ಮತ್ತೆ ವಿವಾದಕ್ಕೆ ಕಾರಣವಾದ ನೆಲ್ಲಿಕಟ್ಟೆ ವಿಶೇಷ ಚೇತನರ ಫಿಸಿಯೋಥೆರಪಿ ಕೇಂದ್ರ ಕಟ್ಟಡ

0

ಕೇಂದ್ರ ನಿರ್ಮಾಣಕ್ಕೆ ಆಕ್ಷೇಪವಲ್ಲ. ಶಾಲಾ ಆವರಣದಿಂದ ಹೊರಗಡೆ ನಿರ್ಮಿಸಿ-ಪೋಷಕರು, ಹಿರಿಯ ವಿದ್ಯಾರ್ಥಿ, ಎಸ್‌ಡಿಸಿಎಂ, ಸ್ಥಳೀಯರ ಆಗ್ರಹ

ಪುತ್ತೂರು: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿ ಇರುವ ನೆಲ್ಲಿಕಟ್ಟೆ ಸರಕಾರಿ ಹಿ.ಪ್ರಾ ಶಾಲೆಯ ವಠಾರದಲ್ಲಿ ಶಾಲಾ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಕ್ಷೇತ್ರ ಸಂಪನ್ಮೂಲ ಕೇಂದ್ರದ ನೂತನ ಫಿಸಿಯೋಥೆರಪಿ ಕಟ್ಟಡ ನಿರ್ಮಾಣದ ಜಾಗದ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ.


ಫೆ.21ರಂದು ನಗರ ಸಬಾ ಸದಸ್ಯರು, ಪುರಸಭಾ ಮಾಜಿ ಅಧ್ಯಕ್ಷರು, ನೆಲ್ಲಕಟ್ಟೆ ಮಿತ್ರ ಮಂಡಲ ಶಾಲಾ ಎಸ್‌ಡಿಎಂಸಿ ಹಾಗೂ ಸ್ಥಳೀಯರು ಈಗಾಗಲೇ ಉದ್ದೇಶಿಸಿರುವ ಜಾಗದಲ್ಲಿ ಕಟ್ಟಡ ನಿರ್ಮಿಸುವುದಕ್ಕೆ ಅಧಿಕಾರಿಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಹಾಗೂ ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯವರ ಮುಂದೆ ನಗರ ಸಭಾ ಸದಸ್ಯ ರಮೇಶ್ ರೈ, ಮಾಜಿ ಸದಸ್ಯ ರಾಜೇಶ್ ಬನ್ನೂರು, ನೆಲ್ಲಿಕಟ್ಟೆ ಮಿತ್ರ ಮಂಡಲ, ಶಾಲಾ ಎಸ್‌ಡಿಎಂಸಿ, ಪೋಷಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಈಗಾಗಲೇ ಕಾಮಗಾರಿ ಪ್ರಾರಂಭಗೊಂಡಿರುವ ಜಾಗದಲ್ಲಿ ಕಟ್ಟಡ ನಿರ್ಮಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಶೇಷ ಚೇತನರ ಫಿಸಿಯೋತೆರಫಿ ಕೇಂದ್ರಕ್ಕೆ ಕಟ್ಟಡ ನಿರ್ಮಿಸಿವುವುದು ಉತ್ತಮ ಉದ್ದೇಶವಾಗಿದೆ. ಅದು ಆಗಲೇಬೇಕು. ಇದಕ್ಕೆ ನಮ್ಮ ವಿರೋಧವಿಲ್ಲ. ಆದರೆ ನಿರ್ಮಿಸುವ ಜಾಗ ಸೂಕ್ತವಲ್ಲ. ನೆಲ್ಲಿಕಟ್ಟೆ ಶಾಲೆಗೆ ಸೇರಿದ ವಿಶಾಲವಾಗಿರುವ ಮೂರು ಎಕರೆ ಜಾಗದಲ್ಲಿ ಅಲ್ಲಲ್ಲಿ ಕಟ್ಟಡ ನಿರ್ಮಿಸುವುದು ಸರಿಯಲ್ಲ. ಹೀಗಾಗಿ ಸದರಿ ಕಟ್ಟಡವನ್ನು ಎಲ್ಲಾ ರೀತಿಯಲ್ಲಿಯೂ ಅನುಕೂಲವಾಗುವಂತೆ ಅನಿತಾ ಆಯಿಲ್ ಮಿಲ್ ಬಳಿಯಲ್ಲಿ ನಿರ್ಮಿಸಿವಂತೆ ಅವರು ಅಧಿಕಾರಿಗಳಲ್ಲಿ ಆಗ್ರಹಿಸಿದ್ದಾರೆ.


ಶಾಲಾ ಆವರಣದ ಹೊರಗಡೆ ನಿರ್ಮಿಸಿ:
ಇಲ್ಲಿ ವಾಹನಗಳು ಓಡಾಡುವಾಗ ಮಕ್ಕಳಿಗೆ ತೊಂದರೆಯಾದರೆ ಯಾರು ಹೊಣೆ. ಇಲ್ಲಿ ಸಾಕಷ್ಟು ಅನೈತಿಕ ಚಟುವಟಿಕೆಗಳು ನಡೆಯುತ್ತಿದೆ. ಶಾಲೆಗೆ ಮೂರು ಎಕರೆ ಜಾಗವಿದೆ. ಎಲ್ಲರೂ ಒಟ್ಟು ಸೇರಿ ಶಾಲೆಯ ಅಭಿವೃದಿಗೆ ಪ್ರಯತ್ನಿಸಲಾಗುತ್ತಿದೆ. ಹೊರತು ವಿಕಲಚೇತನರಿಗೆ ಅನ್ಯಾಯವಾಗುವ ಉದ್ದೇಶವಲ್ಲ. ಕಟ್ಟಡವನ್ನು ಶಾಲಾ ಆವರಣದೊಳಗೆ ಮಾಡಬಾರದು. ಹೊರಗೆ ಮಾಡಿ. ಇಲ್ಲಿ ಕಟ್ಟಡ ನಿರ್ಮಿಸಿ ನಂತರ ಬೇರೆಡೆಗೆ ಸ್ಥಳಾಂತರ ಮಾಡುವುದಾದರೆ ಸರಕಾರದ ಲಕ್ಷಾಂತರ ಹಣ ವ್ಯರ್ಥವಾಗುತ್ತದೆ. ಹೀಗಾಗಿ ನಾವು ಸೂಚಿಸಿದ ಸೂಕ್ತವಾದ ಸ್ಥಳದಲ್ಲಿ ಮಾಡಿ. ಶಾಲಾ ಆವರಣದೊಳಗೆ ಮಾಡಿದರೆ ವಾಹನಗಳ ಓಡಾಟದಿಂದ ಮಕ್ಕಳಿಗೆ ಹಾಗೂ ಅಕ್ಷರದಾಸೋಹಕ್ಕೂ ದೂಳಿನ ಸಮಸ್ಯೆ ಉಂಟಾಗಲಿದೆ. ಹೀಗಾಗಿ ಶಾಲಾ ಆವರಣದ ಹೊರಗಡೆ ಕಟ್ಟಡ ನಿರ್ಮಿಸುವಂತೆ ಅಧಿಕಾರಿಗಳಲ್ಲಿ ವಿನಂತಿಸಿದರು.


ಅಂಬೇಡ್ಕರ್ ಭವನಕ್ಕೂ ಜಾಗಕೊಡಿ:
ಶಾಲಾ ಆವರಣದೊಳಗೆ ವಿಕಲಚೇತರ ಕೇಂದ್ರದ ಕಟ್ಟಡಕ್ಕೆ ಜಾಗ ಕೊಡುವುದಾದರೆ ಅಂಬೇಡ್ಕರ್ ಭವನಕ್ಕೂ ಜಾಗಕೊಡಿ. ಹಲವು ಸಮಯಗಳಿಂದ ನಾವು ಜಾಗ ಕೇಳುತ್ತಿದ್ದರೂ ಅದಕ್ಕೆ ಜಾಗವೇ ಇಲ್ಲ ಎಂದು ಅಲ್ಲಿ ನೆರೆದವರು ಆಗ್ರಹಿಸಿದರು.


ತಾತ್ಕಾಲಿಕವಾಗಿ ನಿರ್ಮಾಣ:
ಇಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗುತ್ತಿದೆ. ನಂತರ ಸ್ಥಳಾಂತರಿಸಿ ಬೇರೆ ಕಡೆ ಮಾಡಲಿದ್ದೇವೆ. ಶಾಲಾ ಆವರಣದೊಳಗೆ ಅಭಿವೃದ್ಧಿಯಾಗಬೇಕಾದರೆ ಮನವಿ ಕೊಡಿ. ಶಾಲೆಯ ಅಭಿವೃದ್ಧಿಗೆ ಅನುದಾನವಿದೆ. ಆದಷ್ಟು ಬೇಗ ಮಾಡಲಾಗುವುದು. ವಿಕಲಚೇತನರ ಕೇಂದ್ರ ಬೇರೆಡೆಗೆ ಸ್ಥಳಾಂತರವಾಗುವಾಗ ಆ ಕಟ್ಟಡವನ್ನು ನೀವೇ ಬಳಕೆ ಮಾಡಬಹುದು. ಹೀಗಾಗಿ ನೀವು ನಮ್ಮ ಜೊತೆ ಸಹಕರಿಸುವಂತೆ ತಿಳಿಸಿದ ಅಧಿಕಾರಿಗಳು ಕೊನೆಗೆ ಶಾಸಕರ ವಿಶೇಷ ಅನುದಾನದ ಮೂಲಕ ಕಾಮಗಾರಿ ನಡೆಯುತ್ತಿದ್ದು ಅವರೊಂದಿಗೆ ಚರ್ಚಿಸಿ ತೀರ್ಮಾನಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಅರ್ ಹಾಗೂ ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ತಿಳಿಸಿದರು.

LEAVE A REPLY

Please enter your comment!
Please enter your name here