ಗೇರು ತೋಟದಿಂದ ಪರಿಸರದ ಹಿತರಕ್ಷಣೆ-ಡಾ.ಯದುಕುಮಾರ್
ಪುತ್ತೂರು: ಗುಡ್ಡ ಪ್ರದೇಶದಲ್ಲಿ ಗೇರು ತೋಟ ಉತ್ತಮ ಬೆಳೆ. ಗೇರು ತೋಟದ ಉತ್ಪಾದನೆಯ ಜೊತೆಗೆ ಉಪ ಬೆಳೆಯನ್ನು ಬೆಳೆಯುವುದರಿಂದ ಜೀವನಕ್ಕೆ ಆಧಾರವಾಗಬಲ್ಲುದು. ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಂಡು ಅದಕ್ಕೆ ಬೇಕಾದ ಸಾವಯವ ಹಾಗೂ ರಾಸಾಯನಿಕ ಗೊಬ್ಬರವನ್ನು ಹಾಕಿದಾಗ ಗೇರು ತೋಟದ ಫಲವತ್ತತೆ ಸಾಧ್ಯ. ಜೊತೆಗೆ ಗೇರು ತೋಟ ಪರಿಸರ ಹಿತರಕ್ಷಣೆಗೆ ಬಹಳ ಒಳ್ಳೆಯದು ಎಂದು ಐಸಿಎಆರ್-ಡಿಸಿಆರ್ ಪುತ್ತೂರು ಇದರ ನಿವೃತ್ತ ಪ್ರಧಾನ ವಿಜ್ಞಾನಿ ಡಾ.ಯದುಕುಮಾರ್ ರವರು ಹೇಳಿದರು.
ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಹಾಗೂ ಐಸಿಎಆರ್-ಗೇರು ಸಂಶೋಧನಾ ನಿರ್ದೇಶನಾಲಯ ಪುತ್ತೂರು ಇದರ ಸಹಯೋಗದಲ್ಲಿ ಫೆ.20 ರಂದು ಮೊಟ್ಟೆತ್ತಡ್ಕದ ಡಿಸಿಆರ್ ಸಭಾಭವನದಲ್ಲಿ ನಡೆದ “ಗೇರು ಆಧಾರಿತ ಬೆಳೆ ಪದ್ಧತಿ” ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ, ಗೇರು, ರಬ್ಬರ್ ಹಾಗೂ ತೆಂಗು ಪ್ರಧಾನ ಬೆಳೆಯಾಗಿದ್ದು, ಅದರಲ್ಲಿ ಗೇರು ಹಾಗೂ ರಬ್ಬರ್ ಆಧಾರಸ್ತಂಭ ಬೆಳೆಯಾಗಿದೆ ಎಂದರು.
ಗೌರವ ಅತಿಥಿಗಳಾಗಿ ಭಾಗವಹಿಸಿದ ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೋಟರಿ ಸಂಸ್ಥೆಯು ಗ್ಲೋಬಲ್ ಪ್ರಾಜೆಕ್ಟ್ ಮೂಲಕ ಮಾಡಿದ ಕಾರ್ಯಕ್ರಮಗಳು ಪಬ್ಲಿಕ್ ಇಮೇಜ್ ಸೃಷ್ಟಿಸಿವೆ. ಪುತ್ತೂರಿನ ಹಿರಿಯ ಕ್ಲಬ್ ಎನಿಸಿದ ರೋಟರಿ ಪುತ್ತೂರು ಕ್ಲಬ್ ಅನೇಕ ಅನುಭವಸ್ಥರನ್ನು ಹೊಂದಿದ ಕ್ಲಬ್ ಆಗಿದೆ. ರೋಟರಿಯಿಂದ ಹಮ್ಮಿಕೊಳ್ಳುವ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಸದಸ್ಯರ ಕೂಡುವಿಕೆ ಹಾಗೂ ಒಡನಾಟ ಪ್ರಮುಖ ಪಾತ್ರವೆನಿಸಿದ್ದು ಪ್ರತಿಯೊಂದು ಕಾರ್ಯಕ್ರಮಗಳು ಮಾಧ್ಯಮದ ಮುಖೇನ ಪ್ರಚಾರ ಪಡೆಯಬೇಕಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ ಐಸಿಎಆರ್-ಡಿಸಿಆರ್ ಪುತ್ತೂರು ಇದರ ನಿರ್ದೇಶಕ ಡಾ.ಜೆ.ದಿನಕರ್ ಆಡಿಗರವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಾನವ ಗೇರು ಬೆಳೆಯುವಲ್ಲಿ ಆಸಕ್ತಿ ತೋರುತ್ತಿಲ್ಲ. ಯಾಕೆಂದರೆ ಗೇರು ಬೆಳೆಗೆ ಸೂಕ್ತವಾದ ಬೆಲೆ ಸಿಗುತ್ತಿಲ್ಲ. ಪ್ರಸ್ತುತ ದಿನಗಳಲ್ಲಿ ಗೇರು ಬೀಜವು ವಿವಿಧ ರೀತಿಯಲ್ಲಿ ಬಳಕೆಯಾಗುತ್ತಿದೆ ಎಂದು ಹೇಳಿ ಗೇರು ಬೀಜದ ಕುರಿತು ಮಾತನಾಡಿದರು.
ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿ ಸ್ವಾಗತಿಸಿದರು. ರೋಟರಿ ಹಿರಿಯ ಸದಸ್ಯ ಸುರೇಶ್ ಶೆಟ್ಟಿ ಅತಿಥಿಗಳ ಪರಿಚಯ ಮಾಡಿದರು. ರೋಟರಿ ಪುತ್ತೂರು ಕಾರ್ಯದರ್ಶಿ ಸುಜಿತ್ ರೈ ಡಿ, ಸಮುದಾಯ ಸೇವಾ ವಿಭಾಗದ ನಿರ್ದೇಶಕ ಸೋಮಶೇಖರ್ ರೈ ಸಹಿತ ರೋಟರಿ ಪುತ್ತೂರು ಸದಸ್ಯರು ಉಪಸ್ಥಿತರಿದ್ದರು. ವಿಜ್ಞಾನಿ ಭಾಗ್ಯ ಕಾರ್ಯಕ್ರಮ ನಿರೂಪಿಸಿದರು.
ಕ್ಯಾನ್ಸರ್, ಹೃದಯಾಘಾತ ನಿಯಂತ್ರಣ, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಗೇರು…
ಮಾನವನ ಸದೃಢ ಆರೋಗ್ಯಕ್ಕೆ ಗೇರು ಹಣ್ಣು, ಗೇರು ಬೀಜ ಸೇವನೆ ಅತ್ಯಂತ ಪರಿಣಾಮಕಾರಿ. ಇದು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ, ಕ್ಯಾನ್ಸರ್ ನಿಯಂತ್ರಣ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಹೆಚ್ಚು ಪರಿಣಾಮಕಾರಿಯಾಗಿದೆ. ಗೇರು ಬೀಜಗಳಲ್ಲಿ ಪ್ರೊಟೀನ್, ವಿಟಮಿನ್ಸ್, ಕ್ಯಾಲ್ಸಿಯಂ ಹಾಗೂ ಮಿನರಲ್ಸ್ ಯಥೇಚ್ಛವಾಗಿರುತ್ತದೆ. ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಕ್ಲಬ್ ನ ವೊಕೇಶನಲ್ ಪ್ರಾಜೆಕ್ಟ್ ಗೆ ಬಹಳ ಸಹಕಾರಿಯಾಗಿದೆ. ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಎದುರಿಸುತ್ತಿರುವ ಬ್ರೆಸ್ಟ್ ಕ್ಯಾನ್ಸರ್ ಗೆ ರೋಟರಿಯಿಂದ ಜಾಗೃತಿ ಬೇಕಾಗಿದೆ.
-ಡಾ.ಶ್ರೀಪತಿ ರಾವ್, ನಿಯೋಜಿತ ಅಧ್ಯಕ್ಷರು, ರೋಟರಿ ಕ್ಲಬ್ ಪುತ್ತೂರು
ಹುಟ್ಟುಹಬ್ಬದ ಶುಭ ಹಾರೈಕೆ…
ಕಾರ್ಯಕ್ರಮದ ಮೊದಲು ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು ಜೀವಿತದ 90 ವರ್ಷಗಳನ್ನು ಪೂರೈಸಿದ, ರೊಟೇರಿಯನ್ ಕೂಡ ಆಗಿರುವ ಅರಿಯಡ್ಕ ಚಿಕ್ಕಪ್ಪ ನಾಯ್ಕ್ ರವರ ನಿವಾಸಕ್ಕೆ ತೆರಳಿ ಹುಟ್ಟುಹಬ್ಬಕ್ಜೆ ಶುಭಾಶಯಗೈಯ್ದರು . ಬಳಿಕ ಅವರು ರೋಟರಿ ಪುತ್ತೂರು ಪ್ರಾಯೋಜಿತ ಪ್ರಾಜೆಕ್ಟ್ ಎನಿಸಿರುವ ಡಯಾಲಿಸಿಸ್ ಕೇಂದ್ರ, ಬ್ಲಡ್ ಬ್ಯಾಂಕ್, ಕಣ್ಣಿನ ಆಸ್ಪತ್ರೆಗೆ ಭೇಟಿ ನೀಡಿ ರೋಟರಿ ಪುತ್ತೂರು ಕಾರ್ಯವೈಖರಿಯನ್ನು ಶ್ಲಾಘಿಸಿದರು. ನಿಕಟಪೂರ್ವ ಅಸಿಸ್ಟೆಂಟ್ ಗವರ್ನರ್ ಎ.ಹೆ ರೈ, ನಿಯೋಜಿತ ಅಧ್ಯಕ್ಷ ಡಾ.ಶ್ರೀಪತಿ ರಾವ್ ಉಪಸ್ಥಿತರಿದ್ದರು.