ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ರಾಜಕಾಲುವೆಗೆ ರೂ.2ಕೋಟಿ ವೆಚ್ಚದಲ್ಲಿ ನಡೆಯಲಿರುವ ತಡೆಗೋಡೆ ನಿರ್ಮಾಣಕ್ಕೆ ಮಾ.7ರಂದು ಶಾಸಕ ಅಶೋಕ್ ಕುಮಾರ್ ರೈ ಶಂಕುಸ್ಥಾಪನೆ ನೆರವೇರಿಸಿದರು.
ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ದೇವಸ್ಥಾನದಲ್ಲಿ ಹಿಂದಿನ ಆಡಳಿತ ಮಂಡಳಿಯಿಂದ ದೇವಸ್ಥಾನದ ಅಭಿವೃದ್ಧಿ ಹತ್ತು ಹಲವು ಯೋಜನೆಗಳಾಗಿತ್ತು. ತಡೆಗೋಡೆ ಸೇರಿದಂತೆ ಹಲವು ಕಾಮಗಾರಿಗಳು ಶೀಘ್ರದಲ್ಲಿ ಆಗಬೇಕಿದೆ. ರೂ.50ಕೋಟಿಯ ಅಭಿವೃದ್ಧಿಗೆ ತಯಾರಿ ಮಾಡಲಾಗಿದೆ. ರೂ.2ಕೋಟಿಯಲ್ಲಿ ರಾಜಕಾಲುವೆಗೆ ತಡೆಗೋಡೆ ನಿರ್ಮಿಸಿ ಅದರ ಪಕ್ಕದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸುವ ಯೋಜನೆಯಿದೆ. ಆವಶ್ಯಕವಾದ ವಸತಿ ಸಂಕೀರ್ಣಕ್ಕೆ ರೂ.5ಕೋಟಿ ಅನುದಾನಕ್ಕೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜಕಾಲುವೆಗೆ ತಡೆಗೋಡೆ, ಕಾಂಪೌಂಡ್ ನಿರ್ಮಾಣವಾಗಲಿದೆ. ಇದು ಭದ್ರೆತಗೂ ಸಹಕಾರಿಯಾಗಲಿದೆ. ಈಗಾಗಲೇ ಮಾಡಿರುವ ರೂ.50ಕೋಟಿಯ ಮಾಸ್ಟರ್ ಪ್ಲಾನ್‌ನ ಕಾಮಗಾರಿಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡಿ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದ ಅವರು ರಾಜಕೀಯ ರಹಿತವಾಗಿ ದೇವಸ್ಥಾನದಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದರು.
ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ದೇವಸ್ಥಾನಕ್ಕೆ ಬಹು ಆವಶ್ಯಕತೆ ಇರುವ ತಡೆಗೋಡೆ ಹಾಗೂ ಕಾಂಪೌಂಡ್ ನಿರ್ಮಾಣವಾದಾಗ ಇದು ಭದ್ರತೆಗೆ ಸಹಕಾರಿಯಾಗಲಿದೆ. ಈ ಕಾಮಗಾರಿ ಅತ್ಯಂತ ಶೀಘ್ರದಲ್ಲಿ ಸುಂದರವಾಗಿ ನಡೆಯಲಿ. ವಿವಿಧ ಯೋಜನೆಗಳನ್ನು ಶಾಸಕರು ಹಾಗೂ ಎಲ್ಲರ ಸಹಕಾರ ನಡೆಯಲಿದೆ. ಯಾತ್ರಿ ನಿವಾಸ ಮಾದರಿಯಲ್ಲಿ ವಸತಿ ಸಮುಚ್ಚಯ ನಿರ್ಮಾಣಕ್ಕೆ ಸರಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದೆ ಎಂದರು.
ನಗರ ಸಭಾ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಮಾತನಾಡಿ, ಅಶೋಕ್ ಕುಮಾರ್ ರೈ ಶಾಸಕರಾದ ಬಳಿಕ ಶ್ರದ್ಧಾ ಭಕ್ತಿಯಿಂದ ಉತ್ತಮ ಕೆಲಸ ನಡೆಯುತ್ತಿದೆ. ಹತ್ತಾರು ಯೋಜನೆಗಳೊಂದಿಗೆ ಇನ್ನಷ್ಟು ಕೆಲಸಗಳು ನಡೆಯಲಿ ಎಂದರು.
ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ಚರ ಭಟ್ ಮಾತನಾಡಿ, ಅಶೋಕ್ ಕುಮಾರ್ ರೈಯವರು ಶಾಸಕರಾದ ಕಲವೇ ತಿಂಗಳಲ್ಲಿ ದೇವಸ್ಥಾನಕ್ಕೆ ರೂ.೨ಕೋಟಿ ಅನುದಾನ ಬಂದಿದೆ. ಇನ್ನು ನಾಲ್ಕು ವರ್ಷಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳು ನಡೆಯಲಿ ಎಂದರು.
ರಾಮಕೃಷ್ಣ ಪ್ರೌಢ ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಶಾಸಕ ಅಶೋಕ್ ಕುಮಾರ್ ರೈಯವರ ಮೂಲಕ ಹತ್ತೂರ ಒಡೆಯನ ಸನ್ನಿಧಿಯಲ್ಲಿ ಹತ್ತು ಹಲವು ಯೋಜನೆಗಳು ಸಾಕಾರಗೊಂಡಿದೆ ಎಂದರು.
ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜರಾಮ ಕೆ.ಬಿ., ಪುತ್ತೂರು ನಗರ ಕಾಂಗ್ರೆಸ್ ಉಪಾಧ್ಯಕ್ಷ ದಾಮೋದರ ಭಂಡಾರ್‌ಕರ್, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಕೇಶ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.