ನೆಲ್ಯಾಡಿ: ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿ ವತಿಯಿಂದ ಫೆ.9ರಂದು ಮಂಗಳೂರಿನಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ನೆಲ್ಯಾಡಿ ಪೇಟೆಯಲ್ಲಿನ ಹೈವೆ ಡಿವೈಡರ್ ತೆರವು ಹಾಗೂ ಫ್ಲೈ ಓವರ್ ರಚನೆಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಲಾಯಿತು.
- ಚತುಷ್ಪಥ ಹೆದ್ದಾರಿ ಕಾಮಗಾರಿ ವೇಳೆ ನೆಲ್ಯಾಡಿ ಪೇಟೆಯನ್ನು ಇಬ್ಬಾಗಗೊಳಿಸಿ ಡಿವೈಡರ್ ನಿರ್ಮಾಣ ಮಾಡಲಾಗಿದೆ. ಈ ಕಾಮಗಾರಿ ಈಗ ಅರ್ಧಕ್ಕೆ ನಿಂತಿದೆ. ಇದರಿಂದ ಸಾರ್ವಜನಿಕರ ದೈನಂದಿನ ವ್ಯವಹಾರಕ್ಕೆ ತೊಂದರೆಯಾಗಿದೆ. ಆದ್ದರಿಂದ ಅಪೂರ್ಣ ಹಂತದಲ್ಲಿರುವ ಡಿವೈಡರ್‌ನ ಒಂದೆರೆಡು ಕಡೆ ತಕ್ಷಣ ತೆರವುಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅವಕಾಶ ಮಾಡಿಕೊಡಬೇಕು. ನೆಲ್ಯಾಡಿ ಪೇಟೆಯ ಉಳಿವಿಗಾಗಿ ಪಿಲ್ಲರ್ ಬಳಸಿ ಫ್ಲೈ ಓವರ್ ಮಾಡಿಕೊಡುವ ಸಂಬಂಧ ಸೂಕ್ತ ಕ್ರಮಕೈಗೊಳ್ಳುವಂತೆ ಸಚಿವರಿಗೆ ಮನವಿ ಮಾಡಿ ಒತ್ತಾಯಿಸಲಾಗಿದೆ. ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ವಿನಯರಾಜ್, ಜಿ.ಪಂ.ಮಾಜಿ ಸದಸ್ಯರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ಉದ್ಯಮಿ ಕೆ.ಪಿ.ತೋಮಸ್, ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಎ.ಕೆ.ವರ್ಗೀಸ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಸಿ.ಹೆಚ್., ಜೊತೆ ಕಾರ್ಯದರ್ಶಿ ಉಷಾ ಅಂಚನ್, ಕೋಶಾಧಿಕಾರಿ ಸತೀಶ್.ಕೆ.ಎಸ್. ದುರ್ಗಾಶ್ರೀ, ನಾಝೀಂ ಸಾಹೇಬ್ ನೆಲ್ಯಾಡಿ ಮತ್ತಿತರರು ಉಪಸ್ಥಿತರಿದ್ದರು.