





ಪುತ್ತೂರು:ಕಾಸರಗೋಡು ಜೈಲಲ್ಲಿರುವ ಆರೋಪಿಯೋರ್ವನನ್ನು ತಿಂಗಳ ಹಿಂದೆ ಇರ್ದೆಯಲ್ಲಿ ಗ್ಯಾರೇಜೊಂದರಲ್ಲಿ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಬಾಡಿ ವಾರಂಟ್‌ನಲ್ಲಿ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆದುಕೊಂಡಿದ್ದ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೋರ್ವ ಆರೋಪಿಗೆ ನ್ಯಾಯಾಲಯ ಬಾಡಿ ವಾರಂಟ್ ಜಾರಿ ಗೊಳಿಸಿದೆ.


ಇರ್ದೆ ಜಂಕ್ಷನ್‌ನಲ್ಲಿರುವ ಪ್ರಸಾದ್ ಎಂಬವರ ಗ್ಯಾರೇಜಿನಿಂದ ಕಳೆದ ಜನವರಿ ೧೮ರಂದು ರಾತ್ರಿ ಟ್ರಾಲಿ ಜಾಕ್, ಸಣ್ಣ ಜಾಕ್, ಕಬ್ಬಿಣದ ಸ್ಟ್ಯಾಂಡ್, ಹಳೆಯ ೫ ಬ್ಯಾಟರಿ, ಹೊಸ ಬ್ಯಾಟರಿ-೧, ಟೂಲ್ ಸೆಟ್, ಆಯಿಲ್ ೩ ಲೀ.ನ ೫ ಕ್ಯಾನ್, ಒಮಿನಿ ಶಾಕ್ ಅಬ್ಸರ‍್ಬರ್ ೨, ಲಿವರ್ ಮತ್ತು ಸ್ಲ್ಯಡಿಂಗ್ ಹ್ಯಾಮರ್, ಗೇರ್ ಬಾಕ್ಸ್ ಸ್ಕ್ರಾಪ್ ಸೇರಿದಂತೆ ಅಂದಾಜು ೬೯.೮ ಸಾವಿರ ರೂ.ಮೌಲ್ಯದ ಸೊತ್ತು ಕಳವಾಗಿತ್ತು.ಈ ಕುರಿತು ಅವರು ನೀಡಿರುವ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.





ಈ ಮಧ್ಯೆ ಇರ್ದೆಯಲ್ಲಿ ಕಳ್ಳತನ ನಡೆದ ದಿನವೇ ರಾತ್ರಿ ಕೇರಳದ ಬದಿಯಡ್ಕದಲ್ಲಿಯೂ ಗ್ಯಾರೇಜೊಂದರಲ್ಲಿ ಕಳ್ಳತನ ನಡೆದಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿ ಅಲ್ಲಿನ ಪೊಲೀಸರು ಕಾಸರಗೋಡು ನೆಕ್ರಾಜೆಯ ನೆಲ್ಲಿಕಟ್ಟೆ ಮೂಸ ಎಂಬವರ ಮಗ ಫಾರೂಕ್ (೪೨ವ.)ಎಂಬಾತನನ್ನು ಬಂಧಿಸಿದ್ದರು.ಆರೋಪಿ ಫಾರೂಕ್ ಇರ್ದೆ ಗ್ಯಾರೇಜ್ ಕಳವು ಪ್ರಕರಣದಲ್ಲಿಯೂ ಭಾಗಿಯಾಗಿದ್ದ ವಿಚಾರ ಅಲ್ಲಿನ ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು.ಈ ನಿಟ್ಟಿನಲ್ಲಿ ಆತನನ್ನು ಬಾಡಿ ವಾರಂಟ್ ಮೇಲೆ ಕಾಸರಗೋಡು ಜೈಲಿನಿಂದ ಕರೆ ತಂದಿದ್ದ ಪೊಲೀಸರು ಫೆ.೧೨ರಂದು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿ, ಪ್ರಕರಣದ ವಿಚಾರಣೆಗಾಗಿ ಆರೋಪಿಯನ್ನು ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದರು.ಇದೀಗ ಆರೋಪಿಯನ್ನು ವಿಚಾರಣೆ ನಡೆಸಿದ ಬಳಿಕ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ.ಆರೋಪಿಯನ್ನು ಪೊಲೀಸರು ಕಾಸರಗೋಡು ಜೈಲಿಗೆ ಹಸ್ತಾಂತರಿಸಿದ್ದಾರೆ.
ಇನ್ನೋರ್ವನಿಗೆ ಬಾಡಿ ವಾರಂಟ್: ಬದಿಯಡ್ಕ ಗ್ಯಾರೇಜ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರಂಭದಲ್ಲಿ ಅಲ್ಲಿನ ಪೊಲೀಸರಿಂದ ಬಂಧಿತನಾಗಿದ್ದ ಮುಳ್ಳೇರಿಯಾ ಮುಳಿಯಾರು ಮಾಂಬಳ್ಳಿ ಮೊಹಮ್ಮದ್ ಶಫೀಕ್ ಎಂಬಾತ ವಿಚಾರಣೆ ವೇಳೆ ಆರೋಪಿ ಫಾರೂಕ್ ಕುರಿತ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದ.ತಾವೀರ್ವರೂ ಇರ್ದೆ ಗ್ಯಾರೇಜಿನಿಂದ ಕಳವು ಕೃತ್ಯದಲ್ಲಿ ಭಾಗಿಯಾಗಿದ್ದನ್ನು ಆತ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದ.ಸದ್ಯ ಕಣ್ಣೂರು ಜೈಲಲ್ಲಿರುವ ಆರೋಪಿ ಮೊಹಮ್ಮದ್ ಶಫೀಕ್‌ನನ್ನು ಇರ್ದೆಯ ಗ್ಯಾರೇಜಿನಿಂದ ಕಳವು ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗಾಗಿ ಹಾಜರುಪಡಿಸಲು ನ್ಯಾಯಾಲಯ ಬಾಡಿವಾರಂಟ್ ಜಾರಿಗೊಳಿಸಿದ್ದು ಮಾ.೨೮ರಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕಣ್ಣೂರು ಪೊಲೀಸರಿಗೆ ಸೂಚಿಸಿದೆ.
ಬಂಧಿತ ಆರೋಪಿತ್ರಯರಿಗೆ ನ್ಯಾಯಾಂಗ ಬಂಧನ
ಪುತ್ತೂರು:ಉದ್ಯೋಗ ನೀಡುವುದಾಗಿ ಹೇಳಿ ಲಕ್ಷಾಂತರ ರೂ.ಪಡೆದುಕೊಂಡು ವಂಚನೆ ಮಾಡಿರುವ ಪ್ರಕರಣದಲ್ಲಿ ಬಂಧಿತ ಮೂವರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದುಕೊಂಡಿದ್ದ ಪುತ್ತೂರು ಗ್ರಾಮಾಂತರ ಪೊಲೀಸರು ವಿಚಾರಣೆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ರಾಮಕೃಷ್ಣ ನಾಯ್ಕ ಎಂಬವರ ಪುತ್ರಿ ಸುಮಿತ್ರ ಬಾಯಿ ಸಿ.ಆರ್(೨೩ವ), ರಾಮಕೃಷ್ಣ ನಾಯ್ಕರ ಪುತ್ರ ರಾಹುಲ್ ಕುಮಾರ್(೧೯ವ.) ಹಾಗೂ ಹಾಸನ ಜಿಲ್ಲೆಯ ಶಾಂತಿಗ್ರಾಮ ಸೋಂಬೇಗೌಡ ಅವರ ಪುತ್ರಿ ಸೌಂದರ್ಯ ಎಂ.ಎಸ್(೨೧ವ) ಎಂಬವರನ್ನು ಪೊಲೀಸರು ಬಂಧಿಸಿದ್ದರು.ಬೆಂಗಳೂರು ನಗರ ನಂದಿನಿ ಲೇ ಔಟ್ ೧ನೇ ಬ್ಲಾಕ್, ವಿ.ಕೆ ರಾಮಣ್ಣ ೨ನೇ ಮುಖ್ಯ ರಸ್ತೆ ಎಂಬಲ್ಲಿ ಫೆ.೭ರಂದು ಆರೋಪಿಗಳನ್ನು ವಶಕ್ಕೆ ಪಡೆದು ಕರೆತಂದಿದ್ದ ಪೊಲೀಸರು ಬಂಧಿಸಿ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದರು.ಆರೋಪಿಗಳನ್ನು ವಿಚಾರಣೆ ನಡೆಸಿದ ಪೊಲೀಸರು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.ಅಯಾಪು ಗ್ರಾಮದ ಒಳತ್ತಡ್ಕ ನಿವಾಸಿ ನಿಶ್ಮಿತಾ ಎಂಬವರು ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.







