ಪಿಎಚ್‌ಡಿ ವಿದ್ಯಾರ್ಥಿನಿ ಚೈತ್ರಾ ನಾಪತ್ತೆ ಪ್ರಕರಣ – ಬೆಂಗಳೂರುನಲ್ಲಿ ಪೊಲೀಸ್ ತನಿಖೆ ಚುರುಕು

0

ಪುತ್ತೂರು: ಉಳ್ಳಾಲ ಠಾಣೆಯಲ್ಲಿ ದಾಖಲಾಗಿರುವ, ಪುತ್ತೂರು ಮೂಲದ ಪಿಎಚ್‌ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಯುವತಿಯ ಪತ್ತೆಗಾಗಿ ಬೆಂಗಳೂರುನಲ್ಲಿ ತನಿಖೆ ಚುರುಕುಗೊಳಿಸಿದ್ದು ಮಹತ್ವದ ಸುಳಿವು ಲಭಿಸಿದೆ. ಪ್ರಕರಣದ ಪತ್ತೆಗಾಗಿ ಮಂಗಳೂರು ಪೊಲೀಸ್ ಆಯುಕ್ತರು ಪೊಲೀಸರ ತಂಡ ರಚನೆ ಮಾಡಿದ್ದು ಪೊಲೀಸರ ಒಂದು ತಂಡ ಬೆಂಗಳೂರು ಹಾಗೂ ಇನ್ನೊಂದು ತಂಡ ಹೊನ್ನಾವರಕ್ಕೆ ತೆರಳಿದೆ.

ಮುಕ್ವೆ ದಿ.ಸತೀಶ್ ಹೆಬ್ಬಾರ್ ಅವರ ಪುತ್ರಿ ಚೈತ್ರಾ ಹೆಬ್ಬಾರ್ (27ವ) ಅವರು ಕೋಟೆಕಾರು ಮಾಡೂರು ಬಳಿಯ ಖಾಸಗಿ ಪಿಜಿಯಲ್ಲಿ ಉಳಿದುಕೊಂಡಿದ್ದರು.ಆಹಾರ ಭದ್ರತೆ ವಿಷಯದಲ್ಲಿ ಪಿಎಚ್‌ಡಿ ಮಾಡುತ್ತಿದ್ದ ಅವರು ಫೆ.17ರಂದು ಪಿ.ಜಿಯಿಂದ ಹೊರಗೆ ಹೋಗಿದ್ದವರು ಕಾಲೇಜಿಗೂ ಹೋಗದೆ, ಮರಳಿ ಪಿ.ಜಿಗೂ ಬಾರದೆ ನಾಪತ್ತೆಯಾಗಿದ್ದರು. ವಿದ್ಯಾರ್ಥಿನಿಯ ಚಿಕ್ಕಪ್ಪ ಪ್ರಕಾಶ್ ಹೆಬ್ಬಾರ್ ಅವರು ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಾಪತ್ತೆಯಾಗಿರುವ ಚೈತ್ರಾ ಅವರ ಸ್ಕೂಟರ್ ಸುರತ್ಕಲ್ ಕೋಟೆಕಾರ್ ಸಮೀಪ ಹೊಟೇಲೊಂದರ ಬಳಿಯಲ್ಲಿ ಪತ್ತೆಯಾಗಿದೆ. ಆಕೆಯ ಮೊಬೈಲ್‌ಫೋನ್ ಹೊಸಬೆಟ್ಟು ಬಳಿ ಕೊನೆಯ ಲೊಕೇಶನ್ ತೋರಿಸುತ್ತಿದ್ದು ಆ ಬಳಿಕ ಸ್ವಿಚ್ ಆಫ್ ಆಗಿದೆ.‌

ಚೈತ್ರಾ ನಾಪತ್ತೆಯ ಹಿಂದೆ ಡ್ರಗ್ ಪೆಡ್ಲರ್ ಯುವಕನ ಕೈವಾಡವಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದ ನಂತರ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದರು. ಚೈತ್ರಾ ಅವರು ಒಬ್ಬಂಟಿಯಾಗಿ ಬಸ್ಸಲ್ಲಿ ಹೋಗಿದ್ದಲ್ಲದೆ, ಆಕೆ ಬೆಂಗಳೂರು ಕಡೆ ತೆರಳಿರುವ ಮಾಹಿತಿಯನ್ನು ಮೊಬೈಲ್ ಲೊಕೇಶನ್ ಆಧಾರದಲ್ಲಿ ಪೊಲೀಸರು ಕಲೆ ಹಾಕಿದ್ದರು. ಆಕೆ ಮೆಜೆಸ್ಟಿಕ್‌ನಿಂದ ಬಸ್ ಇಳಿದು ಹೋಗಿರುವ ಮಾಹಿತಿಯನ್ನೂ ಸಿಸಿಟಿವಿಯಲ್ಲಿ ಪತ್ತೆ ಹಚ್ಚಿದ್ದ ಪೊಲೀಸರು ಬೆಂಗಳೂರು ವ್ಯಾಪ್ತಿಯಲ್ಲಿ ಆಕೆಯ ಶೋಧ ಕಾರ್ಯವನ್ನು ಚುರುಕುಗೊಳಿಸಿದ್ದು, ಇನ್ನೆರಡು ದಿನಗಳಲ್ಲಿ ಆಕೆಯನ್ನು ಪತ್ತೆ ಹಚ್ಚುವ ಭರವಸೆಯಲ್ಲಿದ್ದಾರೆ.

ಯುವಕನೂ ನಾಪತ್ತೆ:
ಚೈತ್ರಾರೊಂದಿಗೆ ಸಂಪರ್ಕ ಹೊಂದಿದ್ದನೆನ್ನಲಾದ ಪುತ್ತೂರು ಮೂಲದ ಯುವಕನೂ ನಾಪತ್ತೆಯಾಗಿದ್ದು ಆತನ ಮೊಬೈಲ್‌ಫೋನ್ ಕೂಡಾ ಸ್ವಿಚ್ ಆಫ್ ಆಗಿದೆ.‌ ಇಬ್ಬರನ್ನೂ ಪತ್ತೆ ಮಾಡುವ ನಿಟ್ಟಿನಲ್ಲಿ ಉಳ್ಳಾಲ ಪೊಲೀಸರು ಎಲ್ಲೆಡೆ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಪ್ರಕರಣದ ಹಿಂದಿರುವವರ ಪತ್ತೆಗೆ ಎಸಿಪಿಗೆ ವಿಹಿಂಪ, ಬಜರಂಗದಳ ಮನವಿ:
ಉಳ್ಳಾಲ ಪ್ರಖಂಡ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ಮುಖಂಡರು ಗುರುವಾರ ಎಸಿಪಿ ಧನ್ಯಾ ಅವರನ್ನು ಭೇಟಿಯಾಗಿ ನಾಪತ್ತೆ ಪ್ರಕರಣದ ಹಿಂದೆ ಇರುವವರನ್ನು ಪತ್ತೆ ಹಚ್ಚಬೇಕು. ಚೈತ್ರಾಗೆ ಡ್ರಗ್ಸ್ ನೀಡಿ ಆಕೆಯನ್ನು ಅಪಹರಿಸಿದ್ದು, ಈ ಲವ್ ಜೆಹಾದ್ ಹಿಂದಿನ ಶಕ್ತಿಗಳನ್ನು ಬಂಧಿಸಬೇಕು ಮತ್ತು ಡ್ರಗ್ಸ್ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

ಪುತ್ತಿಲ ಭೇಟಿ:
ಈ ನಡುವೆ ಪುತ್ತಿಲ ಪರಿವಾರದ ನಾಯಕ ಅರುಣ್ ಕುಮಾರ್ ಪುತ್ತಿಲ ಅವರು ಉಳ್ಳಾಲ ಪೊಲೀಸ್ ಠಾಣೆಗೆ ತೆರಳಿ, ಚೈತ್ರಾ ನಾಪತ್ತೆ ಪ್ರಕರಣದ ತನಿಖೆಗೆ ಸಂಬಂಧಿಸಿ ಇನ್‌ಸ್ಪೆಕ್ಟರ್ ಬಾಲಕೃಷ್ಣ ಎಚ್.ಎನ್.ಅವರೊಂದಿಗೆ ಚರ್ಚಿಸಿ ತನಿಖೆಯನ್ನು ಚುರುಕುಗೊಳಿಸುವಂತೆ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here