ಶ್ರೀ ಕ್ಷೇತ್ರಕ್ಕೆ ಭಕ್ತರ ಜನಸಾಗರವೇ ಹರಿದು ಬರುತ್ತಿದೆ- ರವೀಂದ್ರ ಶೆಟ್ಟಿ ನುಳಿಯಾಲು
ಪುತ್ತೂರು: ಮೊಟ್ಟೆತ್ತಡ್ಕ- ಮಣ್ಣಾಪು ಶ್ರೀ ಕೊರಗಜ್ಜ ಮತ್ತು ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದ ವಾರ್ಷಿಕ ನೇಮೋತ್ಸವವು ಯಶಸ್ವಿಯಾಗಿ ಜರಗಿದ್ದು ಇದರ ಕೃತಜ್ಞತಾ ಸಭೆಯು ಫೆ.6 ರಂದು ಮಣ್ಣಾಪು ಶ್ರೀ ಕ್ಷೇತ್ರದಲ್ಲಿ ಕ್ಷೇತ್ರದ ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರ ಅಧ್ಯಕ್ಷತೆಯಲ್ಲಿ ಜರಗಿತು.
ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರು ಮಾತನಾಡಿ, ಈ ಬಾರಿಯೂ ವಾರ್ಷಿಕ ನೇಮೋತ್ಸವವು ಯಶಸ್ವಿಯಾಗಿ ನಡೆದಿದ್ದು, ಶ್ರೀ ಕ್ಷೇತ್ರಕ್ಕೆ ಭಕ್ತರ ಜನಸಾಗರವೇ ಹರಿದು ಬಂದಿರುವುದು ನೋಡಿದಾಗ ಶ್ರೀ ಕ್ಷೇತ್ರದ ಮಹಿಮೆ ಎಂತಹುದು ಎಂದು ಜಗಜ್ಜಾಹೀರವಾಗಿದೆ. ಶ್ರೀ ಕ್ಷೇತ್ರವು ಕಾರಣಿಕ ಕ್ಷೇತ್ರವಾಗಿದ್ದು ಭಕ್ತರ ಪ್ರೀತಿಯ ಕ್ಷೇತ್ರವಾಗಿ ಪರಿಣಮಿಸಿದೆ. ಜೊತೆಗೆ ಹೃದಯವಂತ ದಾನಿಗಳಿಂದ ಶ್ರೀ ಕ್ಷೇತ್ರಕ್ಕೆ ಮಹಪೂರ ಕೊಡುಗೆಯೂ ಲಭಿಸಿರುವುದರಿಂದ ಕ್ಷೇತ್ರವು ಅಭಿವೃದ್ಧಿಯತ್ತ ಸಾಗುತ್ತಿದೆ. ಶ್ರೀ ಕ್ಷೇತ್ರದಲ್ಲಿ ಇನ್ನೂ ಕೆಲವು ಅಭಿವೃದ್ಧಿ ಕಾರ್ಯಗಳಾಗಬೇಕಿದ್ದು ಹೃದಯವಂತ ದಾನಿಗಳಿಂದ ಕೊಡುಗೆಯ ನಿರೀಕ್ಷೆಯನ್ನು ಹೊಂದಲಾಗಿದೆ ಎಂದು ಹೇಳಿ ನೇಮೋತ್ಸವದ ಹಿಂದೆ ಶ್ರಮಿಸಿದವರಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಂದಿನ ವರ್ಷ ಇನ್ನೂ ಉತ್ತಮ ರೀತಿಯಲ್ಲಿ ಹೇಗೆ ನೇಮೋತ್ಸವ ನಡೆಸುವುದು ಎಂಬುದರ ಬಗ್ಗೆ ಚರ್ಚೆ ನಡೆಸಲಾಯಿತು ಜೊತೆಗೆ ನೇಮೋತ್ಸವವನ್ನು ಯಶಸ್ವಿಯಾಗಿ ನಡೆಸಲು ಕಾರಣಕರ್ತರಾದ ಕ್ಷೇತ್ರದ ಅರ್ಚಕರಾದ ಕುಂಡ ಮಣ್ಣಾಪು, ಅಣ್ಣು ಮಣ್ಣಾಪು, ರವಿ ಮಣ್ಣಾಪು, ಮಧ್ಯಸ್ಥ ಗಣೇಶ್ ಪೂಜಾರಿ ಕೆಮ್ಮಿಂಜೆರವರನ್ನು ಅಭಿನಂದಿಸಲಾಯಿತು. ಶ್ರೀ ಕ್ಷೇತ್ರದ ಕೋಶಾಧಿಕಾರಿ ಗುರುವ ಮಣ್ಣಾಪು ಲೆಕ್ಕಪತ್ರ ಮಂಡಿಸಿದರು. ಅಧ್ಯಕ್ಷ ವಿಶ್ವನಾಥ್ ಮಣ್ಣಾಪು ಸ್ವಾಗತಿಸಿ, ಉಪಾಧ್ಯಕ್ಷ ವಿಶ್ವನಾಥ ಪೂಜಾರಿ ಮೊಟ್ಟೆತ್ತಡ್ಕ ವಂದಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಗೌರವ ಸಲಹೆಗಾರರಾದ ವಿಶ್ವನಾಥ ನಾಯ್ಕ ಅಮ್ಮುಂಜ, ಗಂಗಾಧರ್ ಮಣ್ಣಾಪು, ಸುಜೀರ್ ಕುಮಾರ್ ಶೆಟ್ಟಿ ನುಳಿಯಾಲು, ಪಂಜಳ ಜೈ ಶ್ರೀರಾಂ ಗೆಳೆಯರ ಬಳಗದ ಸದಸ್ಯರ ಸಹಿತ ಹಲವರು ಉಪಸ್ಥಿತರಿದ್ದರು.