ಪುತ್ತೂರು: ಸಾಲಮನ್ನಾ ಮೊತ್ತ ರೈತರಿಗೆ ಪಾವತಿಯಾಗದಿರಲು ಸಹಕಾರ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳೇ ಹೊಣೆ. ಇದರ ಕುರಿತು ಸಾಲಗಾರರ ಸಾಲದ ನಂಬರ್ ಸಹಿತ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಗುವುದು. ಅವರು ಸಂಬಂಧಪಟ್ಟ ಇಲಾಖೆಗೆ ಬರೆದು ಕಾರಣವನ್ನು ಲಿಖಿತವಾಗಿ ನೀಡಬೇಕು. ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೂ ಮನವಿ ಸಲ್ಲಿಸಿ ನಿಗದಿತ ಗಡುವು ನೀಡಲಾಗುವುದು. ಈ ಅವಧಿಯಲ್ಲಿ ಸಾಲ ಮನ್ನಾದ ಮೊತ್ತ ಪಾವತಿಯಾಗದಿದ್ದರೆ ಡಿಸಿಸಿ ಬ್ಯಾಂಕ್ ಚಲೋ ನಡೆಸಲಾಗುವುದು ಎಂದು ಮಳೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಎಚ್ಚರಿಸಿದರು.
ಮಳೆನಾಡು ಜನಹಿತ ರಕ್ಷಣಾ ವೇದಿಕೆಯಿಂದ ಫೆ.20ರಂದು ಅಮರ್ ಜವಾನ್ ಸ್ಮಾರಕದ ಬಳಿ ನಡೆದ ಸಾಲ ಮನ್ನಾ ವಂಚಿತ ರೈತರ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. 2018ರಲ್ಲಿ ಜಾರಿಯಾದ ಸಾಲ ಮನ್ನಾ ಯೋಜನೆಯಲ್ಲಿ ದ.ಕ ಜಿಲ್ಲೆಯ ಶೇ.40 ರೈತರಗೆ ದೊರೆತಿದೆ. ನಂತರ ಸಹಕಾರಿ ಇಲಾಖೆ ಅಧಿಕಾರಿಗಳು ರೈತರನ್ನು ವಂಚಿಸುತ್ತಾ ಬಂದಿದ್ದಾರೆ. ರೈತರ ಸಮಸ್ಯೆ ಅಳಲನ್ನು ಯಾರೂ ಕೇಳಿಲ್ಲ. ನಿರ್ಲಕ್ಷ್ಯ ಹಾಗೂ ಭ್ರಷ್ಟಾಚಾರದಿಂದ ರೈತರಿಗೆ ಸವಲತ್ತು ತಲುಪದಂತಾಗಿದೆ. ಯಾವುದೇ ಇಲಾಖೆಗಳ ಅಧಿಕಾರಿಗಳಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಕಚೇರಿಗೆ ಬಂದು ಬೇಡಿಕೆ ಕೇಳಿದರೂ ರೈತರಿಗೆ ಸರಿಯಾದ ಮಾಹಿತಿ ನಿಡದೇ ಸತಾಯಿಸಿ ನಿರಂತರ ದೌರ್ಜನ್ಯವಾಗುತ್ತಿದೆ. ಲಕ್ಷಾಂತರ ರೈತರಿಗೆ ಸೇರಬೇಕಾದ ಲಕ್ಷಾಂತರ ಮೊತ್ತವನ್ನು ಯಾವುದೋ ಬ್ಯಾಂಕ್‌ನಲ್ಲಿ ಠೇವಣಿಯಿಟ್ಟು ರೈತರಿಗೆ ದೊರೆಯದಂತೆ ಅಧಿಕಾರಿಗಳು ಮಾಡುತ್ತಿದ್ದಾರೆ. ಲಂಚ ಕೊಡದೇ ರೈತರಿಗೆ ಯಾವುದೇ ಸವಲತ್ತು ಸಿಗದ ಪರಿಸ್ಥಿತಿಯಿದೆ. ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ರಂಗ ಇಲ್ಲದೇ ಇರುತ್ತಿದ್ದರೆ ರೈತರಿಗೆ ಯಾವುದೇ ಸವಲತ್ತು ದೊರೆಯುತ್ತಿರಲಿಲ್ಲ. ಭ್ರಷ್ಟಾಚಾರ ತಾಂಡವಾಡುತ್ತಿತ್ತು ಎಂದು ಆರೋಪಿಸಿದ ಅವರು ಸಾಲ ಮನ್ನಾದ ಮೊತ್ತವನ್ನು ಒಂದು ತಿಂಗಳೊಳಗೆ ಯಾವುದೇ ಅಲೆದಾಟ ಮಾಡಿಸದೇ ತಕ್ಷಣ ಬಿಡುಗಡೆ ಮಾಡುವಂತೆ ಅವರು ಆಗ್ರಹಿಸಿದರು.
ಕಳೆಂಜ ಬಾಳಿಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೂಸಪ್ಪ ಗೌಡ ಮಾತನಾಡಿ, ಅಧಿಕಾರಿಗಳ ಎಡವಟ್ಟು ಹಾಗೂ ಅವರು ನೀಡುವ ವಿವಿಧ ನೆಪಗಳಿಂದಾಗಿ ರೈತರು ಸಾಲ ಮನ್ನಾದಿಂದ ವಂಚಿತರಾಗಿದ್ದಾರೆ. ಸರಕಾರದಿಂದ ನ್ಯಾಯೋಚಿತವಾಗಿ ದೊರೆಯಬೇಕಾದ ಸೌಲಭ್ಯದಿಂದ ರೈತರಿಗೆ ದೊರೆಯುತ್ತಿಲ್ಲ. ಅರ್ಹ ರೈತರಿಗೆ ಸೌಲಭ್ಯ ದೊರೆತಿಲ್ಲ. ಹೆಸರಿಗಷ್ಟೇ ಗ್ರೀನ್ ಲಿಸ್ಟ್‌ನಲ್ಲಿದೆ. ಸಾಲದ ಸುಳಿ, ಧಾರಣೆಯ ಕುಸಿತದಿಂದ ರೈತರು ಸಂಕಷ್ಟದಲ್ಲಿದ್ದರೂ ಅವರಿಗೆ ಅವರಿಗೆ ಪ್ರಜೆಗಳ ಮುಖ್ಯವಾಗಿಲ್ಲ ಎಂದು ಹೇಳಿದ ಅವರು ರೈತರ ತಾಳ್ಮೆ ಪರೀಕ್ಷಿಸುವುದು ಬೇಡ ಎಂದು ಹೇಳಿದರು.
ಪ್ರತಿಭಟನಾ ಸಭೆಯ ಬಳಿಕ ಸಹಾಯಕ ಆಯುಕ್ತರು ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಮನವಿ ಸಲ್ಲಿಸಿದರು. ಸಾಲಮನ್ನಾ ಹೋರಾಟ ಸಮಿತಿ ಸಂಚಾಲಕ ಜಯಪ್ರಕಾಶ ಕೂಜುಗೋಡು, ಸಾಲಮನ್ನಾ ವಂಚಿತ ರೈತರಾದ ಶಂಕರ ನಾರಾಯಣ ಕೆ., ಈಶ್ವರ ಕೆ., ನರೇಂದ್ರ ಕೂಜುಗೋಡು, ಮೋಹನ ಕೆದಿಲ, ರಮೇಶ ಕೋನಡ್ಕ, ರಾಮಚಂದ್ರ ಭಟ್ ಕಾಯರ ಸೇರಿದಂತೆ ಹಲವು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಸಹಕಾರಿ ಇಲಾಖೆಯ ಲೋಪ ದೋಷಗಳನ್ನು ಸರಿಪಡಿಸಲು ಸರಕಾರದಿಂದ ನೇಮಕಗೊಂಡಿರುವ ಸಹಕಾರ ಇಲಾಖೆಯ ಉಪನಿಬಂಧಕರ ಮೊಬೈಲ್ ನಾಟ್‌ರೀಚೆಬಲ್. ಅವರು ರೈತರ ಸಮಸ್ಯೆಗಳಿಗೆ ಸ್ಪಂಧಿಸುತ್ತಿಲ್ಲ. ಅವರು ಯಾವುದೋ ಸಹಕಾರಿ ಸಂಘಗಳಗೆ ನಡೆಯುವ ನೇಮಕಾತಿಯಲ್ಲಿ ಲಕ್ಷಾಂತರ ಡೀಲ್‌ಗೆ ಕರೆ ಸ್ವೀಕಾರಿಸುತ್ತಾರೆ.ಹೊರತು ರೈತರಿಗೆ ತೊಂದರೆ ಆದಾಗ ಅವರು ಕರೆ ಸ್ವೀಕರಿಸುತ್ತಿಲ್ಲ ಎಂದು ಮಳೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಆರೋಪಿಸಿದರು.