ಪುತ್ತೂರು: ನಳ್ಳಿ ನೀರು ಬರುತ್ತಿಲ್ಲ ಎಂಬ ದೂರಿನ ಮೇರೆಗೆ ಕೆಯ್ಯೂರು ಗ್ರಾಪಂ ಅಧ್ಯಕ್ಷರು ಹಾಗೂ ಅಧಿಕಾರಿಗಳು ಅಂಕತ್ತಡ್ಕ ಜನತಾ ಕಾಲನಿಯಲ್ಲಿ ರಿಯಾಲಿಟಿ ಚೆಕ್ ನಡೆಸಿ ಪಂಚಾಯತ್‌ನಿಂದ ಬರುವ ಕುಡಿಯುವ ನೀರನ್ನು ತೋಟಕ್ಕೆ ಬಿಡುತ್ತಿದ್ದವರನ್ನು ಕಂಡು ಹಿಡಿದು ಅವರಿಗೆ ಬರುತ್ತಿದ್ದ ನಳ್ಳಿ ನೀರಿನ ಸಂಪರ್ಕವನ್ನು ಕಡಿತಗೊಳಿಸಿ, ಪೈಪುಗಳನ್ನು ಸೀಜ್ ಮಾಡಿದ್ದಾರೆ.
ಅಂಕತ್ತಡ್ಕ ಜನತಾ ಕಾಲನಿಯಲ್ಲಿರುವ ಕೊರಗ ಸಮುದಾಯದ ಕೆಲವು ಮನೆಯವರು ನಮಗೆ ನಳ್ಳಿ ನೀರು ಬರುತ್ತಿಲ್ಲ ಎಂದು ಪಂಚಾಯತ್‌ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ನಮಿತಾ ಎ.ಕೆ, ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಸದಸ್ಯ ತಾರಾನಾಥ ಕಂಪ ಹಾಗೂ ಸಿಬ್ಬಂದಿ ರಾಕೇಶ್‌ರವರ ತಂಡವು ಕಾಲನಿಯಲ್ಲಿ ಫೆ.7 ರಂದು ರಿಯಾಲಿಟಿ ಚೆಕ್ ಮಾಡಿದ್ದರು.
ಈ ಸಂದರ್ಭದಲ್ಲಿ ಪಂಚಾಯತ್‌ನಿಂದ ಸರಬರಾಜಾಗುವ ಕುಡಿಯುವ ನೀರನ್ನು ಒಂದೆರಡು ಮನೆಯವರು ಅಕ್ರಮ ಪೈಪು ಸಂಪರ್ಕ ಪಡೆದುಕೊಂಡು ತೋಟಕ್ಕೆ ಬಿಡುತ್ತಿರುವುದು ಕಂಡು ಬಂದಿದೆ. ಇದನ್ನು ಕಂಡು ಹಿಡಿದ ತಂಡವು ಅಕ್ರಮ ಸಂಪರ್ಕವನ್ನು ತೆರವುಗೊಳಿಸಿ, ಅವರಿಗಿದ್ದ ನೀರಿನ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಈ ರೀತಿಯಾಗಿ ಕುಡಿಯುವ ನೀರನ್ನು ತೋಟಗಳಿಗೆ ಬಿಡುವುದು ಸರಿಯಲ್ಲ ಇದರಿಂದ ಇತರ ಮನೆಗಳಿಗೆ ನೀರು ಸರಿಯಾಗಿ ಹೋಗದೆ ತೊಂದರೆಯಾಗುತ್ತಿದೆ ಎಂದು ಅಭಿವೃದ್ಧಿ ಅಧಿಕಾರಿಯವರು ಫಲಾನುಭವಿಗಳಿಗೆ ತಿಳಿಸಿ ಹೇಳಿದರು.
ಕುಡಿಯುವ ನೀರನ್ನು ಹಾಳು ಮಾಡಬೇಡಿ
ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗೆ ಬಹಳಷ್ಟು ತೊಂದರೆ ಎದುರಾಗುವ ಸಾಧ್ಯತೆ ಇರುವುದರಿಂದ ಯಾರೂ ಕೂಡ ಕುಡಿಯುವ ನೀರನ್ನು ಹಾಳು ಮಾಡಬಾರದು, ಪಂಚಾಯತ್‌ನಿಂದ ಬರುವ ನೀರನ್ನು ತೋಟ ಸೇರಿದಂತೆ ಇತರ ಕೆಲಸಗಳಿಗೆ ಬಳಕೆ ಮಾಡಬಾರದು ಅಲ್ಲದೆ ಮೀಟರ್ ತಪ್ಪಿಸಿ ಅಕ್ರಮ ಸಂಪರ್ಕಗಳನ್ನು ಕೂಡ ಮಾಡಬಾರದು. ಈ ರೀತಿ ಮಾಡಿರುವುದು ಕಂಡುಬಂದರೆ ಅವರಿಗೆ ಇರುವ ನೀರಿನ ಸಂಪರ್ಕವನ್ನು ಶಾಶ್ವತವಾಗಿ ಕಡಿತ ಮಾಡಲಾಗುವುದು ಎಂದು ಈ ಅಧ್ಯಕ್ಷ ಶರತ್ ಕುಮಾರ್ ಮಾಡಾವು ಈ ಸಂದರ್ಭದಲ್ಲಿ ತಿಳಿಸಿದರು.
‘ಈಗಾಗಲೇ ಬಹಳಷ್ಟು ಮಂದಿ ನಮಗೆ ನೀರು ಬರುತ್ತಿಲ್ಲ ಎಂದು ದೂರು ನೀಡಿದ್ದಾರೆ. ನಾವು ಪ್ರತಿ ವಾರ್ಡ್‌ನಲ್ಲಿ ರಿಯಾಲಿಟಿ ಚೆಕ್ ಮಾಡಲಿದ್ದೇವೆ. ಎಲ್ಲರಿಗೂ ಒಂದೇ ರೀತಿಯಲ್ಲಿ ನೀರು ಸರಬರಾಜು ಆಗಬೇಕು ಎಂಬುದು ನಮ್ಮ ಉದ್ದೇಶ. ಕುಡಿಯುವ ನೀರನ್ನು ಯಾರು ಕೂಡ ಇತರ ಉದ್ದೇಶಗಳಿಗೆ ಬಳಕೆ ಮಾಡಬಾರದು ಎಂಬುದು ನಮ್ಮ ವಿನಂತಿ.’
ಶರತ್ ಕುಮಾರ್ ಮಾಡಾವು, ಅಧ್ಯಕ್ಷರು ಕೆಯ್ಯೂರು ಗ್ರಾಪಂ