ಅರುಣ್ ಕುಮಾರ್ ಪುತ್ತಿಲರಿಗೆ ಬಿಜೆಪಿ ಹುದ್ದೆ ಫಿಕ್ಸ್-ಘೋಷಣೆಯೊಂದೇ ಬಾಕಿ?:ಪರಿವಾರದ ಕಾರ್ಯಕರ್ತರು ನೀಡಿದ್ದ ಗಡುವಿನ ಬಳಿಕ ಹುದ್ದೆ ಘೋಷಣೆ ಸಾಧ್ಯತೆ

0

ಪುತ್ತೂರು: ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲರವರಿಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸ್ಥಾನ ನೀಡುವಂತೆ ಪಟ್ಟು ಹಿಡಿದಿರುವ ಪುತ್ತಿಲ ಪರಿವಾರದ ಕಾರ್ಯಕರ್ತರು ಸಮಾವೇಶದಲ್ಲಿ ನೀಡಿದ್ದ, ಮೂರು ದಿನಗಳ ಗಡು ಫೆ.8ಕ್ಕೆ ಮುಕ್ತಾಯವಾಗಲಿರುವ ನಡುವೆಯೇ ಪುತ್ತಿಲ ಅವರಿಗೆ ಬಿಜೆಪಿಯಲ್ಲಿ ಪ್ರಮುಖ ಸ್ಥಾನವೊಂದನ್ನು ನೀಡಲು ಪಕ್ಷದ ಪ್ರಮುಖರು ತೀರ್ಮಾನಿಸಿದ್ದು ಘೋಷಣೆಯೊಂದೇ ಬಾಕಿ.ಆದರೆ ಯಾವ ಹುದ್ದೆ ಎನ್ನುವುದು ನಿಗೂಢವಾಗಿದೆ ಮತ್ತು ಪುತ್ತಿಲ ಪರಿವಾರದ ಕಾರ್ಯಕರ್ತರ ಸಮಾವೇಶದಲ್ಲಿ ನೀಡಲಾಗಿದ್ದ ಗಡುವಿಗೆ ಪುತ್ತಿಲ ಅವರಿಗೆ ಪಕ್ಷದ ಹುದ್ದೆ ಘೋಷಣೆ ಮಾಡದೆ ಫೆ.10ರಂದು ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.ಪುತ್ತಿಲರಿಗೆ ಹುದ್ದೆ ನೀಡುವ ವಿಚಾರ ಪಕ್ಷದ ರಾಜ್ಯದ ಪ್ರಮುಖರಿಗೆ ಬಿಟ್ಟ ವಿಚಾರ ಎಂದು ಬಿಜೆಪಿ ಜಿಲ್ಲಾಧ್ಯಕ್ಷರು ಪ್ರತಿಕ್ರಿಯಿಸಿದ್ದಾರೆ.


ಕಳೆದ ವಿಧಾನಸಭಾ ಚುನಾವಣೆಯ ನಂತರದ ಬೆಳವಣಿಗೆಯಲ್ಲಿ ಬಿಜೆಪಿಯಿಂದ ದೂರ ಉಳಿದಿರುವ ಅರುಣ್ ಕುಮಾರ್ ಪುತ್ತಿಲ ಅವರಿಗೆ ಬಿಜೆಪಿಯಲ್ಲಿ ಪುತ್ತೂರು ವಿಧಾನಸಭಾಧ್ಯಕ್ಷ ಸ್ಥಾನ ನೀಡುವುದಾದರೆ ಪುತ್ತಿಲ ಪರಿವಾರವನ್ನು ಮಾತೃಪಕ್ಷದೊಂದಿಗೆ ವಿಲೀನಗೊಳಿಸಲು ಪುತ್ತಿಲ ಪರಿವಾರದ ಪ್ರಮುಖ ಕಾರ್ಯಕರ್ತರ ಸಮಾವೇಶದಲ್ಲಿ ತೀರ್ಮಾನಿಸಲಾಗಿತ್ತು ಮಾತ್ರವಲ್ಲದೆ, ಮೂರು ದಿನಗಳೊಳಗೆ ಅರುಣ್ ಕುಮಾರ್ ಪುತ್ತಿಲ ಅವರಿಗೆ ಪುತ್ತೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸ್ಥಾನ ಘೋಷಣೆ ಮಾಡಿದರೆ ಮಾತ್ರ ಪುತ್ತಿಲ ಪರಿವಾರವನ್ನು ಮಾತೃ ಪಕ್ಷದೊಂದಿಗೆ ವಿಲೀನಗೊಳಿಸುವುದು.ಮುಂದೆ ಪುತ್ತಿಲ ಪರಿವಾರವನ್ನು ಸಾಮಾಜಿಕ ಚಟುವಟಿಕೆಗಳಿಗೆ ಮಾತ್ರ ತೊಡಗಿಸಿಕೊಂಡು ರಾಜಕೀಯದಲ್ಲಿ ಮಾತೃಪಕ್ಷದೊಂದಿಗೆ ಸಂಘಟನೆ ಕೆಲಸ ಮಾಡಲಿದೆ.ಒಂದು ವೇಳೆ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸ್ಥಾನವನ್ನು ಅರುಣ್ ಕುಮಾರ್ ಪುತ್ತಿಲ ಅವರಿಗೆ ಕೊಡುವಲ್ಲಿ ಮಾತೃಪಕ್ಷ ವಿಫಲವಾದರೆ ಮುಂದಿನ ಎಲ್ಲಾ ಚುನಾವಣೆಯಲ್ಲೂ ಪುತ್ತಿಲ ಪರಿವಾರ ಪ್ರತ್ಯೇಕವಾಗಿ ಸ್ಪರ್ಧಿಸುವ ಕುರಿತೂ ಫೆ.೫ರಂದು ಕೊಟೇಚಾ ಹಾಲ್‌ನಲ್ಲಿ ನಡೆದ ಪುತ್ತಿಲ ಪರಿವಾರದ ಕಾರ್ಯಕರ್ತರ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.


ಗಡು ಇಂದು ಮುಕ್ತಾಯ: ಪುತ್ತಿಲರಿಗೆ ಬಿಜೆಪಿ ಅಧ್ಯಕ್ಷ ಹುದ್ದೆ ಘೋಷಣೆಗೆ ಪುತ್ತಿಲ ಪರಿವಾರದ ಕಾರ್ಯಕರ್ತರ ಸಮಾವೇಶದಲ್ಲಿ ನೀಡಲಾಗಿದ್ದ ಮೂರು ದಿನಗಳ ಗಡು ಫೆ.8ರಂದು ಮುಕ್ತಾಯವಾಗಲಿದ್ದು ಪುತ್ತಿಲ ಪರಿವಾರದ ಮುಂದಿನ ನಡೆಯ ಕುರಿತು ಕುತೂಹಲ ಸೃಷ್ಟಿಯಾಗಿದೆ.


ಪುತ್ತಿಲರಿಗೆ ಹುದ್ದೆ ಫಿಕ್ಸ್ ಘೋಷಣೆ ಬಾಕಿ: ಅರುಣ್ ಕುಮಾರ್ ಪುತ್ತಿಲ ಅವರ ಬಿಜೆಪಿ ಸೇರ್ಪಡೆಗೆ ಪಕ್ಷದ ಪ್ರಮುಖರಿಂದಲೂ ಗ್ರೀನ್ ಸಿಗ್ನಲ್ ದೊರೆತಿದ್ದು ಪುತ್ತಿಲ ಅವರಿಗೆ ಪಕ್ಷದಲ್ಲಿ ಪ್ರಮುಖ ಹುದ್ದೆಯೊಂದನ್ನು ನೀಡಲು ತೀರ್ಮಾನಿಸಿದ್ದು, ಪುತ್ತಿಲರಿಗೆ ಹುದ್ದೆ ಫಿಕ್ಸ್ ಆಗಿದ್ದು ಘೋಷಣೆಯೊಂದೇ ಬಾಕಿ.ಆದರೆ ಯಾವ ಹುದ್ದೆ ಎನ್ನುವುದು ನಿಗೂಢವಾಗಿದೆ.ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷತೆಗೆ ಪುತ್ತಿಲ ಅವರನ್ನು ನೇಮಕಗೊಳಿಸಲಾಗುವುದೇ ಅಥವಾ ಜಿಲ್ಲಾ ಉಪಾಧ್ಯಕ್ಷ ಯಾ ರಾಜ್ಯ ಕಾರ್ಯದರ್ಶಿಯಂತಹ ಪ್ರಮುಖ ಹುದ್ದೆ ನೀಡಲಾಗುವುದೇ ಎನ್ನುವುದು ಸ್ಪಷ್ಟವಾಗಿಲ್ಲ.ಮತ್ತೊಂದೆಡೆ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಹುದ್ದೆ ಬಿಟ್ಟು ಬೇರೆ ಹುದ್ದೆ ನೀಡಿದರೆ ಅರುಣ್ ಕುಮಾರ್ ಪುತ್ತಿಲ ಮತ್ತು ಪುತ್ತಿಲ ಪರಿವಾರದ ಪ್ರಮುಖರು ಒಪ್ಪಿಕೊಳ್ಳುವರೇ ಎನ್ನುವುದೂ ನಿಗೂಢವಾಗಿದೆ.


ಸವಾಲಿಗೆ ಬಿಜೆಪಿ ಮಣಿಯುವುದೇ?: ಮೂರು ದಿನದೊಳಗೆ ಪುತ್ತೂರು ರಾಜಕೀಯ ಸರಿಯಾಗಲಿಲ್ಲ ಎಂದಾದರೆ ಪುತ್ತಿಲ ಅನಿವಾರ್ಯವಾಗಿ ರಾಜಕೀಯ ಕ್ಷೇತ್ರಕ್ಕೆ ಟೊಂಕ ಕಟ್ಟಿ ನಿಲ್ಲುವುದು ಗ್ಯಾರೆಂಟಿ ಎಂಬ ಸವಾಲನ್ನು ಪುತ್ತಿಲ ಪರಿವಾರದ ಕಾರ್ಯಕರ್ತರ ಸಮಾವೇಶದಲ್ಲಿ ಹಾಕಲಾಗಿತ್ತು.ಈ ಸವಾಲುಗಳಿಗೆ ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿ ಮಣಿಯುವುದೇ ಅಥವಾ ಪುತ್ತಿಲ ಪರಿವಾರದ ಸವಾಲಿಗೆ ಸೂಕ್ತ ಉತ್ತರ ನೀಡುವ ನಿರ್ಧಾರ ಕೈಗೊಳ್ಳುವುದೇ ಎನ್ನುವ ವಿಚಾರ ಇದೀಗ ಚರ್ಚೆಯಾಗುತ್ತಿದೆ.ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಆಂತರಿಕ ಮಾತುಕತೆ ನಡೆದಿದ್ದು ಪುತ್ತಿಲ ಪರಿವಾರದ ಸಮಾವೇಶದಲ್ಲಿ ನೀಡಲಾಗಿರುವ ಮೂರು ದಿನಗಳ ಗಡುವಿನೊಳಗೆ ಅರುಣ್ ಪುತ್ತಿಲ ಅವರಿಗೆ ಯಾವುದೇ ಹುದ್ದೆ ಘೋಷಣೆ ಮಾಡದೆ ಮೂರು ದಿನದ ಗಡು ಮುಗಿದ ಎರಡು ದಿನಗಳ ಬಳಿಕ ಅಂದರೆ ಫೆ.10ಕ್ಕೆ ಅರುಣ್ ಕುಮಾರ್ ಪುತ್ತಿಲ ಅವರಿಗೆ ಪಕ್ಷದ ಹುದ್ದೆ ಘೋಷಣೆ ಮಾಡುವ ನಿರ್ಧಾರಕ್ಕೆ ಬಂದಿರುವುದಾಗಿ ವರದಿಯಾಗಿದೆ.


ರಾಜ್ಯಾಧ್ಯಕ್ಷರ ಸಮ್ಮುಖದಲ್ಲೇ ಸೇರ್ಪಡೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬೆಂಗಳೂರಿನಲ್ಲಿ ಅರುಣ್ ಕುಮಾರ್ ಪುತ್ತಿಲ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿ ಬಳಿಕ ಜಿಲ್ಲೆಯಲ್ಲಿ ಹುದ್ದೆ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.ಪಕ್ಷದಿಂದ ನಾನಾ ಕಾರಣಗಳಿಗಾಗಿ ಹೊರಹೋಗಿರುವ ಎಲ್ಲ ಪ್ರಮುಖರನ್ನು ಮನವೊಲಿಸಿ ಮತ್ತೆ ಪಕ್ಷಕ್ಕೆ ಸೇರ್ಪಡೆಗೊಳಿಸಬೇಕೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷನಾಗಿರುವ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಈಗಾಗಲೇ ಸೂಚನೆ ನೀಡಿದ್ದು ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪಕ್ಷದಿಂದ ಹೊರ ಹೋಗಿರುವ ಪ್ರಮುಖರನ್ನು ಮತ್ತೆ ಬಿಜೆಪಿಗೆ ಕರೆತರುವ ಕುರಿತು ಮಾತುಕತೆ ನಡೆದಿರುವುದಾಗಿ ತಿಳಿದು ಬಂದಿದೆ.

ಪುತ್ತಿಲರಿಗೆ ಹುದ್ದೆ ರಾಜ್ಯದ ತೀರ್ಮಾನ

ಅರುಣ್ ಕುಮಾರ್ ಪುತ್ತಿಲ ಅವರಿಗೆ ಪಕ್ಷದ ಹುದ್ದೆ ನೀಡುವ ಕುರಿತು ರಾಜ್ಯದ ನಾಯಕರು ಸೂಕ್ತ ತೀರ್ಮಾನಕೈಗೊಳ್ಳಲಿದ್ದಾರೆ.ಇಲ್ಲಿನ ಬೆಳವಣಿಗೆಗಳ ಕುರಿತು ಈಗಾಗಲೇ ಪಕ್ಷದ ನಾಯಕರ ಗಮನಕ್ಕೆ ತರಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಪ್ರತಿಕ್ರಿಯಿಸಿದ್ದಾರೆ.

ವಿರೋಧಿಸುವ ನಾಲ್ಕು ಜನ ಯಾರು?-ವಿರೋಧದ ಪರಿಣಾಮ ಏನಾಗಲಿದೆ?

ಕಳೆದ 35 ವರ್ಷದಿಂದ ಕೆಲಸ ಮಾಡಿದ ಅರುಣ್ ಕುಮಾರ್ ಪುತ್ತಿಲ ಪಕ್ಷದ ಒಳಗೆ ಬಂದರೆ ನಮ್ಮ ಕುರ್ಚಿಗೆ ಪೆಟ್ಟು ಬೀಳುತ್ತದೆ ಎಂದು ಪುತ್ತೂರಿನ ಒಂದು, ಎರಡು, ಮೂರು, ನಾಲ್ಕು ಮಂದಿ ಮಾತ್ರ ಅಡ್ಡಿಪಡಿಸುತ್ತಿದ್ದಾರೆ.ಅದು ಬಿಟ್ಟರೆ ೩೨ ಸಾವಿರದಲ್ಲಿ ಯಾರದ್ದೂ ಅಡ್ಡಿಯಿಲ್ಲ.ಈ ಸ್ವಾರ್ಥಿಗಳ ಮನವೊಲಿಸಿ ನಾವು ಒಂದಾಗಬೇಕು ಎಂದು ಪುತ್ತಿಲ ಪರಿವಾರದ ಕಾರ್ಯಕರ್ತರ ಸಮಾವೇಶದಲ್ಲಿ ಶ್ರೀಕೃಷ್ಣ ಉಪಾಧ್ಯಾಯ ಅವರು ಹೇಳಿದ್ದರು.ಇದೀಗ, ಪುತ್ತಿಲ ಅವರ ಸೇರ್ಪಡೆ ಮತ್ತು ಅವರಿಗೆ ಹುದ್ದೆ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸುವ ಆ ನಾಲ್ಕು ಮಂದಿ ಯಾರು ಮತ್ತು ಅವರ ವಿರೋಧದ ಮುಂದಿನ ಪರಿಣಾಮ ಏನಾಗಲಿದೆ ಎಂದು ಚರ್ಚೆಯಾಗುತ್ತಿದೆ.

ಹಿಂದು ಪರ ಯಾರೇ ಬಂದರೂ ಸ್ವಾಗತ
ಹಿಂದು ಪರ ಯಾರೇ ಆಗಲಿ ಅವರಿಗೆ ಪಕ್ಷ ಸ್ವಾಗತ ಮಾಡಲಿದೆ.ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿಯಲ್ಲೇ ಇದ್ದವರು.ಅವರನ್ನು ಬಿಜೆಪಿಯವರಲ್ಲ ಎಂದು ಹೇಳುವ ಹಾಗಿಲ್ಲ. ಹಾಗಾಗಿ ಪಕ್ಷ ಅವರನ್ನು ಸ್ವಾಗತಿಸುತ್ತದೆ.ಹುದ್ದೆ ವಿಚಾರ ಜಿಲ್ಲೆ ಮತ್ತು ರಾಜ್ಯದ ತೀರ್ಮಾನ ಎಂದು ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ತಿಳಿಸಿದ್ದಾರೆ.ಪುತ್ತಿಲರಿಗೆ ಹುದ್ದೆ ನೀಡುವುದು ಪಕ್ಷದ ಜಿಲ್ಲಾ ಮತ್ತು ರಾಜ್ಯ ನಾಯಕರ ತೀರ್ಮಾನಕ್ಕೆ ಬಿಟ್ಟ ವಿಚಾರ ಎಂದು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ಈಗಾಗಲೇ ಹೇಳಿದ್ದಾರೆ.

LEAVE A REPLY

Please enter your comment!
Please enter your name here