ಗ್ರಾಮೀಣ ಮಕ್ಕಳಲ್ಲಿ ಓದುವಿಕೆ ಮತ್ತು ಸಾಹಿತ್ಯದ ಕಡೆಗೆ ಒಲವು ಮೂಡಿಸುವ ಸ್ತುತ್ಯಾರ್ಹ ಕಾರ್ಯಕ್ರಮ: ಬಿ. ವೆಂಕಟರಮಣ ಬೋರ್ಕರ್
ಪುತ್ತೂರು: ನಿಡ್ಪಳ್ಳಿಯ ಸಮುದಾಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಇದರ ನೇತೃತ್ವದಲ್ಲಿ, ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಗ್ರಾಮ ಪಂಚಾಯತ್ ನಿಡ್ಪಳ್ಳಿ ಸಹಕಾರದಲ್ಲಿ, ಮಿತ್ರಂಪಾಡಿ ಜಯರಾಮ ರೈ ಅಬುದಾಬಿ ಪೋಷಕತ್ವದಲ್ಲಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದಂಗವಾಗಿ ಗ್ರಾಮ ಸಾಹಿತ್ಯ ಸಂಭ್ರಮ ಸರಣಿ ಕಾರ್ಯಕ್ರಮ 13, ಫೆ.24 ರಂದು ನಡೆಯಿತು. ಸಭಾ ಕಾರ್ಯಕ್ರಮವನ್ನು ಬಿ. ವೆಂಕಟರಮಣ ಬೋರ್ಕರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಮಕ್ಕಳಲ್ಲಿ ಓದುವಿಕೆ ಮತ್ತು ಸಾಹಿತ್ಯದ ಒಲವು ಹೆಚ್ಚಾಗಲು ಈ ಗ್ರಾಮ ಸಾಹಿತ್ಯ ಸಂಭ್ರಮ ಸ್ತುತ್ಯಾರ್ಹ ಕಾರ್ಯಕ್ರಮವಾಗಿದೆ. ನಮಗೆ ಇಂತಹ ಅವಕಾಶ ಸಿಗುತ್ತಿರಲಿಲ್ಲ ಹಾಗಾಗಿ ಮಕ್ಕಳು ಇಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ನಾಡಿನ ಭಾಷೆಯನ್ನು ಉಳಿಸುವವರಾಗಬೇಕೆಂದು ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಿ. ವೆಂಕಟರಮಣ ಬೋರ್ಕರ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿಡ್ಪಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಗೀತಾ. ಡಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸಂಧ್ಯಾಲಕ್ಷ್ಮಿ, ಬೆಟ್ಟಂಪಾಡಿ ಸಿ. ಆರ್. ಪಿ. ಪರಮೇಶ್ವರಿ ಪ್ರಸಾದ್ ಸಂದರ್ಭೋಚಿತವಾಗಿ ಮಾತನಾಡಿದರು. ಸರ್ವಾಧ್ಯಕ್ಷತೆ ವಹಿಸಿದ್ದ ರಕ್ಷಿತಾ ಬಿ, ಸಾಹಿತ್ಯ ಸಮ್ಮೇಳನದ ಸ್ವರೂಪ ಪಡೆದು ಸರಳವಾಗಿ ಪರಿಣಾಮಕಾರಿಯಾಗಿ ನಡೆಯುತ್ತಿರುವ ಈ ಗ್ರಾಮ ಸಾಹಿತ್ಯ ಸಂಭ್ರಮವು ಗ್ರಾಮೀಣ ಮಕ್ಕಳನ್ನು ಸಾಹಿತ್ಯ ಲೋಕಕ್ಕೆ ಬರಮಾಡಿಕೊಳ್ಳುವಲ್ಲಿ ಪೂರಕವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಾಹಿತ್ಯದ ವೇದಿಕೆಯನ್ನು ನೀಡುವುದು ಹಾಗೂ ಆ ಗ್ರಾಮದ ಸಾಧಕರನ್ನು ಗುರುತಿಸಿ ಗೌರವಿಸುವ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ ಗ್ರಾಮ ಗ್ರಾಮಕ್ಕೆ ಬಂದು ಜನಸಾಮಾನ್ಯರನ್ನು ತಲಪುವ ಕಾರ್ಯಕ್ರಮವೇ ಗ್ರಾಮ ಸಾಹಿತ್ಯ ಸಂಭ್ರಮ ಎಂದರು.
ಸಮಾರಂಭದ ಸಮಾರೋಪ ಭಾಷಣಗಾರರಾದ ಸ.. ಹಿ. ಪ್ರಾ ಶಾಲೆ ಮುಂಡೂರು ಇದರ ವಿದ್ಯಾರ್ಥಿನಿ ಶ್ರೀಜ ಸಾಹಿತ್ಯ ಸಮ್ಮೇಳನವನ್ನು ನಾನು ದೃಶ್ಯ ಮಾಧ್ಯಮ ಮೂಲಕ ಮಾತ್ರವೇ ನೋಡಿದ್ದೆ ಮತ್ತೆ ಪತ್ರಿಕೆಗಳಲ್ಲಿ ಓದಿ ತಿಳಿದುಕೊಂಡಿದ್ದೆ. ಆದರೆ ಸ್ವತಃ ನೋಡಿ ಅನುಭವಿಸುವಂತಹ ಭಾಗ್ಯ ನನಗೆ ಬಂದಿರುವುದು ಈ ನಿಡ್ಪಳ್ಳಿ ಗ್ರಾಮ ಸಾಹಿತ್ಯ ಸಂಭ್ರಮದಿಂದಾಗಿ ಎಂದು ಸಂತೋಷ ವ್ಯಕ್ತಪಡಿಸಿದರು.
ಅಭಿನಂದನಾ ಕಾರ್ಯಕ್ರಮ:
ನಿಡ್ಪಳ್ಳಿ ಗ್ರಾಮಕ್ಕೆ ಸಂಬಂಧಪಟ್ಟಂತೆ ಡಾ. ಸದಾಶಿವ ಭಟ್ ಪಳ್ಳು , ರಘುನಾಥ ರೈ ನುಳಿಯಾಲು, ಜನಾರ್ಧನ ದುರ್ಗ, ಆಸೀಫ್ ತಂಬುತ್ತಡ್ಕ, ಭವ್ಯಾ ಪಿ. ಆರ್. ನಿಡ್ಪಳ್ಳಿ, ಚಿತ್ರಾ. ಎಸ್, ಸಮನ್ವಿ ರೈ ನುಳಿಯಾಲು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪುತ್ತೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅಭಿನಂದಿಸಿ ಶುಭ ಹಾರೈಸಿದರು.
ಗ್ರಾಮ ಸಾಹಿತ್ಯ ಸಂಭ್ರಮದ ಸರ್ವಾಧ್ಯಕ್ಷೆ ರಕ್ಷಿತಾ ಬಿ ಅವರಿಗೆ ಕನ್ನಡ ಪೇಟ ತೊಡಿಸಿ, ಸಮಾರೋಪ ಭಾಷಣ ಮಾಡಿದ ಶ್ರೀಜ ಕೆ ಅವರಿಗೆ ಕನ್ನಡ ಶಾಲು ಹಾಕಿ ವಾದ್ಯಘೋಷದೊಂದಿಗೆ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು. ಸ ಹಿ. ಪ್ರಾ ಶಾಲೆ ಚೂರಿಪದವು ವಿದ್ಯಾರ್ಥಿಗಳಿಂದ ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಚಿಗುರೆಲೆ ಬಳಗದ ಸದಸ್ಯೆ ಚಿತ್ರಾ ಎಸ್ ಸ್ವಾಗತಿಸಿ, ಗ್ರಾಮ ಸಾಹಿತ್ಯ ಸಂಭ್ರಮ ಸಂಚಾಲಕ ನಾರಾಯಣ ಕುಂಬ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚಿಗುರೆಲೆ ಸಾಹಿತ್ಯ ಬಳಗದ ನಿರ್ವಾಹಕಿ ಅಪೂರ್ವ ಕಾರಂತ್ ದರ್ಬೆ ಕಾರ್ಯಕ್ರಮ ನಿರೂಪಿಸಿದರು. ಚಿಗುರೆಲೆ ಸಾಹಿತ್ಯ ಬಳಗದ ಸದಸ್ಯೆ ರಶ್ಮಿತಾ ಸುರೇಶ್ ಜೋಗಿಬೆಟ್ಟು ವಂದಿಸಿದರು. ಚಂದ್ರ ಮೌಳಿ ಕಡಂದೇಲು ಸಹಕರಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಾಹಿತ್ಯಕ್ಕೆ ನಿಡ್ಪಳ್ಳಿ ಗ್ರಾಮದ ಕೊಡುಗೆ ವಿಷಯ ಕುರಿತು ಲೇಖಕರು, ಚಿಂತಕರು ಆಗಿರುವ ನುಳಿಯಾಲು ರಾಧಾಕೃಷ್ಣ ರೈ ಮಾತನಾಡಿದರು. ತದನಂತರ ಕನ್ನಡದಲ್ಲೂ ಐ ಎ ಎಸ್ ಬರೆಯಿರಿ ಅಭಿಯಾನ ಕುರಿತು ಕ.ಸಾ.ಪ ಪುತ್ತೂರು ಐ ಎ ಎಸ್ ದರ್ಶನ ಇದರ ಪ್ರೇರಕ ಭಾಷಣಕಾರ ಪ್ರಣವ್ ಭಟ್ ಮಾಹಿತಿ ನೀಡಿದರು. ಬಳಿಕ ಬಾಲ ಕವಿಗೋಷ್ಠಿ, ಬಾಲ ಕಥಾಗೋಷ್ಠಿ, ಪ್ರವಾಸ ಕಥನ, ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಂದ ನಡೆಯಿತು. ಬಾಲ ಕವಿಗೋಷ್ಠಿ ಅಧ್ಯಕ್ಷತೆಯನ್ನು ವಿವೇಕಾನಂದ ಕಾಲೇಜು ಪುತ್ತೂರು ಇಲ್ಲಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥರಾದ ಭವ್ಯಾ ಪಿ. ಆರ್ ನಿಡ್ಪಳ್ಳಿ, ಬಾಲ ಕಥಾಗೋಷ್ಠಿ ಅಧ್ಯಕ್ಷತೆಯನ್ನು ಸ.ಪ್ರೌಢಶಾಲೆ ಬೆಟ್ಟಂಪಾಡಿ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕಿ ಚಂದ್ರಕಲಾ, ಸಾರ್ವಜನಿಕ ವಿಭಾಗದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಮಾ.ಉ.ಹಿ.ಪ್ರಾ.ಶಾಲೆ ಇಲ್ಲಿನ ಆಂಗ್ಲ ಭಾಷಾ ಶಿಕ್ಷಕ ಜನಾರ್ಧನ ದುರ್ಗ ವಹಿಸಿದ್ದರು. ಯುವ ಕವಿಗೋಷ್ಠಿಯಲ್ಲಿ ಸಮನ್ವಿ ರೈ ನುಳಿಯಾಲು, ಶೋಭಾ ಕಾಟುಕುಕ್ಕೆ, ಭಾವನಾ ಕೆ. ಜೆ, ಸುಜಯ ಸ್ವರ್ಗ, ಆನಂದ ರೈ ಅಡ್ಕಸ್ಥಳ, ಅಪೂರ್ವ ಕಾರಂತ್ ದರ್ಬೆ ಭಾಗವಹಿಸಿದ್ದರು. ವಿವಿಧ ಗೋಷ್ಠಿಗಳ ನಿರೂಪಣೆಯನ್ನು ಸಾರ್ಥಕ್ ರೈ ಟಿ, ಚಿತ್ರಾ ಎಸ್, ಅಪೂರ್ವ ಕಾರಂತ್, ಶ್ರೀದೇವಿ, ಚಾಂದಿನಿ ನಿರ್ವಹಿಸಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.