ಪುತ್ತೂರು: ಭಕ್ತಿಯಿಂದ ನಂಬಿದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾ ಅನಾದಿ ಕಾಲದಿಂದಲೂ ಸಂಟ್ಯಾರ್‌ನ ಕಲ್ಲಕಟ್ಟ ಎಂಬ ಜಾಗದಲ್ಲಿ ನೆಲೆನಿಂತು, ಹತ್ತು ಹಲವು ಕಾರಣಿಕತೆಗಳನ್ನು ತೋರಿಸುತ್ತಾ ಬಂದಿರುವ ಮಹಾ ಕಾರಣಿಕ ದೈವವಾಗಿರುವ ಶ್ರೀ ರಾಜ ಗುಳಿಗ ದೈವದ ಕೋಲವು ಫೆ.4 ರಂದು ಸಂಟ್ಯಾರು ಕಲ್ಲಕಟ್ಟದಲ್ಲಿರುವ ಶ್ರೀ ರಾಜಗುಳಿಗ ದೈವದ ಸಾನಿಧ್ಯದಲ್ಲಿ ವೈಭವದಿಂದ ಜರುಗಿತು.
ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಇದೆ ಸಾನಿಧ್ಯ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರಿನಿಂದ 7 ಕಿ.ಮೀ ದೂರದಲ್ಲಿರುವ ಸಂಟ್ಯಾರು ಜಂಕ್ಷನ್‌ನ ಪಕ್ಕದಲ್ಲೇ ಇದೆ ಈ ಕಲ್ಲಕಟ್ಟ ಪ್ರದೇಶ.ಆರ್ಯಾಪು ಮತ್ತು ಕುರಿಯ ಗ್ರಾಮಕ್ಕೆ ಸೇರಿದ ಈ ಪ್ರದೇಶದಲ್ಲಿ ನೆಲೆನಿಂತಿರುವ ಶ್ರೀ ರಾಜಗುಳಿಗ ದೈವವು ವಿಶೇಷ ಶಕ್ತಿಯನ್ನು ಹೊಂದಿದೆ. ಪ್ರತಿ ವರ್ಷ ಕೋಲಕ್ಕೆ ಊರಪರವೂರ ನೂರಾರು ಮಂದಿ ಆಗಮಿಸುತ್ತಾರೆ.
ವೈದಿಕ ಕಾರ್ಯಕ್ರಮ
ಫೆ.4 ರಂದು ಬೆಳಿಗ್ಗೆ ಸಂದೀಪ ಕಾರಂತ ಕಲ್ಲರ್ಪೆ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳು ನಡೆಯಿತು. ಮೊದಲಿಗೆ ಗಣಹೋಮ, ಶುದ್ದಕಲಶ, ತಂಬಿಲ ಸೇವೆ ಬಳಿಕ ಪ್ರಸಾದ ವಿತರಣೆ ನಡೆದು ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ಸರಿಯಾಗಿ ಶ್ರೀ ರಾಜ ಗುಳಿಗ ದೈವದ ಕೋಲ ಆರಂಭವಾಗಿ ಸಂಜೆ ಭಕ್ತರಿಗೆ ಬೂಳ್ಯ ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಿತು.
ಐನ್ನೂರಕ್ಕೂ ಅಧಿಕ ಮಂದಿಗೆ ಅನ್ನಸಂತರ್ಪಣೆ
ಮಧ್ಯಾಹ್ನ ಹಾಗೂ ಕೋಲದ ಬಳಿಕ ಭಕ್ತರಿಗೆ ಅನ್ನ ಪ್ರಸಾದ ವಿತರಣೆ ನಡೆಯಿತು. ಊರ ಪರಪೂರ ಸಾವಿರಾರು ಮಂದಿ ಆಗಮಿಸಿ ಶ್ರೀ ದೈವದ ಗಂಧ ಪ್ರಸಾದ ಹಾಗೂ ಅನ್ನ ಪ್ರಸಾದ ಸ್ವೀಕರಿಸಿದರು.ಐನ್ನೂರಕ್ಕೂ ಅಧಿಕ ಮಂದಿಗೆ ಅನ್ನಸಂತರ್ಪಣೆ ನಡೆಯಿತು.
ಸಾನಿಧ್ಯ ಸಮಿತಿಯ ಅಧ್ಯಕ್ಷ ಕೆ.ರಾಧಾಕೃಷ್ಣ ರೈ ಕುರಿಯ ಏಳ್ನಾಡುಗುತ್ತು , ಕಾರ್ಯದರ್ಶಿ ನವೀನ ಸಾಲ್ಯಾನ್ ಕಿನ್ನಿಮಜಲು ಹಾಗೂ ಸರ್ವ ಸದಸ್ಯರು ಹಾಗೂ ಊರಿನ ಹತ್ತು ಸಮಸ್ತರು, ಭಕ್ತಾಧಿಗಳು ಉಪಸ್ಥಿತರಿದ್ದರು.