ಪುತ್ತೂರು: ರಾಷ್ಟ್ರೀಯ ಹಬ್ಬಗಳ ಅಚರಣಾ ಸಮಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ,ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ, ಬಾಲವನ ಅಭಿವೃದ್ಧಿ ಸಮಿತಿ ಪುತ್ತೂರು ಸಹಯೋಗದಲ್ಲಿ 73ನೇ ಗಣರಾಜ್ಯೋತ್ಸವದ ಕುರಿತು ಪ್ರಬಂಧ, ಚಿತ್ರಕಲೆ, ಭಾಷಣ ಸ್ಪರ್ಧೆಗಳ ಬಹುಮಾನ ವಿತರಣೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಇದರ ವೆಬ್ ಸೈಟ್ ಮೊಬೈಲ್ ಆವೃತ್ತಿ ಅನಾವರಣ ಕಾರ್ಯಕ್ರಮಗಳು ಫೆ.14 ರಂದು ಪರ್ಲಡ್ಕ ಡಾ.ಶಿವರಾಮ ಕಾರಂತ ಬಾಲವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಕನ್ನಡ ಸಾಹಿತ್ಯ ಪರಿಷತ್‌ನ ವೆಬ್‌ಸೈಟ್ ಮೊಬೈಲ್ ಆವೃತ್ತಿ ಅನಾವರಣಗೊಳಿಸಿದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಮಾತನಾಡಿ, ಬಾಲವನದಲ್ಲಿ ತೆರೆದ ರಂಗ ಮಂದಿರವಿದೆ. ಇಲ್ಲಿ ಮಕ್ಕಳಲ್ಲಿರುವ ಪ್ರತಿಭೆಗಳ ಬೆಳವಣಿಗೆಗೆ ಅವಕಾಶ ಕಲ್ಪಿಸಬಹುದು. ಇದಕ್ಕಾಗಿ ಯೋಜನೆ ರೂಪಿಸಲಾಗುವುದು. ಬಾಲವನದ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಬಾಲವನದ ತೆರೆದ ರಂಗ ಮಂದಿರವನ್ನು ಆದ್ಯತೆಯಲ್ಲಿ ಅಭಿವೃದ್ದೀ ಪಡಿಸಲಾಗುವುದು. ನಂತರ ವಾರಾಂತ್ಯಕ್ಕೆ ವಿವಿಧ ಸ್ಪರ್ಧೆಗಳನ್ನು ನಡೆಸಲು ಕ್ರಮಕೈಗೊಳ್ಳಲಾಗುವುದು. ಸಾಹಿತ್ಯ ಪರಿಷತ್‌ನವರು ಉತ್ತಮ ಸೇವೆ ನೀಡುತ್ತಿದ್ದು ಬಾಲವನದ ಕಾರ್ಯಕ್ರಮದಲ್ಲಿಯೂ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶಿಕ್ಷಣ ಇಲಾಖೆ ಕೈ ಜೋಡಿಸುವಂತೆ ತಿಳಿಸಿದ ಅವರು ವಿದ್ಯಾರ್ಥಿಗಳೆಲ್ಲರೂ ಪ್ರತಿಭಾವಂತರಾಗಿದ್ದೀರಿ. ನಿಮ್ಮಲ್ಲಿ ಗುರಿ ಮುಖ್ಯವಾಗಿರಬೇಕು. ಮುಂದೆ ಐಎಎಸ್, ಐಪಿಎಸ್, ವೈದ್ಯ, ಶಾಸಕರು ಆಗುವ ಗುರಿಯಿರಬೇಕು. ಆ ಗುರಿ ತಲುಪುವ ತನಕ ಸಾಧನೆ ಮಾಡಬೇಕು. ಗುರಿ ತಲುಪಲು ಪ್ರಯತ್ನ ಮಾಡಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಮಾತನಾಡಿ, ಸಾಹಿತ್ಯ ಪರಿಷತ್ ಬಹಳಷ್ಟು ಕೆಲಸ ಮಾಡುತ್ತಿದೆ. ಉಮೇಶ್ ನಾಯಕ್ ಅಧ್ಯಕ್ಷರಾದ ಬಳಿಕ ಹೊಸ ಹುರುಪಿನಲ್ಲಿ ಕೆಲಸ ಮಾಡುತ್ತಿದ್ದು ಗ್ರಾಮ ಮಟ್ಟದಲ್ಲಿ ಸಾಹಿತ್ಯದ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಮಕ್ಕಳಲ್ಲಿಯೂ ಸಾಹಿತ್ಯ ಅಭಿರುಚಿ ಮೂಡುವಂತೆ ಮಾಡಿರುವ ಅಭಿನಂದನೆ ಸಲ್ಲಿಸಿದರು. ಕನ್ನಡ ಸಾಹಿತ್ಯ ಪರಿಷತ್ ರಾಷ್ಟ್ರೀಯ ಹಬ್ಬಗಳ ಜೊತೆಗೆ ಪರಿಷತ್ ಬೆರೆತುಕೊಂಡಿದೆ. ಮಕ್ಕಳ ಶೈಕ್ಷಣಿಕ ಬೆಳವಣಿಗೆ ಪೂರಕವಾಗಿ ಸಾಹಿತ್ಯ ಪರಿಷತ್ ಕೆಲಸ ಮಾಡುತ್ತಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಉಮೇಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಗಣರಾಜ್ಯೋತ್ಸವ ಮಹತ್ವ ತಿಳಿಸುವ ನಿಟ್ಟಿನಲ್ಲಿ ಸಹಾಯಕ ಆಯುಕ್ತರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಪ್ರಬಂಧ, ಚಿತ್ರಕಲೆ ಹಾಗೂ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಇದರಲ್ಲಿ ತಾಲೂಕಿನ 80 ಶಾಲೆಗಳ 700 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರದ ಎರಡು ವರ್ಷಗಲ್ಲಿ ಸುಮಾರು 150ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಗ್ರಾಮ, ಗ್ರಾಮಗಳಲ್ಲಿ ಸಾಹಿತ್ಯದ ಕಾರ್ಯಕ್ರಮ, ಐಎಎಸ್, ಐಪಿಎಸ್ ತರಬೇತಿ ಅಭಿಯಾನ, ಇನ್ನೂರಕ್ಕೂ ಅಧಿಕ ಸಾಧಕರನ್ನು ಸನ್ಮಾನಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್‌ಗೆ 9 ಸೆಂಟ್ಸ್ ಜಾಗವೂ ಮಂಜೂರಾಗಿದೆ ಎಂದರು.
ಸನ್ಮಾನ:
ಕನ್ನಡ ಸಾಹಿತ್ಯ ಪರಿಷತ್‌ನ ವೆಬ್‌ಸೈಟ್ ಮೊಬೈಲ್ ಆವೃತ್ತಿ ಅನಾವರಣ ತಯಾರಿಸಿದ ಪ್ರಮೀತ್ ರಾಜ್ ಕಟ್ಟತ್ತಾರ್‌ರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ತಹಶೀಲ್ದಾರ್ ಪುರಂದರ ಹೆಗ್ಡೆ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದ, ನಗರ ಸಭಾ ಸದಸ್ಯೆ ದೀಕ್ಷಾ ಪೈ,, ಕನ್ನಡ ಸಾಹಿತ್ಯ ಪರಿಷತ್‌ನ ಕೋಶಾಧ್ಯಕ್ಷ ಡಾ ಹರ್ಷಕುಮಾರ್ ಮಾಡಾವು, ಭಂಡಾರ್‌ಕರ್ ಕ್ಯಾಟರರ್ಸ್‌ನ ಮ್ಹಾಲಕ ಅವಿನಾಶ್ ಭಂಡಾರ್‌ಕರ್, ಶಿಕ್ಷಣ ಸಂಯೋಜಕರಾದ ಹರಿಪ್ರಸಾದ್, ಅಮೃತ ಕಲಾ, ಆರ್ಕಿಟೆಕ್ಚ ನಿರೇನ್ ಜೈನ್, ಕನ್ನಡ ಸಾಹಿತ್ಯ ಪರಿಷತ್‌ನ ಶಂಕರಿ ಶರ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಟ್ಟಾಭಿರಾಮ ಸುಳ್ಯ ಇವರಿಂದ ಹಾಸ್ಯ ಪ್ರಹಸನ ವಿಶೇಷ ಆಕರ್ಷಣೆಯಾಗಿತ್ತು. ಮಾಯಿದೇ ದೇವುಸ್ ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಉಮೇಶ್ ನಾಯಕ್ ಸ್ವಾಗತಿಸಿದರು. ಶಿಕ್ಷಕಿ ಶಶಿಕಲಾ ಬಹುಮಾನ ವಿಜೇತರ ಪಟ್ಟಿ ಓದಿದರು.