲ್ಲಿ ಫೊರೆನ್ಸಿಕ್, ಅಗ್ನಿಶಾಮಕ ದಳ, ಬಿಡಿಡಿಎಸ್, ಕಂದಾಯ, ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಹಕಾರದಿಂದ ಸ್ಪೋಟ ಪ್ರಕರಣದ ತನಿಖೆ ನಡೆಯುತ್ತಿದೆ. ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿ ಕಡ್ತ್ಯಾರ್ ಚರಡಿಕೆ ನಿವಾಸಿ ಶಾಂತಿ ಮ್ಯಾಥ್ಯೂ(33) ಎಂಬವರು ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಗ್ರಾಮಾಂತರ ವೃತ್ತ ನಿರೀಕ್ಷಕರ ಕಚೇರಿ ವ್ಯಾಪ್ತಿಯ ವೇಣೂರು ಪೊಲೀಸ್ ಠಾಣೆಯಲ್ಲಿ 1884ರ ಸ್ಪೋಟಕ ವಸ್ತುಗಳ ಕಾಯ್ದೆಯ ಸೆಕ್ಷನ್ 9ಬಿ (ಸ್ಪೋಟಕ ತಯಾರಿ ಪರವಾನಗಿಯ ಷರತ್ತು ಉಲ್ಲಂಘನೆ) ಹಾಗೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 286 (ಸೋಟಕ ಸಾಮಾಗ್ರಿ ನಿರ್ವಹಣೆ ವೇಳೆ ನಿರ್ಲಕ್ಷ್ಯ), 304 (ವ್ಯಕ್ತಿಗಳ ಸಾವಿಗೆ ಕಾರಣವಾಗುವ ಕೃತ್ಯ ಎಸಗುವುದು) ಮತ್ತು 427 (ಆಸ್ತಿಗೆ ಹಾನಿ) ಅನ್ವಯ ಪ್ರಕರಣ ದಾಖಲಾಗಿದ್ದು ಘಟನೆ ನಡೆದ ತಕ್ಷಣ ತಲೆ ಮರೆಸಿಕೊಂಡಿದ್ದ ಪಟಾಕಿ ತಯಾರಿಕಾ ಘಟಕದ ಮಾಲಕ ಸಯ್ಯದ್ ಬಶೀರ್(47) ಮತ್ತು ಕಾರ್ಮಿಕರನ್ನು ಕರೆತಂದು ಕೆಲಸ ಮಾಡಿಸುತ್ತಿದ್ದ ಹಾಸನ ಜಿಲ್ಲೆಯ ವಡ್ಡರಹಳ್ಳಿಯ ಕಿರಣ್(24ವ)ರವರನ್ನು ಸುಳ್ಯ ತಾಲೂಕಿನ ಕಲ್ಲಗುಂಡಿಯಲ್ಲಿ ಸುಳ್ಯ ಎಸ್.ಐ. ಈರಯ್ಯ ದೂಂತೂರು ನೇತೃತ್ವದಲ್ಲಿ ಬಂಧಿಸಲಾಗಿದ್ದು ಅವರನ್ನು ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎ-ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಹೆಚ್ಚಿನ ತನಿಖೆ ನಡೆಸುವ ಅಗತ್ಯ ಇರುವುದರಿಂದ ಬಂಽತರನ್ನು ಕಸ್ಟಡಿಗೆ ಒಪ್ಪಿಸುವಂತೆ ಪ್ರಕರಣದ ತನಿಖಾಧಿಕಾರಿಯಾಗಿರುವ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಪರ ಸಹಾಯಕ ಸರಕಾರಿ ಅಭಿಯೋಜಕರಾಗಿರುವ ಪುತ್ತೂರು ಉರ್ಲಾಂಡಿಯ ದಿವ್ಯರಾಜ್ ಹೆಗ್ಡೆ ಮನವಿ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಧೀಶ ವಿಜಯೇಂದ್ರ ಅವರು ಬಂಧಿತ ಆರೋಪಿಗಳನ್ನು ಫೆಬ್ರವರಿ 5ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ. ಆರೋಪಿಗಳಾದ ಸಯ್ಯದ್ ಬಶೀರ್ ಮತ್ತು ಕಿರಣ್ ಪರ ಮಂಗಳೂರಿನ ಖ್ಯಾತ ವಕೀಲ ಅರುಣ್ ಬಂಗೇರ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಸುಡುಮದ್ದು ತಯಾರಿ ಘಟಕಗಳಿಗೆ ತಾತ್ಕಾಲಿಕ ನಿರ್ಬಂಧ-ಮಂಗಳೂರು, ಪುತ್ತೂರು ಎ.ಸಿ. ಅಧ್ಯಕ್ಷತೆಯಲ್ಲಿ ಸಮಿತಿ:
ಸುಡುಮದ್ದು ಘಟಕದಲ್ಲಿ ಸೋಟ ಸಂಭವಿಸಿದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಜಿಲ್ಲಾ ವ್ಯಾಪ್ತಿಯಲ್ಲಿ ಎಲ್ಲಾ ಸುಡುಮದ್ದು ತಯಾರಿ ಘಟಕಗಳ ಮೇಲೆ ತತ್ಕ್ಷಣದಿಂದಲೇ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ನಿಬಂಧ ವಿಽಸಿ ಮುಂದಿನ ಆದೇಶದವರೆಗೆ ಅವುಗಳನ್ನು ಅಮಾನತಿನಲ್ಲಿರಿಸಿ ಆದೇಶ ಹೊರಡಿಸಿದೆ. ಈ ಮಧ್ಯೆ ಎಲ್ಲಾ ಘಟಕ, ದಾಸ್ತಾನು, ಮಾರಾಟ ಮಳಿಗೆಗಳು ಕೈಗೊಂಡಿರುವ ಮುಂಜಾಗ್ರತೆ ಕ್ರಮಗಳ ಸ್ಥಳ ಪರಿಶೀಲನೆಗೆ ಮಂಗಳೂರು ಹಾಗೂ ಪುತ್ತೂರು ಉಪವಿಭಾಗಾಽಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದೆ. 1984ರ ಸೋಟಕಗಳ ಕಾಯ್ದೆ ಮತ್ತು 2008ರ ಸ್ಪೋಟಕಗಳ ನಿಯಮಗಳ ಅನುಸಾರ ಸುಡುಮದ್ದು ತಯಾರಿ, ದಾಸ್ತಾನು ಹಾಗೂ ಮಾರಾಟ ಮಳಿಗೆಗಳಿಗೆ ಜಿಲ್ಲಾಡಳಿತ ನಮೂನೆ ಎಲ್ಇ-5 ಪ್ರಕಾರ ಪರವಾನಗಿ ನೀಡಿದೆ. ಸಮಿತಿಯು ತನ್ನ ವ್ಯಾಪ್ತಿಯ ಎಲ್ಲಾ ಸುಡುಮದ್ದು ಘಟಕಗಳನ್ನು ಸೀಲ್ಡೌನ್ ಮಾಡಬೇಕು. ಸುಡುಮದ್ದು ತಯಾರಿಸುವ, ದಾಸ್ತಾನು ಮಾಡುವ ಹಾಗೂ ಮಾರಾಟ ಮಾಡುವ ಎಲ್ಲಾ ಘಟಕಗಳನ್ನು ಪರಿಶೀಲಿಸಬೇಕು. ಪರಿಶೀಲನೆ ಸಂದರ್ಭ ಜಿಪಿಎಸ್ ಅಧರಿತ ಫೋಟೋದ ಜೊತೆ ವರದಿ ನೀಡಬೇಕು. ನಮೂನೆ ಎಲ್ಇ-5 ಅಡಿ ಪಡೆದ ಪರವಾನಗಿಗಳನ್ನು, ಅಗ್ನಿಶಾಮಕ ಇಲಾಖೆಯಿಂದ ಪಡೆದ ನಿರಾಕ್ಷೇಪಣಾ ಪತ್ರ ಹಾಗೂ ಅವುಗಳ ವಾಯಿದೆಯನ್ನು, ಘಟಕಗಳಲ್ಲಿ ಅಗ್ನಿಶಾಮಕ ವ್ಯವಸ್ಥೆ ಹೊಂದಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಹಸಿರು ಪಟಾಕಿ ಉತ್ಪಾದಕರು ಅಧಿಕೃತ ಉತ್ಪಾದಕರಿಂದ ಹಾಗೂ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದಿವೆಯೇ ಎಂದು ಪರಿಶೀಲಿಸಬೇಕು. ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಂದ ಪಡೆದ ನಿರಾಕ್ಷೇಪಣಾ ಪತ್ರಗಳನ್ನು ಹಾಜರುಪಡಿಸಿದ ಬಳಿಕವಷ್ಟೇ ಈ ಘಟಕಗಳ ಕಾರ್ಯಾರಂಭದ ಬಗ್ಗೆ ಸ್ಪಷ್ಟ ಅಭಿಪ್ರಾಯದೊಂದಿಗೆ ಕಚೇರಿಗೆ ಶಿಫರಸು ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಫೆ.೫ರೊಳಗೆ ವರದಿ ಸಲ್ಲಿಸಲು ಸೂಚನೆ:
ಪರವಾನಗಿ ಪಡೆದ ಘಟಕಗಳು ಸುಪ್ರೀಂಕೋರ್ಟ್ನ ಆದೇಶ ಮತ್ತು ಸರ್ಕಾರದ ನಿರ್ದೇಶನ ಮತ್ತು ಮಾರ್ಗಸೂಚಿಗಳ ಪ್ರಕಾರ ಹಸಿರು ಪಟಾಕಿಗಳನ್ನು ಮಾತ್ರ ತಯಾರಿಸಲು ಹಾಗೂ ಮಾರಾಟ ಮಾಡಲು ಅವಕಾಶ ಇದೆ. ಇದರ ಮೇಲ್ವಿಚಾರಣೆ ಮಾಡಲು ಹಾಗೂ ಅನಽಕೃತವಾಗಿ ಪಟಾಕಿ ವ್ಯವಹಾರ ನಡೆಸುವುದನ್ನು ನಿಯಂತ್ರಿಸಲು ಪಟಾಕಿ ತಯಾರಿ, ದಾಸ್ತಾನು ಮತ್ತು ಮಾರಾಟದ ಸಂದರ್ಭದಲ್ಲಿ ಅಗ್ನಿ ಅನಾಹುತ ಸಂಭವಿಸುವುದನ್ನು ತಡೆಯಲು ಜಿಲ್ಲಾಡಳಿತ ಆಯಾ ಉಪವಿಭಾಗಾಽಕಾರಿ (ಪುತ್ತೂರು/ ಮಂಗಳೂರು) ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದೆ. ಬಂಟ್ವಾಳ ಮತ್ತು ಪುತ್ತೂರು ಉಪವಿಭಾಗದ ಡಿಎಸ್ಪಿ, ವಲಯದ ಅಗ್ನಿಶಾಮಕ ಅಧಿಕಾರಿ, ಮೆಸ್ಕಾಂನ ಕಾರ್ಯನಿರ್ವಾಹಕ ಎಂಜಿನಿಯರ್, ಆಯಾ ತಾಲ್ಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕಾಧಿಕಾರಿಯವರು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಽಕಾರಿಯವರು ಈ ಸಮಿತಿಯ ಸದಸ್ಯರಾಗಿದ್ದಾರೆ. ಈ ಸಮಿತಿಗಳು ಜ.30ರಿಂದ ಫೆ.೫ರ ಒಳಗೆ ಖುದ್ದು ಸ್ಥಳ ಪರಿಶೀಲನೆ ನಡೆಸಿ ಪೂರಕ ದಾಖಲೆಗಳೊಂದಿಗೆ ಕಚೇರಿಗೆ ಅನುಪಾಲನಾ ವರದಿ ಸಲ್ಲಿಸುವಂತೆ ಜಿಲ್ಲಾಽಕಾರಿ ಸೂಚಿಸಿದ್ದಾರೆ.