ಪುತ್ತೂರು ಸಹಿತ ಜಿಲ್ಲೆಯ ಅಗ್ನಿಶಾಮಕ ಠಾಣೆಗಳಲ್ಲಿ ಜಲವಾಹನದ ಕೊರತೆ
ಎರಡು ವಾಹನವಿದ್ದರೂ ಒಂದು ವಾಹನ ಬಳಕೆಗೆ ಎದುರಾದ ಫಿಟ್ನೆಸ್ ಸಮಸ್ಯೆ
ಏಕ ಕಾಲದಲ್ಲಿ ಎರಡು ಕಡೆ ಅಗ್ನಿ ಅಪಘಡವಾದರೆ ದೇವರೇ ಗತಿ..!
ವರದಿ: ಲೋಕೇಶ್ ಬನ್ನೂರು
ಬಿರು ಬಿಸಿಲಿಗೆ ಎಲ್ಲೆಡೆ ಅಗ್ನಿ ಅನಾಹುತಗಳು ಆಗಾಗ ನಡೆಯುತ್ತಲೇ ಇವೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳದವರು ಹರಸಾಹಸ ಮಾಡುತ್ತಲೇ ಇದ್ದಾರೆ. ಆದರೆ ಇದೀಗ ಪುತ್ತೂರು ಸೇರಿದಂತೆ ದ.ಕ. ಜಿಲ್ಲೆಯ ಎಲ್ಲಾ ಅಗ್ನಿಶಾಮಕ ಠಾಣೆಗಳಲ್ಲಿ 15 ವರ್ಷ ಮೇಲ್ಪಟ್ಟ ಜಲವಾಹನಗಳೇ ಇರುವುದರಿಂದ ಅದನ್ನು ಬಳಸುವಂತಿಲ್ಲ. ಹೀಗಾಗಿ ಅಗ್ನಿ ಅವಘಡ ಆದ ಸ್ಥಳಕ್ಕೆ ತೆರಳಲು ಜಲವಾಹನದ ಕೊರತೆ ಎದುರಾಗಿದೆ.
ಪುತ್ತೂರು, ಸುಳ್ಯ, ಬೆಳ್ತಂಗಡಿ ಸಹಿತ ಜಿಲ್ಲೆಯ ಅಗ್ನಿಶಾಮಕ ಠಾಣೆಗಳಲ್ಲಿ ತಲಾ ಎರಡು ಅಗ್ನಿಶಾಮಕ ಜಲವಾಹನಗಳಿವೆ. ಆದರೆ ಇವುಗಳಲ್ಲಿ ತಲಾ ಒಂದು ವಾಹನಕ್ಕೆ 15 ವರ್ಷ ಕಳೆದಿದೆ. ಈ ವಾಹನದ ಫಿಟ್ನೆಸ್ ಪ್ರಮಾಣ ಪತ್ರ ಕ್ಯಾನ್ಸಲ್ ಆಗಿದೆ. ಹಾಗಾಗಿ 15 ವರ್ಷ ಮೇಲ್ಪಟ್ಟ ವಾಹನದ ಉಪಯೋಗ ಮಾಡುವಂತಿಲ್ಲ. ಪ್ರಸ್ತುತ ಎಲ್ಲಾ ಠಾಣೆಗಳಲ್ಲೂ ಒಂದೊಂದು ವಾಹನ ಮಾತ್ರ ಕಾರ್ಯಾಚರಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪುತ್ತೂರು ತಾಲೂಕಿಗೆ ಸಂಬಂಽಸಿ ಮೊಟ್ಟೆತ್ತಡ್ಕದಲ್ಲಿ ಅಗ್ನಿಶಾಮಕ ಠಾಣೆಯಿದೆ. ಠಾಣೆಯ ಮುಂದೆ ಜಲವಾಹನ ನಿಲ್ಲುವ ಶೆಡ್ನಲ್ಲಿ ಎರಡು ಜಲವಾಹನ ಇದ್ದರೂ ಒಂದು ವಾಹನಕ್ಕೆ 15 ವರ್ಷ ಮೇಲ್ಪಟ್ಟಿರುವುದರಿಂದ ಅದರ ಎದುರು ಬಿಳಿ ಬಣ್ಣದ ಹೊದಿಗೆ ಹಾಕಿ ಗುಣಿಸು ಗುರುತು ಹಾಕಲಾಗಿದೆ. ಕಳೆದ ವರ್ಷ ಈ ವಾಹನ ಪೂರ್ಣವಾಗಿ ಬೆಂಕಿ ನಂದಿಸಲು ಬಳಕೆಯಾಗಿತ್ತು. ಆದರೆ ಈ ವರ್ಷ ಅದಕ್ಕೆ ಸಾಮಾರ್ಥ್ಯವಿದ್ದರೂ ಅದನ್ನು ಬಳಕೆ ಮಾಡುವಂತಿಲ್ಲ. ಅದರ ಪಕ್ಕದಲ್ಲಿ ಇನ್ನೊಂದು ವಾಹನವಿದ್ದು ಅದು ಸದ್ಯ ಕಾರ್ಯಾಚರಿಸುತ್ತಿದೆ.
ಏಕಕಾಲದಲ್ಲಿ ಎರಡು ಕಡೆ ಬೆಂಕಿ ಅವಘಡವಾದರೆ.!: ಪ್ರಸ್ತುತ ಪುತ್ತೂರಿನಲ್ಲಿ 1 ಅಗ್ನಿಶಾಮಕ ಜಲವಾಹನ ಮಾತ್ರ ಬಳಕೆಯಾಗುತ್ತಿದೆ. ತುರ್ತು ಕರೆ ಬಂದಾಗ ಘಟನಾ ಸ್ಥಳಕ್ಕೆ ತೆರಳಬೇಕಾಗುತ್ತದೆ. ಇದೇ ಸಂದರ್ಭ ಇನ್ನೊಂದು ಕಡೆಯಿಂದ ಕರೆ ಬಂದರೆ ಅಲ್ಲಿಗೆ ಹೋಗಲೂ ಆಗದ ಪರಿಸ್ಥಿತಿ ಉಂಟಾಗಿದೆ. ಇತ್ತೀಚೆಗೆ ಸುಬ್ರಹ್ಮಣ್ಯ ರೈಲ್ವೇ ನಿಲ್ದಾಣಕ್ಕೆ ಪುತ್ತೂರಿನ ಅಗ್ನಿಶಾಮಕ ಜಲವಾಹನ ಹೋದ ಸಂದರ್ಭದಲ್ಲಿ ಮುರ, ಜಿಡೆಕಲ್ಲುಗಳಲ್ಲಿ ಅಗ್ನಿ ಅವಘಡವಾದಾಗ ಸುಳ್ಯದಿಂದ ಅಗ್ನಿಶಾಮಕ ಜಲ ವಾಹನ ಬಂದಿತ್ತು. ಆದರೆ ಸುಳ್ಯದಲ್ಲೂ ಇದೇ ಸಂದರ್ಭ ಅಗ್ನಿ ಅವಘಡ ಆಗಿದ್ದರೆ ಪರಿಸ್ಥಿತಿ ಏನಾದಿತು ಎಂಬುದನ್ನು ಗಮನಿಸಬೇಕಾಗಿದೆ. ಫೆ.27ರಂದು ಪುತ್ತೂರು ಆನೆಮಜಲು ಸಮೀಪ ಗುಡ್ಡೆಗೆ ಬಿದ್ದ ಬೆಂಕಿ ನಂದಿಸಲು ಪುತ್ತೂರಿನ ಜಲವಾಹನ ತೆರಳಿದಾಗ ಜಿಡೆಕಲ್ಲು ಸಮೀಪವೂ ಬೆಂಕಿ ಬಿದ್ದಿರುವ ಬಗ್ಗೆ ಕರೆ ಬಂದಿತ್ತು.
ಕಳೆದ ವರ್ಷ ಪುತ್ತೂರು ಅಗ್ನಿಶಾಮಕ ಠಾಣೆಗೆ ಬೆಂಕಿ ಅವಘಡದ ಬಗ್ಗೆ 298 ಕರೆ ಹಾಗೂ 55 ರಕ್ಷಣಾ ಕರೆಗಳು ಬಂದಿವೆ. ಈ ಸಲ ಉರಿ ಬಿಸಿಲು ಹೆಚ್ಚಾಗಿದ್ದು ಬೆಂಕಿ ಅವಘಡಗಳು ನಡೆಯುತ್ತಲೇ ಇವೆ. ಹಲವು ಕಡೆಯಿಂದ ಕರೆ ಬರುತ್ತಿದೆ. ಇವೆಲ್ಲವನ್ನೂ ಅಗ್ನಿಶಾಮಕ ದಳದವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಪುತ್ತೂರು ಅಗ್ನಿಶಾಮಕ ಠಾಣೆಗೆ ಒಂದು ಜಲವಾಹನದ ಜೊತೆಗೆ ಯುನಿಟ್ ಆಫೀಸರ್ ಮತ್ತು 7 ಮಂದಿ ಸಿಬ್ಬಂದಿಯ ಕೊರತೆಯೂ ಇದೆ. ಇದರೊಂದಿಗೆ ಬೋಟ್ ಕೊಂಡೊಯ್ಯಲು ಸಣ್ಣ ವಾಹನದ ಕೊರತೆಯು ಇದೆ. ಆದರೆ ಎಲ್ಲಿಯೂ ಕೊರತೆ ಕಾಣದಂತೆ ಅಗ್ನಿಶಾಮಕ ಸಿಬ್ಬಂದಿಗಳು ತುರ್ತು ಕರೆಗಳಿಗೆ ಸ್ಪಂದಿಸುತ್ತಿರುದು ವಿಶೇಷವಾಗಿದೆ.
15 ವರ್ಷ ಹಳೆಯ ವಾಹನ ಬಳಕೆಗೆ ನಿರ್ಬಂಧವಿರುವುದರಿಂದ ಸಮಸ್ಯೆ ಎದುರಾಗಿದೆ. ದ.ಕ.ಜಿಲ್ಲೆಯ ಪಾಂಡೇಶ್ವರದಲ್ಲಿ ಎರಡು ಜಲ ವಾಹನ ಬಳಕೆಯಾಗುತ್ತಿದೆ. ಉಳಿದ ಎಲ್ಲಾ ಅಗ್ನಿಶಾಮಕ ಠಾಣೆಗಳಲ್ಲೂ ಒಂದೊಂದು ವಾಹನ ಇದೆ. ತುರ್ತು ಸಂದರ್ಭದಲ್ಲಿ ಜಿಲ್ಲೆಯ ಇತರ ಠಾಣೆಗಳಿಂದಲೂ ವಾಹನ ಕಳಿಸುವ ವ್ಯವಸ್ಥೆ ಆಗುತ್ತಿದೆ. ಸಮಸ್ಯೆ ರಾಜ್ಯದಲ್ಲೇ ಇದೆ. ವಾಹನದ ಬೇಡಿಕೆ ಇದೆ. ಆದರೆ ಅಗ್ನಿಶಾಮಕ ವಾಹನ ಹೊಸದಾಗಿ ಬಿಲ್ಡ್ ಮಾಡಬೇಕಾಗುವುದರಿಂದ ಅದು ಪ್ರೋಸೆಸ್ನಲ್ಲಿದೆ. ಈ ವರ್ಷ ಬೇಸಿಗೆಯಲ್ಲಿ ಸಮಸ್ಯೆ ಆಗುತ್ತಿದೆ. ಸಾರ್ವಜನಿಕರು ಆದಷ್ಟು ರಸ್ತೆ ಬದಿ, ಗುಡ್ಡೆ ಬದಿಯಲ್ಲಿರುವ ಒಣಗಿದ ತರಗೆಲೆಗಳನ್ನು ಸ್ವಚ್ಛಗೊಳಿಸಲು ಜಾಗೃತಿ ಮೂಡಿಸಬೇಕಾಗಿದೆ. ಒಣಗಿದ ಹುಲ್ಲುಗಳನ್ನು ತೆರವು ಮಾಡುವ ಕೆಲಸ ಆಗಬೇಕು. ಕೆಲವರು ಸ್ವಚ್ಛಗೊಳಿಸುವ ನೆಪದಲ್ಲಿ ರಾಶಿ ಹಾಕಿ ಬೆಂಕಿ ಕೊಡುತ್ತಾರೆ. ಅದು ಬಿಸಿಲಿನ ತಾಪಕ್ಕೆ ಪಕ್ಕಕ್ಕೆ ಹರಡುವ ಸಾಧ್ಯತೆ ಬಹುತೇಕ ಇದೆ. ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಅದೇ ರೀತಿ ಅಗ್ನಿ ಅವಘಡವಾದಾಗ ನಾವೂ ಬರುತ್ತೇವೆ.
ಭರತ್ ಕುಮಾರ್,
ಜಿಲ್ಲಾ ಅಗ್ನಿಶಾಮಕ ಅಧಿಕಾರಿ