ಕೊಯಿಲದಲ್ಲಿ ಅದ್ದೂರಿ ಸ್ವಾಗತ | ಫೆ.21ರ ತನಕ ತಾಲೂಕಿನೆಲ್ಲೆಡೆ ಸಂಚಾರ
ಕಡಬ: ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಜ.26ರಂದು ಚಾಲನೆಗೊಂಡು ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ’ಸಂವಿಧಾನ ಜಾಗೃತಿ ಜಾಥ-2024’ ಫೆ.17ರಂದು ಕಡಬ ತಾಲೂಕಿಗೆ ಆಗಮಿಸಿದ್ದು ಕಡಬ ತಾಲೂಕಿನ ಗಡಿ ಗ್ರಾಮವಾಗಿರುವ ಕೊಯಿಲದಲ್ಲಿ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ಫೆ.21ರ ತನಕ ತಾಲೂಕಿನ ವಿವಿಧ ಗ್ರಾಮ ಪಂಚಾಯತ್‌ಗಳಿಗೆ ಜಾಥ ತೆರಳಲಿದೆ.
ಬೆಳ್ತಂಗಡಿ ತಾಲೂಕಿನಿಂದ ಆಗಮಿಸಿದ ಸಂವಿಧಾನಶಿಲ್ಪಿ ಡಾ| ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಯಿದ್ದ ವಾಹನಕ್ಕೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೊಯಿಲ ಗ್ರಾಮದ ಗಂಡಿಬಾಗಿಲು ತಿರುಗುವಲ್ಲಿ ಸ್ವಾಗತ ಕೋರಲಾಯಿತು. ತಾಲೂಕು ಆಡಳಿತದ ಪರವಾಗಿ ಕಡಬ ತಹಶೀಲ್ದಾರ್ ಹಾಗೂ ಇತರೇ ಅಧಿಕಾರಿಗಳು ಡಾ| ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಜಾಥಕ್ಕೆ ಸ್ವಾಗತ ಕೋರಿದರು. ಅಲ್ಲಿಂದ ಶಾಲಾ ವಿದ್ಯಾರ್ಥಿಗಳ ಬ್ಯಾಂಡ್‌ಸೆಟ್‌ನೊಂದಿಗೆ, ಕಲಶಹೊತ್ತ ಮಹಿಳೆಯರ ಪೂರ್ಣಕುಂಭ ಸ್ವಾಗತದೊಂದಿಗೆ ಕೊಯಿಲ ಗ್ರಾ.ಪಂ.ಕಚೇರಿ ತನಕ ಜಾಥಾ ನಡೆಯಿತು. ಗ್ರಾಮ ಪಂಚಾಯಿತಿಗೆ ಆಗಮಿಸಿದ ಜಾಥಕ್ಕೆ ಗ್ರಾ.ಪಂ. ಆಡಳಿತ ಮಂಡಳಿ ವತಿಯಿಂದ ಡಾ| ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಪುಷ್ಪಾರ್ಚನೆ ಮಾಡಿ ಸ್ವಾಗತಿಸಲಾಯಿತು. ಡಾ| ಬಿ.ಆರ್.ಅಂಬೇಡ್ಕರ್ ಹಾಗೂ ವಿಶ್ವಗುರು ಬಸವಣ್ಣ ಅವರ ಭಾವಚಿತ್ರಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ಅವರು, ಭಾರತ ಸಂವಿಧಾನ ವಿಶ್ವದಲ್ಲೇ ದೊಡ್ಡ ಸಂವಿಧಾನವಾಗಿದೆ. ಅಲ್ಲದೇ ಕಠಿಣ ಸಂವಿಧಾನವೂ ಆಗಿದ್ದು ತಿದ್ದುಪಡಿ ಆಗಬೇಕಾದಲ್ಲಿ ಲೋಕಸಭೆ,ರಾಜ್ಯಸಭೆಯಲ್ಲಿ ಮಂಡನೆಯಾದ ಬಳಿಕವೇ ಕಾನೂನು ಆಗಿ ರೂಪಿತ ಆಗುತ್ತದೆ. ಭಾರತ ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟಿದ್ದು ಎಲ್ಲರೂ ಸಂವಿಧಾನವನ್ನು ಗೌರವಿಸಬೇಕೆಂದು ಹೇಳಿದರು.
ಕಡಬ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ ಅವರು ಸಂವಿಧಾನದ ಪೀಠಿಕೆ ವಾಚಿಸಿದರು.ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ, ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಕೃಷ್ಣ ಬಿ., ಲಕ್ಷ್ಮೀ ದೇವಿ, ರಾಮಕುಂಜ ಕ್ಲಸ್ಟರ್ ಸಿಆರ್‌ಪಿ ಮಹೇಶ್, ಕೊಯಿಲ ಗ್ರಾ.ಪಂ.ಅಧ್ಯಕ್ಷೆ ಪುಷ್ಪಾಸುಭಾಶ್ ಶೆಟ್ಟಿ, ಉಪಾಧ್ಯಕ್ಷ ಯತೀಶ್, ಪಿಡಿಒ ಸಂದೇಶ್, ಕಾರ್ಯದರ್ಶಿ ಪಮ್ಮು, ಗ್ರಾಮ ಆಡಳಿತಾಧಿಕಾರಿ ಶೇಷಾದ್ರಿ, ಕಡಬ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ, ಪುತ್ತೂರು ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರವಿಶಂಕರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾ.ಪಂ.ಸದಸ್ಯರು, ಸಿಬ್ಬಂದಿಗಳು, ಕೊಯಿಲ ಗ್ರಾ.ಪಂ.ವ್ಯಾಪ್ತಿಯ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಈ ವೇಳೆ ಬಹುಮಾನ ವಿತರಣೆ ಮಾಡಲಾಯಿತು. ಕೊಯಿಲ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನರೇಗಾ ಯೋಜನೆಯ ಕಡಬ ತಾಲೂಕು ಮಾಹಿತಿ, ಶಿಕ್ಷಣ ಸಂವಹನ ಸಂಯೋಜಕ ಭರತ್ ರಾಜ್ ಕಾರ್ಯಕ್ರಮ ನಿರ್ವಹಿಸಿದರು.