ಫೆ.23-26: ಬಜತ್ತೂರು ಶ್ರೀ ನರಸಿಂಹ ಮಠದಲ್ಲಿ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ

0

ನೆಲ್ಯಾಡಿ: ಬಜತ್ತೂರು ಗ್ರಾಮದ ಒಡ್ಯಮೆ ಸಮೀಪದಲ್ಲಿರುವ ಕೂವೆಮಠ(ಶಿವತ್ತಮಠ)ದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ನರಸಿಂಹ ಮಠದಲ್ಲಿ ಸಪರಿವಾರ ಶ್ರೀ ನರಸಿಂಹ ದೇವರ ಮತ್ತು ನಾಗದೇವರ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಭಾರತೀ ರಮಣಾಚಾರ್ಯ ಕಾರ್ಕಳ ಇವರ ನೇತೃತ್ವದಲ್ಲಿ ಆಚಾರ್ಯವರೇಣ್ಯ ನಾರಾಯಣ ಬಡೆಕಿಲ್ಲಾಯ ನಡ್ಪ ಇವರ ಹಿರಿತನದಲ್ಲಿ ಫೆ.23ರಿಂದ 26ರ ತನಕ ನಡೆಯಲಿದೆ.


ಫೆ.23ರಂದು ಹೊರೆಕಾಣಿಕೆ ಸಮರ್ಪಣೆ, ಭಜನಾ ಮೆರವಣಿಗೆ, ಉಗ್ರಾಣ ಮುಹೂರ್ತ, ಕಾರ್ಯಾಲಯ ಉದ್ಘಾಟನೆ ನಡೆಯಲಿದೆ. ಸಂಜೆ ಭಜನೆ, ಋತ್ವಿಜರಿಗೆ ಸ್ವಾಗತ, ಸಾಮೂಹಿಕ ಪ್ರಾರ್ಥನೆ ಬಳಿಕ ವಿವಿಧ ವೈದಿಕ ಕಾರ್ಯಕ್ರಮ ನಡೆಯಲಿದೆ. ಫೆ.24ರಂದು ಬೆಳಿಗ್ಗೆ, ಸಂಜೆ ವೈದಿಕ ಕಾರ್ಯಕ್ರಮ, ಭಜನೆ ನಡೆಯಲಿದೆ. ಈ ದಿನ ಸಂಜೆ ನಡೆಯುವ ಧಾಮಿಕ ಸಭೆಯಲ್ಲಿ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಬೆಳಾಲು ಶ್ರೀ ಕ್ಷೇತ್ರ ಆರಿಕೋಡಿ ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿ, ಮಾಜಿ ಸಚಿವ ಸಂಜೀವ ಮಠಂದೂರು ಸೇರಿದಂತೆ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ಫೆ.25ರಂದು ಬೆಳಿಗ್ಗೆ, ಸಂಜೆ ವೈದಿಕ ಕಾರ್ಯಕ್ರಮ, ಭಜನೆ ನಡೆಯಲಿದೆ. ಈ ದಿನ ಸಂಜೆ ಕಾಂಚನ ರೋಹಿಣಿ ವಿ.ಸುಬ್ಬರತ್ನಂ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಫೆ.26ರಂದು ಬೆಳಿಗ್ಗೆ 6ರಿಂದ ಪುಣ್ಯಾಹವಾಚನ, ನಾಗಸಾನಿಧ್ಯದಲ್ಲಿ ಶ್ರೀ ನಾಗದೇವರ ಪ್ರತಿಷ್ಠೆ, ಕಲಶಾಭಿಷೇಕ, ಆಶ್ಲೇಷ ಬಲಿ, ಪ್ರಸನ್ನ ಪೂಜೆ, ಶ್ರೀ ನರಸಿಂಹ ದೇವರ ಸಾನಿಧ್ಯದಲ್ಲಿ ಅಷ್ಟ ಮಹಾಮಂತ್ರ, ತತ್ತ್ವ, ಪ್ರತಿಷ್ಠಾ ಪ್ರಧಾನ ಹೋಮ, 101 ಕಲಶಾರಾಧನೆ, ಭಜನೆ ನಡೆಯಲಿದೆ. ಬೆಳಿಗ್ಗೆ 11.45ರ ಸಿಂಹ ಲಗ್ನ ಸುಮುಹೂರ್ತದಲ್ಲಿ ಶ್ರೀ ನರಸಿಂಹ ದೇವರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ರಕ್ತೇಶ್ವರಿ ಪ್ರತಿಷ್ಠೆ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಕ್ಷೇತ್ರ ವಿಧಿ ನಿರ್ಣಯ, ಯತಿ ಭಿಕ್ಷೆ, ಪ್ರಸಾದ ವಿತರಣೆ ನಡೆಯಲಿದೆ. ಬಳಿಕ ನಡೆಯುವ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಲಿದ್ದಾರೆ. ರಾತ್ರಿ ಶ್ರೀ ರಕ್ತೇಶ್ವರಿ ದೈವದ ಭಂಡಾರ ತೆಗೆದು ನರ್ತನ ಸೇವೆ ನಡೆಯಲಿದೆ. ಫೆ.23ರಿಂದ 26ರ ತನಕ ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ಅನ್ನದಾನ ನಡೆಯಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.

ಸಾಂಸ್ಕೃತಿಕ ಕಾರ್ಯಕ್ರಮ:
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಫೆ.24ರಂದು ರಾತ್ರಿ 9.30ರಿಂದ ಉಮೇಶ್ ಕೋಟ್ಯಾನ್ ವಾಮದಪದವು ಸಾರಥ್ಯದಲ್ಲಿ ಭಕ್ತಿ-ಗಾನ-ವೈಭವ ನಡೆಯಲಿದೆ. ಫೆ.25ರಂದು ರಾತ್ರಿ ಪಿಂಗಾರ ಕಲಾವಿದೆರ್ ಬೆದ್ರ ಇವರಿಂದ ’ ಪುದರ್ ಎಂಚ ದೀವೊಡ್…?’ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.

LEAVE A REPLY

Please enter your comment!
Please enter your name here