ರಾಜ್ಯಾದ್ಯಂತ ಮಿಂಚುತ್ತಿರುವ ಪುತ್ತೂರ ಪ್ರತಿಭೆ ದೀಪಿಕಾ ದಿನೇಶ್ ಮರೀಲ್ – ಕನ್ನಡ ಚಿತ್ರ ಪುರುಷೋತ್ತಮನ ಪ್ರಸಂಗದ ನಾಯಕಿಗೆ ಪ್ರಶಂಸೆಯ ಸುರಿಮಳೆ

0

ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ಕನ್ನಡ ಚಲನಚಿತ್ರ ಪುರುಷೋತ್ತಮನ ಪ್ರಸಂಗ ದಲ್ಲಿ ಜಾನಕಿ ಪಾತ್ರಧಾರಿ ದೀಪಿಕಾ ಎಲ್ಲಿಯವರು ಗೊತ್ತೇ. ಪಕ್ಕಾ ನಮ್ಮೂರ ಹುಡುಗಿ ಅಂದ್ರೆ ಕರಾವಳಿಯ ಪುತ್ತೂರಿನ ಬೆಡಗಿ.
ಹೌದು, ಪುತ್ತೂರು ಸಮೀಪದ ಕೂರ್ನಡ್ಕ ಮರೀಲ್ ನ ದಿನೇಶ್ ಹಾಗೂ ಪ್ರಫುಲ್ಲ ದಂಪತಿ ಪುತ್ರಿಯೇ ಈ ದೀಪಿಕಾ. ಆಕೆಯ ಚೊಚ್ಚಲ ಕನ್ನಡ ಚಿತ್ರದಲ್ಲೇ ನಾಯಕಿಯಾಗಿ ನಟಿಸಿ ರಾಜ್ಯದ ಲಕ್ಷಾಂತರ ಸಿನಿ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರಲ್ಲದೇ ಚಿತ್ರದ ಕೊನೆಯಲ್ಲಿ ಕಣ್ಣೀರು ತರಿಸಿದ್ದಾರೆ.

ಈ ಚಿತ್ರದಲ್ಲಿ ಜಾನಕಿ ಆಗಿರುವ ದೀಪಿಕಾ ಮಾತು ಬಾರದ, ಕಿವಿ ಕೇಳದ ನಟನೆ ಮಾಡಿರುವ ಗ್ರಾಮ್ಯ ಸೊಗಡಿನ ಯುವತಿ. ಸದಾ ಲಂಗ ದಾವಣಿಯಲ್ಲಿರುವ ಮುಗ್ಧೆ. ನಾಯಕನಟ ಅಜಯ್ ಪೃಥ್ವಿಯ ಬಾಲ್ಯದ ಗೆಳತಿ. ಆಕೆಯ ಏನೇ ವಿಚಾರಗಳಿದ್ದರೂ ನಾಯಕ ಅರ್ಥ ಮಾಡಿಕೊಳ್ಳುತ್ತಾನೆ. ದೀಪಿಕಾಗೆ ತುಂಬಾ ಟಫ್ ರೋಲ್. ವಿಕಲಾಂಗೆಯಾಗಿ ನಟಿಸಬೇಕಾದರೆ ಎಷ್ಟೇ ತರಬೇತು ಇದ್ದರೂ, ಅಭ್ಯಾಸ ಇದ್ದರೂ ಎಡವುತ್ತಾರೆ. ಆದರೆ ದೀಪಿಕಾ ಇವನ್ನೆಲ್ಲಾ ಸವಾಲಾಗಿ ತೆಗೆದುಕೊಂಡು ದೊಡ್ಡ ಸ್ಕ್ರೀನ್ ನಲ್ಲಿ ಮಿಂಚಬೇಕಾದರೆ ಆಕೆಯ ಪ್ರತಿಭೆಗೆ ಸಲ್ಯೂಟ್ ಹೊಡೆಯಲೇಬೇಕು.


ದಕ್ಷಿಣ ಕನ್ನಡ ಮತ್ತು ಅರಬ್ ರಾಷ್ಟ್ರ ದುಬೈ ಮತ್ತು ಅಬುಧಾಬಿಯಲ್ಲಿ ಚಿತ್ರೀಕರಣಗೊಂಡಿರುವ ಪುರುಷೋತ್ತಮನ ಪ್ರಸಂಗದಲ್ಲಿ ರಾಷ್ಟ್ರಪ್ರೇಮದ ಸೊಗಡಿದೆ. ಒಂದು ಕುಟುಂಬದಲ್ಲಿ ಯುವಕರ ಪಾತ್ರದ ಕುರಿತು ಒಳ್ಳೆಯ ಸಂದೇಶವಿದೆ. ಮಾನವೀಯ ಮೌಲ್ಯವನ್ನು ಪ್ರತಿಪಾದಿಸಲಾಗಿದೆ. ನಾಯಕನಟನ ದುಬೈ ಕನಸಿಗೆ ಇಬ್ಬರು ನಾಯಕಿಯರಲ್ಲಿ ಒಬ್ಬರಾದ ಪುತ್ತೂರ ಬೆಡಗಿ ದೀಪಿಕಾ ಬೆಂಬಲವಾಗುತ್ತಾರೆ. ನಾಯಕನ ಪ್ರತಿ ಆಗುಹೋಗುಗಳಲ್ಲಿ ದೀಪಿಕಾ ಜೊತೆಯಾಗುತ್ತಾರೆ. ಒಟ್ಟಿನಲ್ಲಿ ದೀಪಿಕಾ ಅವರ ಚೊಚ್ಚಲ ಚಿತ್ರ ಹಿಟ್ ಆಗಿದೆ. ಬೆಂಗಳೂರು, ಮಂಗಳೂರು ಚಿತ್ರಮಂದಿರಗಳು ವೀಕೆಂಡ್‌ನಲ್ಲಿ ಹೌಸ್ ಫುಲ್… ಹೌಸ್ ಫುಲ್. ಈ ಚಿತ್ರದ ಕೊನೆಯ ಸನ್ನಿವೇಶದಲ್ಲಿ ದೀಪಿಕಾ ಪ್ರೇಕ್ಷಕರ ಕಣ್ಣನ್ನು ತೇವಗೊಳಿಸುತ್ತಾರೆ. ಈ ಕೊನೆಯ ಕ್ಲೈಮಾಕ್ಸ್ ಅಂತೂ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುವಂತಹದ್ದು. ನಾಯಕ ನಟ ಅಜಯ್ ಇಡೀ ಚಿತ್ರಕ್ಕೆ ಜೀವ ತುಂಬಿದ್ದಾರೆ.

ದೀಪಿಕಾ ತಂದೆ ದಿನೇಶ್ ಪುತ್ತೂರು ಕೋರ್ಟ್ ರೋಡಲ್ಲಿ ಪ್ರಫುಲ್ಲ ಐರನ್ ಲಾಂಡ್ರಿ ಶಾಪ್ ನಡೆಸುತ್ತಿದ್ದಾರೆ. ಪ್ರಾರಂಭದಲ್ಲಿ ದಿನೇಶ್ ಪತ್ನಿ ಪ್ರಫುಲ್ಲ ಪ್ರಾರಂಭಿಸಿದ ಐರನ್ ಶಾಪ್ ಈಗ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ದೀಪಿಕಾ ಸಹೋದರ ಮನೀಶ್ ಬಿಸಿಎ ಮುಗಿಸಿ ಬೆಂಗಳೂರು ಐಟಿ ಕಂಪೆನಿಯ ಉದ್ಯೋಗಿಯಾಗಿದ್ದಾರೆ. ಪುತ್ತೂರು ಮಾದೆ ದೇವುಸ್ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ವಿದ್ಯೆ ಕಲಿತಿರುವ ದೀಪಿಕಾ, ಪುತ್ತೂರು ಸಂತ ಫಿಲೋಮಿನಾ ಕಾಲೇಜಲ್ಲಿ ಮುಂದಿನ ತರಗತಿಗಳೊಂದಿಗೆ ಅಲ್ಲೇ ಬಿಕಾಂ ಪದವಿ ಮುಗಿಸಿದರು. ನಂತರ ಮಂಗಳೂರು ಏವಿಯೇಶನ್ ಅಕಾಡೆಮಿಯಲ್ಲಿ ಏವಿಯೇಶನ್ ಕಲಿತು ವಿಮಾನದಲ್ಲಿ ಕ್ಯಾಬಿನ್ ಕ್ರೂ ಆಗುವ ಕನಸು ಕಂಡಿದ್ದರು. ಕೋವಿಡ್‌ನಿಂದಾಗಿ ಆ ಕನಸು ಈಡೇರಿಸಲಾಗಿಲ್ಲ. ನಂತರ ಮಂಗಳೂರಿನಲ್ಲಿರುವ ಯುಎಸ್‌ಎ ಯ ಐಟಿ ಕಂಪೆನಿ ಕೋಗ್ಝಂಟ್ ನಲ್ಲಿ ಟಿ.ಡಿ. ಬ್ಯಾಂಕ್ ಪ್ರಾಜೆಕ್ಟ್ ನಲ್ಲಿ ಸೀನಿಯರ್ ಅಸೋಸಿಯೇಟ್ ಆಗಿರುವ ದೀಪಿಕಾ ಸಣ್ಣದರಲ್ಲೇ ಭರತನಾಟ್ಯ ಕಲಾವಿದೆ. ಸಾಂಸ್ಕೃತಿಕ ಕ್ಷೇತ್ರದಲ್ಲಿ ಬೆಳಗಲು ಸೈಂಟ್ ವಿಕ್ಟರ್ಸ್ ಶಾಲೆಯ ಶಶಿಕಲಾ ಟೀಚರ್ ದೀಪಿಕಾ ಅವರ ಗುರುಗಳು. ಶಾಲಾ ದಿನಗಳಲ್ಲಿ ಎನ್.ಸಿ.ಸಿ. ಯಲ್ಲಿ ಸ್ವಯಂಸೇವಕರಾಗಿದ್ದ ದೀಪಿಕಾ ಎಳೆಯದರಲ್ಲೇ ಪ್ರತಿಭಾನ್ವಿತರು. ಆದರೆ ಎಂದೂ ಅವರು ಚಿತ್ರದ ನಾಯಕಿಯಾಗುವ ಕನಸು ಕಂಡವರಲ್ಲ. ಇನ್ಸ್ಟಾಗ್ರಾಮ್ ನಲ್ಲಿ ಆಗೊಮ್ಮೆ ಈಗೊಮ್ಮೆ ರೀಲ್ಸ್ ಮಾಡುತ್ತಿದ್ದ ದೀಪಿಕಾಳ ಅಭಿನಯ ನೋಡಿ ತುಳು ಚಿತ್ರನಟ ಅರ್ಜುನ್ ಕಾಪಿಕಾಡ್ ಕರೆಸಿಕೊಂಡು ಚಿತ್ರದ ಆಫರ್ ನೀಡಿದರು. ನಂತರ ಡಾ. ದೇವದಾಸ್ ಕಾಪಿಕಾಡ್ ಎರಡು ತಿಂಗಳ ತರಬೇತಿ ನೀಡಿ ಪುರುಷೋತ್ತಮನ ಪ್ರಸಂಗಕ್ಕೆ ತಯಾರಿ ಮಾಡಿದರು.

ಬೆಂಗಳೂರು ರಾಷ್ಟ್ರಕೂಟ ಪಿಕ್ಚರ್ಸ್ ಬ್ಯಾನರಲ್ಲಿ ಬಂದಿರುವ ಪುರುಷೋತ್ತಮನ ಪ್ರಸಂಗದ ನಿರ್ಮಾಪಕರು ರವಿಕುಮಾರ್ ಮತ್ತು ಸಂಶುದ್ದೀನ್. ನಿರ್ದೇಶನ, ಕಥೆ-ಚಿತ್ರಕಥೆ ಡಾ.ದೇವದಾಸ್ ಕಾಪಿಕಾಡ್. ಹೆಸರಾಂತ ಸಾಹಿತಿಗಳಾದ ಜಯಂತ್ ಕಾಯ್ಕಿಣಿ, ದೊಡ್ಡರಂಗೇ ಗೌಡ, ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಸುಶ್ರಾವ್ಯ, ಸಾಹಿತ್ಯಾತ್ಮಕ ಹಾಡುಗಳಿವೆ. ಅಬೂಬಕರ್ ಪುತ್ತು ಉಪ್ಪಿನಂಗಡಿ ಸಹ ನಿರ್ಮಾಪಕರು. ಅರ್ಜುನ್ ಕಾಪಿಕಾಡ್ ಸಹ ನಿರ್ದೇಶಕರು. ಕರಾವಳಿಯ ಹಲವಾರು ಕಲಾವಿದರು ಇದರಲ್ಲಿ ಪಾತ್ರ ನಿರ್ವಹಿಸಿದ್ದಾರೆ.
ಬಾಲಿವುಡ್ ನಲ್ಲಿ ಮಿಂಚುತ್ತಿರುವ ಅನುಷ್ಕಾ ಶೆಟ್ಟಿ, ದುನಿಯಾ ಚಿತ್ರದ ರಶ್ಮಿ ಪುತ್ತೂರಿನವರು. ಅದೇ ಸಾಲಿಗೆ ದೀಪಿಕಾ ದಿನೇಶ್ ಸೇರುವುದರಲ್ಲಿ ಸಂಶಯವಿಲ್ಲ. ಪುರುಷೋತ್ತಮನ ಪ್ರಸಂಗ ರಾಜ್ಯಾದ್ಯಂತ ನೂರಕ್ಕೂ ಅಧಿಕ ಚಿತ್ರಮಂದಿರದಲ್ಲಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಜೊತೆಗೆ ಮಂಗಳೂರಿನ ಎಲ್ಲಾ ಮಲ್ಟಿಫ್ಲೆಕ್ಸ್ ನಲ್ಲೂ ಇದೆ. ಪುತ್ತೂರಿನ ಜಿ ಎಲ್ ಮಾಲ್ ಭಾರತ್ ಸಿನಿಮಾದಲ್ಲಿ ಮಧ್ಯಾಹ್ನ 2ಕ್ಕೆ ಮತ್ತು ರಾತ್ರಿ 10ಕ್ಕೆ ಪ್ರದರ್ಶನಗೊಳ್ಳುತ್ತಿದೆ. ದೀಪಿಕಾ ಅವರ ಮುಂದಿನ ಸಿನಿಮಾ ಜೀವನ ಯಶಸ್ವಿಯಾಗಲಿ.
-ರಶೀದ್ ವಿಟ್ಲ

LEAVE A REPLY

Please enter your comment!
Please enter your name here