ಕಡಿಮೆ ತೆರಿಗೆ ವಸೂಲಿ ಮಾಡಿರುವ 10 ಗ್ರಾ.ಪಂ.ಪಿಡಿಒಗಳಿಗೆ ನೋಟೀಸ್- ಕ್ರಮ ಜರಗಿಸುವಂತೆ ಜಿ.ಪಂ.ಸಿಇಒಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ

0

ಬೆಂಗಳೂರು:ರಾಜ್ಯದ ಪ್ರತಿ ತಾಲ್ಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಅತ್ಯಂತ ಕಡಿಮೆ ತೆರಿಗೆ ವಸೂಲಿ ಮಾಡಿರುವ ತಲಾ 10 ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ, ಕ್ರಮ ಜರುಗಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದ್ದಾರೆ.


ರಾಜ್ಯದ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಜತೆ ವಿಡಿಯೊ ಕಾನರೆನ್ಸಿಂಗ್ ನಡೆಸಿದ ಅವರು, ಈ ಸೂಚನೆ ನೀಡಿದರು. ಸಚಿವರ ಸೂಚನೆ ಆಧರಿಸಿ ಸಿಇಒಗಳಿಗೆ ಸುತ್ತೋಲೆ ಹೊರಡಿಸಿರುವ ಇಲಾಖೆಯ ನಿರ್ದೇಶಕರು, ಪಿಡಿಒಗಳ ವಿರುದ್ಧ ಕ್ರಮ ಜರುಗಿಸಿ ಸೋಮವಾರದ ಒಳಗೆ ಮಾಹಿತಿ ಸಲ್ಲಿಸುವಂತೆ ಗಡುವು ನೀಡಿದ್ದಾರೆ.ಗ್ರಾಮ ಪಂಚಾಯಿತಿಗಳಲ್ಲಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ಪ್ರಗತಿ ಕುಂಠಿತವಾಗಿರುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ತೆರಿಗೆ ಸಂಗ್ರಹದಲ್ಲಿ ಗುರಿ ತಲುಪಲು ನಿರಾಸಕ್ತಿ ತಳೆದಿರುವುದಕ್ಕೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.


ಕಡತ ಒಪ್ಪಿಸಲು ನಿರ್ದೇಶನ:
ಅನುದಾನದ ಬಳಕೆ ಕುರಿತು ಸಾಮಾಜಿಕ ಲೆಕ್ಕಪರಿಶೋಧನೆಗೆ ಕಡ್ಡಾಯವಾಗಿ ಕಡತ ಒಪ್ಪಿಸಬೇಕೆಂಬ ಆದೇಶವನ್ನು ಹಲವು ಗ್ರಾಮ ಪಂಚಾಯಿತಿಗಳು ಪಾಲಿಸುತ್ತಿಲ್ಲ.ಎಲ್ಲ ಪಂಚಾಯಿತಿಗಳಲ್ಲೂ ತಕ್ಷಣ ಕಡತ ಒಪ್ಪಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.


ಕುಡಿಯುವ ನೀರಿನ ಕೊರತೆ ಪರಿಹರಿಸಲು ತಕ್ಷಣದಿಂದಲೇ ಕಾರ್ಯಪ್ರವೃತ್ತರಾಗಬೇಕು:
ಬೇಸಿಗೆ ಆರಂಭವಾಗುತ್ತಿದ್ದು, ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಕೊರತೆ ತೀವ್ರವಾಗುವ ಸಾಧ್ಯತೆ ಇದೆ. ಆದ್ದರಿಂದ ಎಲ್ಲ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಕುಡಿಯುವ ನೀರಿನ ಕೊರತೆ ಪರಿಹರಿಸಲು ತಕ್ಷಣದಿಂದಲೇ ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದರು.


ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಆಯುಕ್ತಾಲಯದ ಆಯುಕ್ತ ಪವನ್ ಕುಮಾರ್ ಮಾಲಪಾಟಿ, ಗ್ರಾಮೀಣ ನೀರು ಸರಬರಾಜು ಇಲಾಖೆ ಆಯುಕ್ತ ಕೆ. ನಾಗೇಂದ್ರ ಪ್ರಸಾದ್ ಸಭೆಯಲ್ಲಿದ್ದರು.

ಸಚಿವರ ಸೂಚನೆ ಆಧರಿಸಿ ಜಿ.ಪಂ.ಸಿಇಒಗಳಿಗೆ ಸುತ್ತೋಲೆ ಹೊರಡಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ನಿರ್ದೇಶಕರು, ಪಿಡಿಒಗಳ ವಿರುದ್ಧ ಕ್ರಮ ಜರುಗಿಸಿ ಸೋಮವಾರದ ಒಳಗೆ ಮಾಹಿತಿ ಸಲ್ಲಿಸುವಂತೆ ಗಡುವು ನೀಡಿದ್ದಾರೆ.

LEAVE A REPLY

Please enter your comment!
Please enter your name here