ಪುತ್ತೂರು: ಯಾವುದೇ ಪರವಾನಿಗೆ ಇಲ್ಲದೆ ಅಕ್ರಮ ಮರಳು ಮಾರಾಟ ಮಾಡುತ್ತಿದ್ದ ಪ್ರಕರಣದ ಆರೋಪಿಗಳಾದ ಯಂ. ಕೆ. ಜಾಫರ್ ಸಾದಿಕ್ ಮತ್ತು ಸುರೇಶ್. ಕೆ.ರವರಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಕಡಬ ಪೊಲೀಸ್ ಠಾಣೆಯ ಉಪನಿರೀಕ್ಷಕ ಅಭಿನಂಧನ್ ಎಂ.ಎಸ್. ಮತ್ತು ಸಿಬ್ಬಂದಿಗಳು ಜ.2ರಂದು ಸಂಜೆ ಕಡಬ ಗ್ರಾಮದ ಕಳಾರ ಎಂಬಲ್ಲಿ ಉಪ್ಪಿನಂಗಡಿ-ಸುಬ್ರಮಣ್ಯ ರಾಜ್ಯ ಹೆದ್ದಾರಿಯಲ್ಲಿ ಕಡಬ ಕಡೆಗೆ ಬರುತ್ತಿದ್ದ ಕೆ. ಎ.-21-8663 ನಂಬರ್‌ನ ಪಿಕಪ್ ವಾಹನವನ್ನು ತಡೆದು ಪರಿಶೀಲಿಸಿದಾಗ ಅದರಲ್ಲಿ ಮರಳು ಇರುವುದು ಕಂಡು ಬಂದಿತ್ತು. ಯಾವುದೇ ಪರವಾನಿಗೆ ಇಲ್ಲದೆ ಕುಂತೂರುಪದವು ಎಂಬಲ್ಲಿ ಹರಿಯುವ ನದಿಯಿಂದ ಮರಳನ್ನು ಕಳವು ಮಾಡಿ ಮಾರಾಟಕ್ಕಾಗಿ ಸಾಗಿಸುತ್ತಿರುವ ಆರೋಪದಡಿ ಯಂ.ಕೆ. ಜಾಫರ್ ಸಾದಿಕ್ ಮತ್ತು ಸುರೇಶ್ ಕೆ. ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಭಾರತೀಯ ದಂಡ ಸಂಹಿತೆಯ ಕಲಂ 379 ಮತ್ತು 34ರನ್ವಯ ಪ್ರಕರಣ ದಾಖಲಿಸಿದ್ದರು. ಆರೋಪಿಗಳು ತಮ್ಮ ಪರ ವಕೀಲರಾದ ಮಹೇಶ್ ಕಜೆ ಅವರ ಮುಖಾಂತರ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಾದ ಪ್ರತಿವಾದ ಆಲಿಸಿದ ಪುತ್ತೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧಿಶರಾದ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧಿಶ ಕಾಂತರಾಜು ಎಸ್.ವಿ.ರವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ.