ನೆಲ್ಯಾಡಿ: ಸಂವಿಧಾನ ಜಾಗೃತಿ ಜಾಥಾಕ್ಕೆ ಅದ್ದೂರಿ ಸ್ವಾಗತ

0

ದೇಶದ ಏಕತೆಗೆ ಸಂವಿಧಾನವೇ ಮೂಲ ಕಾರಣ ಆಗಿದೆ: ಗಿರೀಶ್ ನಂದನ್

ನೆಲ್ಯಾಡಿ: ಫೆ.20ರಂದು ಸಂಜೆ ನೆಲ್ಯಾಡಿಗೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ-2024ಕ್ಕೆ ನೆಲ್ಯಾಡಿ ಗ್ರಾಮ ಪಂಚಾಯಿತಿ ವತಿಯಿಂದ ವಿವಿಧ ಸಂಘ ಸಂಸ್ಥೆ ಹಾಗೂ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು.


ಸಂವಿಧಾನ ಜಾಗೃತಿ ಜಾಥಾ ವಾಹನಕ್ಕೆ ನೆಲ್ಯಾಡಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಸ್ವಾಗತ ಕೋರಲಾಯಿತು. ಜಿಲ್ಲಾಡಳಿತದ ಪರವಾಗಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಪುತ್ತೂರಿನ ಹಿಂದಿನ ಸಹಾಯಕ ಆಯುಕ್ತರಾದ ಗಿರೀಶ್ ನಂದನ್, ನೆಲ್ಯಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಲಾಂ ಬಿಲಾಲ್ ಹಾಗೂ ಇತರೇ ಗಣ್ಯರು ಸಂವಿಧಾನ ಜಾಗೃತಿ ಜಾಥಾ ವಾಹನದಲ್ಲಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಅಲ್ಲಿಂದ ಆರಂಭಗೊಂಡ ಮೆರವಣಿಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ನೆಲ್ಯಾಡಿ ಗಾಂಧಿ ಮೈದಾನಕ್ಕೆ ಆಗಮಿಸಿತು.


ಗಾಂಧಿಮೈದಾನದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ನಡೆದ ಸಮಾರಂಭವನ್ನು ಸಹಾಯಕ ಆಯುಕ್ತರಾದ ಗಿರೀಶ್ ನಂದನ್ ಅವರು ಉದ್ಘಾಟಿಸಿ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಸಂವಿಧಾನ ರಚನೆ ದೊಡ್ಡ ಸವಾಲು ಆಗಿತ್ತು. ಇದನ್ನು ಸ್ವೀಕರಿಸಿದ ಡಾ. ಬಿ.ಆರ್.ಅಂಬೇಡ್ಕರ್ ಅವರು ವಿಶ್ವದ ಅತೀದೊಡ್ಡ ಲಿಖಿತ ಸಂವಿಧಾನ ನೀಡಿದ್ದಾರೆ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಆಶಯವನ್ನು ಹಳ್ಳಿ ಹಳ್ಳಿಗೂ ಮುಟ್ಟಿಸುವ ಉದ್ದೇಶದಿಂದ ಸಂವಿಧಾನ ಜಾಗೃತಿ ಜಾಥಾ ನಡೆಯುತ್ತಿದೆ ಎಂದರು. ಇದೀಗ ಸಂವಿಧಾನದ ಇತಿಮಿತಿಯಲ್ಲಿ ದೇಶದಲ್ಲಿ ಕಾನೂನು ರೂಪಿತಗೊಳ್ಳುತ್ತಿದೆ. ದೇಶದ ಸಂವಿಧಾನ ಪ್ರಜೆಗಳಿಗೆ ನಿರ್ಭೀತಿಯಿಂದ ಕೆಲಸ ಮಾಡುವ ಅವಕಾಶ ಕಲ್ಪಿಸಿದೆ. ಭಾರತದಲ್ಲಿನ ವಿವಿಧತೆಯಲ್ಲಿನ ಏಕತೆಗೆ ಸಂವಿಧಾನವೇ ಮೂಲ ಕಾರಣ ಆಗಿದೆ ಎಂದು ಗಿರೀಶ್ ನಂದನ್ ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್ ಅವರು, ಗ್ರಾ.ಪಂ.ಸದಸ್ಯರಾದ ಜಯಾನಂದ ಬಂಟ್ರಿಯಾಲ್ ಅವರು ಮುತುವರ್ಜಿ ವಹಿಸಿ ಇತರೇ ಸದಸ್ಯರ ಸಹಕಾರದೊಂದಿಗೆ ವಿವಿಧ ಸಂಘಸಂಸ್ಥೆಯವರನ್ನು, ಶಿಕ್ಷಣ ಸಂಸ್ಥೆಯವರನ್ನು ಒಗ್ಗೂಡಿಸಿಕೊಂಡು ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸಲು ಕಾರಣಕರ್ತರಾಗಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ಆಶಯದಂತೆ ನಾವೆಲ್ಲರೂ ಮುಂದುವರಿಯೋಣ ಎಂದರು. ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಕೃಷ್ಣ ಬಿ.ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ನೆಲ್ಯಾಡಿ ಗ್ರಾ.ಪಂ.ಉಪಾಧ್ಯಕ್ಷೆ ರೇಷ್ಮಾಶಶಿ, ಕಡಬ ತಾ.ಪಂ.ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ, ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ., ನೆಲ್ಯಾಡಿ ಜ್ಞಾನೋದಯ ಬೆಥನಿ ಪ.ಪೂ.ಕಾಲೇಜಿನ ಪ್ರಾಂಶುಪಾಲ ರೆ.ಫಾ.ಡಾ.ವರ್ಗೀಸ್ ಕೈಪುನಡ್ಕ, ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆ ಸಂಚಾಲಕ ರೆ.ಫಾ.ನೋಮಿಸ್ ಕುರಿಯಾಕೋಸ್, ನೆಲ್ಯಾಡಿ ಜೆಸಿಐ ಅಧ್ಯಕ್ಷೆ ಸುಚಿತ್ರಾ ಜೆ.ಬಂಟ್ರಿಯಾಲ್, ಮುಖ್ಯಗುರು ಮಹಾಲಿಂಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೆಲ್ಯಾಡಿ ಗ್ರಾ.ಪಂ.ಪ್ರಭಾರ ಪಿಡಿಒ ಆನಂದ ಗೌಡ ಸ್ವಾಗತಿಸಿ, ಸದಸ್ಯ ಜಯಾನಂದ ಬಂಟ್ರಿಯಾಲ್ ವಂದಿಸಿದರು. ನೆಲ್ಯಾಡಿ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲಾ ಶಿಕ್ಷಕ, ಕಡಬ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರೂ ಆದ ವಿಮಲ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಮಮತಾ ಸಿ.ಹೆಚ್.ಸಂವಿಧಾನ ಪೀಠಿಕೆ ವಾಚಿಸಿದರು. ಪುಚ್ಚೇರಿ ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ನೆಲ್ಯಾಡಿ ಗ್ರಾ.ಪಂ.ಲೆಕ್ಕಸಹಾಯಕ ಅಂಗು, ಗ್ರಾ.ಪಂ. ಸಿಬ್ಬಂದಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ವಿಶ್ವನಾಥ ಶೆಟ್ಟಿ ನೇತೃತ್ವದ ಸುರತ್ಕಲ್‌ನ ಜಾನಪದ ಕಲಾತಂಡದವರಿಂದ ಬೀದಿ ನಾಟಕ ಪ್ರದರ್ಶನಗೊಂಡಿತು.


ಮೆರುಗು ನೀಡಿದ ಮೆರವಣಿಗೆ:
ಸುಮಾರು ಒಂದೂವರೇ ಕಿ.ಮೀ.ತನಕ ನಡೆದ ಮೆರವಣಿಗೆ ಗಮನ ಸೆಳೆಯಿತು. ನೆಲ್ಯಾಡಿ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಮುಂಭಾಗ ರೆ.ಫಾ.ವರ್ಗೀಸ್ ಕೈಪುನಡ್ಕ ಅವರು ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯೂ ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಲ್ಯಾಡಿ ಪೇಟೆಯ ಮೂಲಕ ಸಂಚರಿಸಿ ನೆಲ್ಯಾಡಿ ಗಾಂಧಿಮೈದಾನಕ್ಕೆ ಆಗಮಿಸಿತು. ನೆಲ್ಯಾಡಿ ಗ್ರಾಮದ ಶಿಕ್ಷಣ ಸಂಸ್ಥೆಗಳು, ವಿವಿಧ ಸಂಘಸಂಸ್ಥೆಯವರು, ಸರಕಾರಿ ಇಲಾಖೆಯವರು, ಜೆಸಿಐ ಸೇರಿದಂತೆ ಸುಮಾರು 22 ಸಂಘಸಂಸ್ಥೆಯವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಗೊಂಬೆಕುಣಿತ, ಬ್ಯಾಂಡ್ ಸೆಟ್ ಮೆರವಣಿಗೆಯಲ್ಲಿ ಗಮನ ಸೆಳೆಯಿತು. ಕಲಶಹೊತ್ತ ಮಹಿಳೆಯರ ಪೂರ್ಣಕುಂಭ ಸ್ವಾಗತದೊಂದಿಗೆ ಸಂವಿಧಾನ ಜಾಗೃತಿ ಜಾಥಾ ವಾಹನವು ಸಂಚರಿಸಿತು.

LEAVE A REPLY

Please enter your comment!
Please enter your name here