ಉಪ್ಪಿನಂಗಡಿ: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲು ಹೊರಟಿರುವ ‘ಸಂವಿಧಾನ ಜಾಗೃತಿ ಜಾಥಾ-2024’ ಉಪ್ಪಿನಂಗಡಿಯ ಹೊಸ ಬಸ್ ನಿಲ್ದಾಣಕ್ಕೆ ಆಗಮಿಸಿತು.
ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಲಲಿತಾ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆಗೈದರು. ಗಿರೀಶ್ ನಾವಡ ಮತ್ತು ಅವರ ಕಲಾ ತಂಡದವರಿಂದ ಸಂವಿಧಾನದ ಬಗ್ಗೆ ಅರಿವು, ಜಾಗೃತಿಯನ್ನು ಮೂಡಿಸಲಾಯಿತು. ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಗ್ರಾ.ಪಂ. ಸದಸ್ಯ ಅಬ್ದುರ್ರಹ್ಮಾನ್ ಕೆ. ಮಾತನಾಡಿ, ದೇಶದ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವಂತೆ ನಮ್ಮ ಸಂವಿಧಾನ ರಚನೆಯಾಗಿದ್ದು, ಇದಕ್ಕೆ ಬದ್ಧವಾಗಿ ಜೀವನ ನಡೆಸಬೇಕು ಎಂದರು.
ಸಮಾರಂಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ವ್ಯವಸ್ಥಾಪಕ ಕೃಷ್ಣ ಬಿ., ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕಿ ಸವಿತಾ, ಸಿಬ್ಬಂದಿ ಲತೇಶ್ ಕುಮಾರ್, ಮಲ್ಲಿಕಾ, ಉಪ್ಪಿನಂಗಡಿ ಗ್ರಾ.ಪಂ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯರಾದ ಯು.ಟಿ. ತೌಸಿಫ್, ಉಷಾ ಮುಳಿಯ, ಧನಂಜಯ, ವಿನಾಯಕ ಪೈ, ಅಬ್ದುಲ್ ರಶೀದ್, ಸಂಜೀವ ಮಡಿವಾಳ, ಶೋಭಾ, ವನಿತಾ, ಜಯಂತಿ ರಂಗಾಜೆ ಉಪಸ್ಥಿತರಿದ್ದರು.
ಗ್ರಾ.ಪಂ. ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಸ್ವಾಗತಿಸಿದರು. ಗ್ರಾ.ಪಂ. ಸದಸ್ಯ ಲೋಕೇಶ್ ಬೆತ್ತೋಡಿ ವಂದಿಸಿದರು. ಕಾರ್ಯದರ್ಶಿ ಗೀತಾ ಶೇಖರ್ ಕಾರ್ಯಕ್ರಮ ನಿರೂಪಿಸಿದರು.