ವಿವಿಧ ಅಭಿವೃದ್ಧಿ ಕೆಲಸಗಳಿಗೆ, ಇಂಟರ್‌ಲಾಕ್ ಅಳವಡಿಕೆಗೆ ಅನುದಾನ: ಅಶೋಕ್ ರೈ
ಹಿರೇಬಂಡಾಡಿ: ಹಿರೇಬಂಡಾಡಿ ಗ್ರಾಮದ ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನಕ್ಕೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರು ಫೆ.25ರಂದು ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ಅವರು, ದೇವಸ್ಥಾನದ ಅಭಿವೃದ್ಧಿ ಕೆಲಸಗಳಿಗೆ ಹಂತ ಹಂತವಾಗಿ ಅನುದಾನ ನೀಡಲು ಪ್ರಯತ್ನಿಸಲಾಗುವುದು. ದೇವಸ್ಥಾನದ ಬಲಭಾಗದಲ್ಲಿ ತಡೆಗೋಡೆ ಹಾಗೂ ದೇವಸ್ಥಾನದ ಸುತ್ತಲೂ ಬಾಕಿ ಇರುವಲ್ಲಿ ಇಂಟರ್‌ಲಾಕ್ ಅಳವಡಿಕೆಗೆ ಅನುದಾನ ನೀಡಲು ಪ್ರಯತ್ನಿಸುವುದಾಗಿ ಹೇಳಿದರು. ವಿವಿಧ ವಿಚಾರಗಳ ಬಗ್ಗೆ ಶಾಸಕರು ಚರ್ಚೆ ನಡೆಸಿದರು. ದೇವಸ್ಥಾನದ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ತೋಳ್ಪಾಡಿತ್ತಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜನಾರ್ದನ ಗೌಡ ಸಾಂತಿತ್ತಡ್ಡ, ಉತ್ಸವ ಸಮಿತಿ ಅಧ್ಯಕ್ಷ ನವೀನ್ ಪಡ್ಪು ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೇವಸ್ಥಾನದ ವಿವಿಧ ಸಮಿತಿ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಈ ವೇಳೆ ಉಪಸ್ಥಿತರಿದ್ದರು.
ರಸ್ತೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸ:
ಮುರದಮೇಲು ಎಂಬಲ್ಲಿಂದ ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆಯ ಸಿಂಕ್ರ ಕೊಡಂಗೆ ಎಂಬಲ್ಲಿ 25 ಲಕ್ಷ ರೂ.ಅನುದಾನದಲ್ಲಿ ರಸ್ತೆ ಕಾಂಕ್ರಿಟೀಕರಣಕ್ಕೆ ಶಾಸಕರು ಶಿಲಾನ್ಯಾಸ ನೆರವೇರಿಸಿದರು. ಬಳಿಕ ಸಿಂಕ್ರ ಕೊಡಂಗೆ ಅಂಗನವಾಡಿ ಬಳಿ 1 ಲಕ್ಷ ರೂ.ಅನುದಾನದಲ್ಲಿ ನಿರ್ಮಾಣವಾಗಲಿರುವ ತಡೆಗೋಡೆಗೆ ಶಿಲಾನ್ಯಾಸ ನೆರವೇರಿಸಿದರು. ಸುಮಾರು 1 ಲಕ್ಷ ರೂ.ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕರು ಈ ವೇಳೆ ಶಿಲಾನ್ಯಾಸ ನೆರವೇರಿಸಿದರು.