ನೆಲ್ಯಾಡಿ: ಪ್ರಾಚೀನ ಇತಿಹಾಸ ಹೊಂದಿರುವ ಬಜತ್ತೂರು ಗ್ರಾಮದ ಒಡ್ಯಮೆಯಲ್ಲಿರುವ ಶ್ರೀ ನರಸಿಂಹ ಮಠ, ಕೂವೆ ಮಠ(ಶಿವತ್ತಮಠ) ಜೀರ್ಣೋದ್ದಾರಗೊಳ್ಳುತ್ತಿದ್ದು ಬ್ರಹ್ಮಕಲಶೋತ್ಸವಕ್ಕೆ ಸಿದ್ಧಗೊಳ್ಳುತ್ತಿದೆ. ಪುನರ್ನಿರ್ಮಾಣಗೊಳ್ಳುತ್ತಿರುವ ನೂತನ ಮಠದಲ್ಲಿ ಫೆ.23ರಿಂದ 26ರ ತನಕ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಸಪರಿವಾರ ಶ್ರೀ ನರಸಿಂಹ ದೇವರ ಹಾಗೂ ನಾಗದೇವರ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ನಡೆಯಲಿದೆ ಎಂದು ಜೀರ್ಣೋದ್ದಾರ ಸಮಿತಿ ಕಾರ್ಯಾಧ್ಯಕ್ಷ ರಾಧಾಕೃಷ್ಣ ಕೆ.ಎಸ್ ಕೂವೆಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಉತ್ಖನನ ವೇಳೆ ವಿಗ್ರಹ ಪತ್ತೆ:
ಕೂವೆಮಠ(ಶಿವತ್ತಮಠ)ಕ್ಕೆ ಬಹಳಷ್ಟು ಐತಿಹ್ಯವಿದೆ. ಪ್ರಶ್ನೆಚಿಂತನೆಯಲ್ಲಿ ಕಂಡುಬಂದಂತೆ ಕೂವೆಮಠದಲ್ಲಿ ಉಗ್ರನರಸಿಂಹನ ದೇಗುಲವಿತ್ತು ಎಂದು ಕಂಡುಬಂದಿತ್ತು. ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ಪಾಳುಬಿದ್ದ ಕಟ್ಟಡದಲ್ಲಿ ಉತ್ಖನನ ಮಾಡಿದಾಗ ಶ್ರೀ ನರಸಿಂಹ, ಶ್ರೀ ಮಹಾಗಣಪತಿ, ಲಕ್ಷ್ಮೀ ನರಸಿಂಹ, ಬಾಲಕೃಷ್ಣ, ಆಂಜನೇಯ, ಗರುಡ ಮುಂತಾದ ದೇವರ ವಿಗ್ರಹಗಳು ಪತ್ತೆಯಾಯಿತು. ಶ್ರೀ ರಕ್ತೇಶ್ವರಿಯ ಅಷ್ಟದಳ ಪದ್ಮಶಿಲೆ, ತೀರ್ಥಬಾವಿ, ಸಾಲಿಗ್ರಾಮ, ಶಂಖ, ದೀಪ, ಘಂಟಾಮಣಿ, ಆರತಿ, ಉದ್ಧರಣೆ ಮುಂತಾದ ಅನೇಕ ಪೂಜಾ ಸಾಮಾಗ್ರಿಗಳೂ ದೊರೆಯಿತು. ತೀರ್ಥಬಾವಿಯಲ್ಲಿ ಬಿಳಿಯ ಬಣ್ಣದ ಆಮೆಯೂ ಕಾಣಿಸಿಕೊಂಡಿದ್ದು ಅದು ಈಗಲೂ ಇದೆ ಎನ್ನಲಾಗುತ್ತಿದೆ. ದೇವರ ವಿಗ್ರಹ ಹಾಗೂ ಪೂಜಾ ಸಾಮಾಗ್ರಿಗಳೂ ದೊರೆತಿರುವುದರಿಂದ ಬಹಳಷ್ಟು ವರ್ಷಗಳ ಹಿಂದೆ ಇಲ್ಲಿ ದೇಗುಲವಿದ್ದು ಪೂಜೆಗಳು ನಡೆಯುತಿತ್ತು. ಕಾಲಕ್ರಮೇಣ ಪೂಜೆ ನಿಂತು ದೇವಾಲಯವೂ ನಶಿಸಿ ಹೋಗಿರಬಹುದು ಎಂದು ನಂಬಲಾಗಿದೆ. ಹಿಂದೆ ಈ ಪ್ರದೇಶದಲ್ಲಿ ಬೈಪಡಿತ್ತಾಯ ಕುಲದ ಶಿವಳ್ಳಿ ಬ್ರಾಹ್ಮಣರು ನೆಲೆಸಿದ್ದರು. ಆದರೆ ಈ ಕುಟುಂಬ 110 ವರ್ಷಗಳ ಹಿಂದೆಯೇ ಈ ಸ್ಥಳವನ್ನು ವಿಕ್ರಯಿಸಿ ಪರರಾಜ್ಯದಲ್ಲಿ ನೆಲೆಸಿದ್ದಾರೆ. ಇಂದಿಗೂ ಈ ಕುಟುಂಬದವರು ಕೇರಳ, ತಮಿಳುನಾಡಿನ ಹಲವು ದೇವಾಲಯಗಳಲ್ಲಿ ಅರ್ಚಕರಾಗಿದ್ದಾರೆ. ಈ ಕುಟುಂಬವೇ ಇಲ್ಲಿ ದೇವರ ಆರಾಧನೆ ಮಾಡುತ್ತಿತ್ತು ಎಂದು ನಂಬಲಾಗಿದೆ.
ರುಕ್ಮಿಣಿ ಕುಟುಂಬಕ್ಕೆ ಸಂಕಷ್ಟ:
ಪ್ರಸ್ತುತ ಇಲ್ಲಿ ವಾಸವಿರುವ ರುಕ್ಮಿಣಿ ಮತ್ತು ಮನೆಯವರು ತಮ್ಮ ಸಂಸಾರಕ್ಕೆ ಪದೇ ಪದೇ ಸಂಕಷ್ಟ ಎದುರಾಗುತ್ತಿದ್ದ ಸಂದರ್ಭದಲ್ಲಿ ಸಂಕಷ್ಟಗಳ ಪರಿಹಾರಕ್ಕಾಗಿ ಪ್ರಶ್ನೆ ಚಿಂತನೆ ನಡೆಸಿದಾಗ ನಾಗದೋಷ ಕಂಡು ಬಂತು. ಈ ಹಿನ್ನೆಲೆಯಲ್ಲಿ ಮನೆ ಸಮೀಪದ ಬನವನ್ನು ಶೋಧಿಸಿದಾಗ ಸರ್ಪಗಾವಲು ಇದ್ದ 11 ನಾಗನ ಕಲ್ಲುಗಳು ಗೋಚರವಾದವು. ಮರಳಿ ಪ್ರಶ್ನೆ ಇಟ್ಟಾಗ ದೇಗುಲದ ಅಸ್ತಿತ್ವದ ಉತ್ತರ ಬಂತು. ಪರಿಶೋಧಿಸಿದಾಗ ದೇಗುಲ ಇರುವುದು ಕಂಡುಬಂದಿದೆ. ಸಮೀಪದ ಕಾಂಚನ ಮನೆತನದ ದಾಖಲೆಗಳಲ್ಲೂ ಈ ದೇವಸ್ಥಾನಕ್ಕೆ ಸಂಬಂಧಿಸಿದ ಕೆಲವು ಉಲ್ಲೇಖಗಳು ಇದ್ದು ಈ ವಿಚಾರಕ್ಕೆ ಪುಷ್ಠಿ ನೀಡಿದೆ.
ಜೀರ್ಣೋದ್ದಾರಕ್ಕೆ ನಿರ್ಧಾರ:
ಶ್ರೀ ನರಸಿಂಹ ದೇವರ ಸಾನಿಧ್ಯವಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಶಿವತ್ತಮಠ ಮನೆಯವರು ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಬಿನ್ನಹ ಮಾಡಿಕೊಂಡರು. ಶ್ರೀಗಳ ಮಾರ್ಗದರ್ಶನದಂತೆ ಶಿವತ್ತಮಠ ಪರಿಸರದವರನ್ನು ಸೇರಿಸಿಕೊಂಡು ಜೀರ್ಣೋದ್ಧಾರ ಸಮಿತಿ ರಚಿಸಲಾಗಿದೆ. 7-01-2021 ರಂದು ದೇವರ ವಿಗ್ರಹಗಳನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ. 17-02-2022ರಂದು ನೂತನ ಗರ್ಭಗುಡಿಯ ಶಿಲಾನ್ಯಾಸವನ್ನು ಮಾಡಲಾಗಿದೆ. ತಂತ್ರಿವರ್ಯರಾದ ಕಾರ್ಕಳದ ಶ್ರೀ ಭಾರತೀರಮಣ ಆಚಾರ್ಯರು ನೇತೃತ್ವ ವಹಿಸಿದ್ದಾರೆ. ಜ್ಯೋತಿಷಿ ಪ್ರಸನ್ನ ಆಚಾರ್ ನಿಟ್ಟೆ ಪ್ರಶ್ನಾಚಿಂತಕರಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಖ್ಯಾತ ವಾಸ್ತುಶಿಲ್ಪಿ ಮುನಿಯಂಗಳ ಪ್ರಸಾದ್ ದೇಗುಲ ನಿರ್ಮಾಣದ ನಿರ್ದೇಶಕರಾಗಿದ್ದಾರೆ. ಉಪ್ಪಿನಂಗಡಿಯ ಇಂಜಿನಿಯರ್ ಸುಧಾಕರ್ ಕಟ್ಟಡ ರಚನೆಯ ತಾಂತ್ರಿಕ ಹೊಣೆ ಹೊತ್ತಿದ್ದಾರೆ. ವೇದಮೂರ್ತಿ ನಾರಾಯಣ ಬಡೆಕಿಲ್ಲಾಯ ಅರ್ಚಕರಾಗಿದ್ದಾರೆ. ಜೀರ್ಣೋದ್ದಾರಕ್ಕೆ 80 ಲಕ್ಷ ರೂ. ವೆಚ್ಚ ಆಗಬಹುದು ಎಂದು ಅಂದಾಜಿಸಲಾಗಿದೆ. ಈ ದೇಗುಲದ ನಿತ್ಯ ನೈಮಿತ್ತಿಕ ಕಾರ್ಯ ನಡೆಸಿಕೊಂಡು ಬರುವ ಉದ್ದೇಶದಿಂದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಗೌರವಾಧ್ಯಕ್ಷತೆಯಲ್ಲಿ ಸ್ಥಳೀಯ ಸದಸ್ಯರನ್ನು ಒಳಗೊಂಡ ಟ್ರಸ್ಟ್ ರಚನೆ ಮಾಡಲಾಗಿದೆ.
ಪುನರ್ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ:
ನೂತನ ಮಠದಲ್ಲಿ ಫೆ.23ರಿಂದ 26ರ ತನಕ ಸಪರಿವಾರ ಶ್ರೀ ನರಸಿಂಹ ದೇವರ ಹಾಗೂ ನಾಗದೇವರ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ತಂತ್ರಿವರ್ಯ ಶ್ರೀ ಭಾರತೀ ರಮಣಾಚಾರ್ಯ, ಕಾರ್ಕಳ ಇವರ ನೇತೃತ್ವದಲ್ಲಿ ಆಚಾರ್ಯವರೇಣ್ಯ ಶ್ರೀ ನಾರಾಯಣ ಬಡೆಕಿಲ್ಲಾಯ ನಡ್ಪ ಇವರ ಹಿರಿತನದಲ್ಲಿ ನಡೆಯಲಿದೆ. ಫೆ.23ರಂದು ಬೆಳಿಗ್ಗೆ ಹೊರೆಕಾಣಿಕೆ, ಉಗ್ರಾಣ ಮುಹೂರ್ತ, ಸಂಜೆ ಋತ್ವಿಜರಿಗೆ ಸ್ವಾಗತ ಬಳಿಕ ವೈದಿಕ ಕಾರ್ಯಕ್ರಮ ನಡೆಯಲಿದೆ. ಫೆ.26ರಂದು ಬೆಳಿಗ್ಗೆ 11.45ರ ಸಿಂಹಲಗ್ನದಲ್ಲಿ ಶ್ರೀ ನರಸಿಂಹ ದೇವರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ನಡೆಯಲಿದೆ.
ಸಂಜೆ ರಕ್ತೇಶ್ವರಿ ನೇಮ ನಡೆಯಲಿದೆ. ನಾಲ್ಕು ದಿನವೂ ವೈದಿಕ ಕಾರ್ಯಕ್ರಮ, ಅನ್ನಸಂತರ್ಪಣೆ, ಸಂಜೆ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.
ಜೀರ್ಣೋದ್ದಾರ ಸಮಿತಿ ಅಧ್ಯಕ್ಷೆ ವಿಜಯ ಎಂ.ಶೆಟ್ಟಿ ಒಡ್ಯಮೆ ಎಸ್ಟೇಟ್, ಉಪಾಧ್ಯಕ್ಷರಾದ ಗುರುಪ್ರಸಾದ ರಾಮಕುಂಜ, ಮಹೇಂದ್ರವರ್ಮ ಮೇಲೂರು, ಪ್ರಧಾನ ಕಾರ್ಯದರ್ಶಿ ರಂಜಿತ್ ಜೈನ್ ಮೇಲೂರು, ಕಾರ್ಯದರ್ಶಿ ಚಂದ್ರಶೇಖರ ಶಿವತ್ತಮಠ, ಜೊತೆ ಕಾರ್ಯದರ್ಶಿ ಮಹೇಶ ಪಾತೃಮಾಡಿ, ಕೋಶಾಧಿಕಾರಿ ಶಾಂತಿಪ್ರಕಾಶ್ ಬರ್ನಜಾಲು ಮತ್ತಿತರರು ಉಪಸ್ಥಿತರಿದ್ದರು.