ಬೆಂಗಳೂರು: ಮಾಸಿಕ ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ ಬಳಿಕ, ಆಶಾ ಕಾರ್ಯಕರ್ತೆಯರು ಅಹೋರಾತ್ರಿ ಹೋರಾಟವನ್ನು ಫೆ.14ರ ಸಂಜೆ ಅಂತ್ಯಗೊಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಮೊತ್ತ ಸೇರಿ ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ ಕನಿಷ್ಠ ರೂ.15,೦೦೦ ಗೌರವಧನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್‌ನಲ್ಲಿ ಫೆ.12ರಂದು ಅಹೋರಾತ್ರಿ ಹೋರಾಟ ಆರಂಭಿಸಿದ್ದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸ್ಥಳಕ್ಕೆ ಭೇಡಿ ನೀಡಿ, ಮಾಸಿಕ ಗೌರವಧನವನ್ನು ರೂ.7,೦೦೦ಕ್ಕೆ ಹೆಚ್ಚಿಸಲು ಸರಕಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.
ಆಶಾ ಕಾರ್ಯಕರ್ತರಿಗೆ ಮಾಸಿಕವಾಗಿ ರಾಜ್ಯ ಸರ್ಕಾರ ನೀಡುವ ರೂ.5,೦೦೦ದ ಜೊತೆಗೆ ರೂ.2 ಸಾವಿರ ಸೇರಿಸಿ ಒಟ್ಟು ರೂ.7 ಸಾವಿರ ಖಾತ್ರಿಪಡಿಸುವುದಾಗಿ ಸಚಿವ ದಿನೇಶ್ ಗುಂಡೂರಾವ್ ಘೋಷಿಸಿದ್ದರು. ಉಳಿದಂತೆ,ಆಶಾ ಕಾರ್ಯಕರ್ತೆಯರು ನಡೆಸುವ ಆರೋಗ್ಯ ಸೇವೆ ಚಟುವಟಿಕೆಗಳನ್ನು ಪರಗಣಿಸಿ ಪ್ರೋತ್ಸಾಹಧನವನ್ನು ಪಾರದರ್ಶಕವಾಗಿ ನೀಡಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು. ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ ವೇತನ ನಿಗದಿಪಡಿಸುವ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದೂ ಅವರು ಹೇಳಿದ್ದರು.ಆದರೆ ಇದಕ್ಕೊಪ್ಪದೆ ಕಾರ್ಯಕರ್ತೆಯರು ಹೋರಾಟ ಮುಂದುವರಿಸಿದ್ದರು. ಇಡೀ ರಾತ್ರಿ ಉದ್ಯಾನದಲ್ಲಿ ಕಾರ್ಯಕರ್ತೆಯರು ಇದ್ದರು. ಪುತ್ತೂರಿನಿಂದಲೂ ಆಶಾ ಕಾರ್ಯಕರ್ತೆಯರ ಸಂಘದ ಪ್ರಮುಖರಾದ ಶೋಭಾ, ಅಮಿತಾ ಹರೀಶ್ ಸಹಿತ ಕೆಲವರು ಹೋರಾಟದಲ್ಲಿ ಪಾಲ್ಗೊಂಡಿದ್ದರು.
ಸಿಎಂ ಭೇಟಿಯಾದ ನಿಯೋಗ: ಫೆ.14ರಂದು ಆಶಾ ಕಾರ್ಯಕರ್ತೆಯರ ಮುಖಂಡರ ನಿಯೋಗವೊಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಿದರು. ಮನವಿ ಆಲಿಸಿದ ಸಿಎಂ ಸಿದ್ದರಾಮಯ್ಯ, ಇಲಾಖೆ ಸಚಿವರು, ಅಧಿಕಾರಿಗಳು ಹಾಗೂ ಸಂಘದ ಮುಖಂಡರ ಜೊತೆ ಫೆ.23ರ ನಂತರ ಸಭೆ ನಡೆಸಲಾಗುವುದು. ಬೇಡಿಕೆ ಈಡೇರಿಕೆ ಬಗ್ಗೆ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೆ ಒಪ್ಪಿದ ಮುಖಂಡರು, ತಾತ್ಕಾಲಿಕವಾಗಿ ಹೋರಾಟ ಅಂತ್ಯಗೊಳಿಸುತ್ತೇವೆ’ ಎಂದು ಘೋಷಿಸಿದರು. ಫೆ.14ರ ಸಂಜೆಯೇ ಎಲ್ಲ ಕಾರ್ಯಕರ್ತೆಯರು ಹೋರಾಟ ಸ್ಥಗಿತಗೊಳಿಸಿದರು.