ಡೊನ್ ಬೊಸ್ಕೊ ಕ್ಲಬ್ ನ  ಸ್ಥಾಪಕರ ದಿನಾಚರಣೆ

0

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ನ ಡೊನ್ ಬೊಸ್ಕೊ ಕ್ಲಬ್ ನ ಪ್ರೇರಕರಾದ ಸಂತ ಜೋನ್ ಬೊಸ್ಕೊರವರ ಸ್ಥಾಪಕರ ದಿನಾಚರಣೆಯು ಫೆ. 4 ರಂದು ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಸಂಜೆ ನೆರವೇರಿತು.

ಮುಖ್ಯ ಅತಿಥಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ಸಂತರಾದ ಜೋನ್ ಬೊಸ್ಕೊರವರು ಯುವಜನರೊಂದಿಗೆ ಸೇರುತ್ತಾ ಕೆಲಸ ಮಾಡಿದವರು. ಅವರ ಹೆಸರಿನಲ್ಲಿ ಇಂದು ಈ ಕ್ಲಬ್ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದೆ. ಸಂಘ ಸಂಸ್ಥೆಗಳು ಸಮಾಜದ, ಸಮುದಾಯದ ಅಭಿವೃದ್ಧಿಯಲ್ಲಿ ಕೈಜೋಡಿಸದಿದ್ದರೆ ಆ ಸಂಘಟನೆಗೆ ಯಾವ ಬೆಲೆ ಇರುವುದಿಲ್ಲ. ಆದರೆ ಡೊನ್ ಬೊಸ್ಕೊ ಕ್ಲಬ್ ಈ ನಿಟ್ಟಿನಲ್ಲಿ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಹೆಸರು ಗಳಿಸಿರುವುದು ಶ್ಲಾಘನೀಯ ಎಂದರು.

ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಡ ಮಾತನಾಡಿ, ಡೊನ್ ಬೊಸ್ಕೊ ಕ್ಲಬ್ ನಾನಾ ರೀತಿಯ ಸೇವೆ ನೀಡುತ್ತಾ ಬಂದಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಕ್ಲಬ್ ಕೈಗೆತ್ತಿಕೊಳ್ಳುವ ಪ್ರತಿಯೊಂದು ಕಾರ್ಯವು ಫಲಪ್ರದವಾಗಲಿ ಎಂದರು.

ಕ್ಲಬ್ ಅಧ್ಯಕ್ಷ ಆಂಟನಿ ಒಲಿವೆರಾ ಸ್ವಾಗತಿಸಿ, ಮಾತನಾಡಿ, ಕ್ಲಬ್ ನಲ್ಲಿನ ಹಿರಿಯರ ನಿಸ್ವಾರ್ಥ ಮನೋಭಾವದಿಂದ ಇಂದು ಕ್ಲಬ್ ಬೆಳೆದು ನಿಂತಿದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬಂತೆ ಕ್ಲಬ್ ಕೆಲಸ ಮಾಡುತ್ತಿದ್ದು ಇದಕ್ಕೆ ಸರ್ವರ ಆಶೀರ್ವಾದ ಸಿಕ್ಕಿದೆ ಎಂದರು.

ಈ ಸಂದರ್ಭದಲ್ಲಿ ಅಗಲಿದ ಕ್ಲಬ್ ಸದಸ್ಯರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕ್ಲಬ್ ಉಪಾಧ್ಯಕ್ಷ ಬ್ಯಾಪ್ಟಿಸ್ಟ್ ರೊಡ್ರಿಗಸ್ ರವರು ಪ್ರಾರ್ಥಿಸಿದರು.  ಕಾರ್ಯದರ್ಶಿ ಜ್ಯೋ ಡಿ’ಸೋಜ ವರದಿ ಮಂಡಿಸಿ, ವಂದಿಸಿದರು. ಸದಸ್ಯರಾದ ರೊನಾಲ್ಡ್ ಮೊಂತೇರೊ, ವಿಶಾಲ್ ಮೊಂತೇರೊರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು.  ಕ್ಲೆಮೆಂಟ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.

ಅಭಿನಂದನೆ..

ಕ್ಲಬ್ ಸದಸ್ಯರಾಗಿದ್ದು, ವೈವಾಹಿಕ ಜೀವನದ 50 ಸಂವತ್ಸರಗಳನ್ನು ಪೂರೈಸಿದ ಆಂಬ್ರೋಸ್ ಮಸ್ಕರೇನ್ಹಸ್ ಹಾಗೂ ಬೆನೆಡಿಕ್ಟ್ ಮಸ್ಕರೇನ್ಹಸ್ ದಂಪತಿ, 25 ಸಂವತ್ಸರಗಳನ್ನು ಪೂರೈಸಿದ ಎವರೆಸ್ಟ್ ರೊಡ್ರಿಗಸ್ ಹಾಗೂ ರುಫೀನಾ ರೊಡ್ರಿಗಸ್ ದಂಪತಿಯನ್ನು ಗೌರವಿಸಲಾಯಿತು. ಮತ್ತು ಜೀವನದ 75 ವರ್ಷವನ್ನು ಪೂರೈಸಿದ ಜೋನ್ ಕುಟಿನ್ಹಾ, ಚಾಲ್ಸ್೯ ರೆಬೆಲ್ಲೋ, ಹೆರಿ ಡಾಯಸ್, 50 ವರ್ಷ ಪೂರೈಸಿದ ಅರುಣ್ ರೆಬೆಲ್ಲೋರವರುಗಳನ್ನು ಗುರುತಿಸಿ ಅಭಿನಂದಿಸಲಾಯಿತು. ಉಪಾಧ್ಯಕ್ಷ ಬ್ಯಾಪ್ಟಿಸ್ಟ್ ರೊಡ್ರಿಗಸ್ ಹಾಗೂ ಜೋನ್ ಕುಟಿನ್ಹಾ ರವರು ಅಭಿನಂದಿತರ ಪರಿಚಯ ಮಾಡಿದರು.

ದಿವ್ಯ ಬಲಿಪೂಜೆ..

ಕ್ಲಬ್ ನ ಸ್ಥಾಪನಾ ದಿನಾಚರಣೆ ಪ್ರಯುಕ್ತ ಬೆಳಿಗ್ಗೆ ಮಾಯಿದೆ ದೇವುಸ್ ಚರ್ಚ್ ನಲ್ಲಿ ಕ್ಲಬ್ ದಿವ್ಯ ಬಲಿಪೂಜೆ ನೆರವೇರಿತು. ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ರವರು ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಕ್ಲಬ್ ಸದಸ್ಯರು ಹಾಗೂ ಸದಸ್ಯರ ಕುಟುಂಬಿಕರು, ಹಿತೈಷಿಗಳು ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here