ಪುತ್ತೂರು: ಚೆಲ್ಯಡ್ಕದ ಸೇತುವೆ ಅನುದಾನ ನೀಡಲೇಬೇಕು ಎಂದು ಸಚಿವರಲ್ಲಿ ಒತ್ತಾಯಿಸಿದ್ದೇನೆ. ಅವರು ಅನುಮತಿ ನೀಡಿ ರೂ.3 ಕೋಟಿ ಅನುದಾನ ದೊರೆತಿದ್ದು ಟೆಂಡರ್ ಆಗಿದೆ. ಇನ್ನು ಒಂದು ವಾರದಲ್ಲಿ ಕಾಮಗಾರಿ ಆರಂಭವಾಗಲಿದೆ. ಮಳೆಗಾಲದ ಮೊದಲು ಕಾಮಗಾರಿ ಪೂರ್ಣಗೊಳಿಸಬೇಕಾದ ಆವಶ್ಯಕತೆಯಿದೆ. ಮುಂದಿನ ಮಳೆಗಾಲಕ್ಕೆ ಯಾವುದೇ ತೊಂದರೆ ಇಲ್ಲದೆ ಸಂಚರಿಸುವಂತೆ ಮಾಡಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಚೆಲ್ಯಡ್ಕದಲ್ಲಿ ಸೇತುವೆ, ರೆಂಜದಲ್ಲಿ ಆಟೋ ರಿಕ್ಷಾ ನಿಲ್ದಾಣ, ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಇರ್ದೆ, ಬೆಟ್ಟಂಪಾಡಿ ಗ್ರಾಮದಲ್ಲಿ ನಡೆಯಲಿರುವ ಸುಮಾರು ರೂ.5ಕೋಟಿ ಅನುದಾನ ಕಾಮಗಾರಿಗಳಿಗೆ ಮಾ.8ರಂದು ರೆಂಜದಲ್ಲಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಪುತ್ತೂರು ವಿಧಾನ ಸಭಾ ಕ್ಷೇತ್ರದ ಭಜನಾ ಮಂದಿರ ಹಾಗೂ ದೇವಸ್ಥಾನಗಳಿಗೆ ರೂ.2.50ಕೋಟಿ ಅನುದಾನ 8 ತಿಂಗಳಲ್ಲಿ ನೀಡಲಾಗಿದೆ. ಅಲ್ಪ ಸಂಖ್ಯಾತ ಒಂದೇ ಇಲಾಖೆಯಿಂದ ರೂ.5ಕೋಟಿ ಅನುದಾನ ತರಲಾಗಿದೆ. ಅನುದಾನ ಬರುವುದಿಲ್ಲ. ಎಲ್ಲಾ ಗ್ಯಾರಂಟಿಗಳಿಗೆ ಹೋಗಿದೆ. ಅನುದಾನ ಯಾವುದೂ ಇಲ್ಲ ಎಂದು ಟೀಕೆ ಬೇರೆ ಬೇರೆ ರೀತಿಯಲ್ಲಿ ಇತರ ಪಕ್ಷಗಳು ಮಾಡುತ್ತಿದ್ದರು. ಆದರೆ ಕೇವಲ 8 ತಿಂಗಳಲ್ಲಿ ರೂ. 1471ಕೋಟಿ ಅನುದಾನ ಪುತ್ತೂರು ಕ್ಷೇತ್ರಕ್ಕೆ ತಂದಿದ್ದೇನೆ. ಇಷ್ಟು ವರ್ಷದಲ್ಲಿ ಹಿಂದಿನ ಶಾಸಕರು ಎಂಟು ತಿಂಗಳಲ್ಲಿ ಇದಕ್ಕಿಂತ ಹೆಚ್ಚು ಅನುದಾನ ತಂದಿದ್ದರೆ ತಿಳಿಸಲಿ. ಅನುದಾನ ತಂದಿರುವ ಬಗ್ಗೆ ರೀಲು ಬಿಡುವುದಲ್ಲ. ಐದು ಗ್ಯಾರಂಟಿ ಯೋಜನೆಯಿಂದ ಯಾರಿಗೂ ತೊಂದರೆ ಆಗಿಲ್ಲ. ಎಲ್ಲರಿಗೂ ಸಹಕಾರಿಯಾಗಿದೆ. 1400ಕೋಟಿ ಅನುದಾನ ಬಗ್ಗೆ ಗೊಂದಲ ಬೇಡ. ಎಲ್ಲೆಲ್ಲಿಗೆ ಅನುದಾನ ಎಷ್ಟು ನೀಡಲಾಗಿದೆ ತಿಳಿಸಲಾಗುವುದು. ರೂ.1010ಕೋಟಿ ಕುಡಿಯುವ ನೀರಿಗೆ 24ಗಂಟೆ ಕುಡಿಯುವ ನೀರು ತಲುಪಿಸುವ ಯೋಜನೆ 15 ತಿಂಗಳಲ್ಲಿ ಆಗಲಿದೆ. ಹಲವು ದಶಕಗಳ ಚೆಲ್ಯಡ್ಕದ ಮುಳುಗು ಸೇತುವೆಗೆ ಮುಕ್ತಿ ನೀಡಲಾಗಿದ್ದು ಇನ್ನಾದರೂ ಆ ಭಾಗದ ಜನರು ಯೋಚಿಸಬೇಕು ಎಂದರು.
ಬೆಟ್ಟಂಪಾಡಿ ಎಂದರೆ ನನ್ನ ಊರಿಗಿಂತ ಹೆಚ್ಚು ಪ್ರೀತಿ. ಬೆಟ್ಟಂಪಾಡಿ ನಂತದ ಇರ್ದೆ, ನಿಡ್ಪಳ್ಳಿ, ಪಾಣಾಜೆ ಇತರ ಗ್ರಾಮಗಳು. ಬೆಟ್ಟಂಪಾಡಿ ಗ್ರಾಮವೇ ನನ್ನನ್ನು ಈ ಭಾಗಕ್ಕೆ ಪರಿಚಯ ಮಾಡಿಕೊಟ್ಟಿದೆ. ಈ ಭಾಗದ ದೈವ ದೇವರ ದಯೆ, ನಿಮ್ಮ ಆಶೀರ್ವಾದ ದೊರೆತಿದೆ. ಹೀಗಾಗಿ ಅನುದಾನದ ವಿಚಾರದಲ್ಲಿ ಬೆಟ್ಟಂಪಾಡಿಗೆ ಹಿಂದೆ ನೋಡುವುದಿಲ್ಲ. ಬೆಟ್ಟಂಪಾಡಿ. ಪಾಣಾಜೆ, ನಿಡ್ಪಳ್ಳಿಗೆ ಆದ್ಯತೆಯಲ್ಲಿ ಅನುದಾನ ನೀಡುತ್ತೇನೆ. ಮತ ಕಡಿಮೆ ದೊರೆತಲ್ಲಿಗೆ ಹೆಚ್ಚು ಅನುದಾನ ಅಧಿಕ ನೀಡುತ್ತಿದ್ದೀರಿ. ಹೆಚ್ಚು ಮತ ದೊರೆತಲ್ಲಿಗೆ ಕಡಿಮೆ ಅನುದಾನ ನೀಡುತ್ತೀರಿ ಎಂದು ನನ್ನನ್ನು ಪ್ರಶ್ನೆ ಮಾಡುತ್ತಾರೆ. ಆದರೂ ಅನುದಾನ ನೀಡುವುದರಲ್ಲಿ ಯಾರಿಗೂ ಕಡಿಮೆ ಮಾಡಿಲ್ಲ. ನೀಡಿರುವುದರಲ್ಲಿ ಸ್ವಲ್ಪ ಭಾಗ ಹೆಚ್ಚಾಗಿಯೇ ಬೆಟ್ಟಂಪಾಡಿಗೆ ನೀಡಿದ್ದೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪ್ರಗತಿಪರ ಕೃಷಿಕ ಬಾಳಪ್ಪ ರೈ ಅರಂತನಡ್ಕ ಮಾತನಾಡಿ, ನಮ್ಮ ಅರಂತನಡ್ಕ ರಸ್ತೆಯ ಡಾಮರೀಕರಣ ಕಿತ್ತು ಹೋಗಿ ತೀರಾ ಹದಗೆಟ್ಟಿತ್ತು. ಈ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಕಳೆದ 10 ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಾ ಬಂದಿದ್ದರೂ ಅದು ಈಡೇರಲಿಲ್ಲ. ಇದೀಗ ಅಶೋಕ್ ಕುಮಾರ್ ರೈಯವರು ಶಾಸಕರಾದ ಬಳಿಕ ನನ್ನ ಹತ್ತು ವರ್ಷದ ಬೇಡಿಕೆ ಈಡೇರಿದ್ದು ರಸ್ತೆ ಕಾಂಕ್ರಿಟೀಕರಣಗೊಳ್ಳಲಿದೆ. ಅನುದಾನ ಒದಗಿಸಿದ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿ, ಅಶೋಕ್ ಕುಮಾರ್ ರೈಯವರು ಅನುದಾನಕ್ಕಾಗಿರುವ ಶಾಸಕರಲ್ಲ. ಅವರು ಸಮಗ್ರ ಅಭಿವೃದ್ಧಿಯ ಹರಿಕಾರಕ. ಈ ಭಾಗದ ಜನರ ಹತ್ತಾರು ವರ್ಷಗಳ ಬೇಡಿಕೆಯನ್ನು ಶಾಸಕರಾದ ಹತ್ತೇ ತಿಂಗಳಲ್ಲಿ ಈಡೇರಿಸಿಕೊಟ್ಟಿದ್ದಾರೆ. ಮನವಿಗಳ ಮೇಲೆ ಮನವಿ ಮಾಡಿ ಕಳೆದ ಐದು ದಶಕಗಳಲ್ಲಿ ಕಸದ ಬುಟ್ಟಿ ಸೇರುತ್ತಿದ್ದ ಚೆಲ್ಯಡ್ಕ ಮುಳುಗು ಸೇತುವೆಗೆ ಹತ್ತೇ ತಿಂಗಳಲ್ಲಿ ಮುಕ್ತಿ, ರೆಂಜದಲ್ಲಿ ಶ್ರಮಿಕ ವರ್ಗದ ತಂಗುದಾನ ಆಟೋ ನಿಲ್ದಾಣದ ಬೇಡಿಕೆಗೆ ಸ್ಪಂದಿಸುವ ಮೂಲಕ ದಶಕಗಳ ಬೇಡಿಕೆ ಈಡೇರಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ. ಹಲವು ಗ್ರಾಮಗಳ ಸಂಪರ್ಕದ ಕೇಂದ್ರವಾಗಿರುವ ಬೆಟ್ಟಂಪಾಡಿಯಲ್ಲಿ ಇನ್ನಷ್ಟು ಅಭಿವೃದ್ಧಿ ಆಗಬೇಕಿದ್ದು ಇವುಗಳನ್ನು ಶಾಸಕರು ಈಡೇರಿಸಿಕೊಡಲಿದ್ದಾರೆ. ಇಂದಿನ ಶಿಲಾನ್ಯಾಸ ಕಾರ್ಯಕ್ರಮವು ಅಭಿವೃದ್ಧಿಗೆ ಬಲ ಕೊಡುವ ಕಾರ್ಯಕ್ರಮವಾಗಿದೆ ಎಂದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಬ್ಲಾಕ್ ಕಾಂಗ್ರೆಸ್ ಎಸ್ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀ ಪ್ರಸಾದ್ ಪಾಣಾಜೆ, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಸಿದ್ದೀಕ್ ಸುಲ್ತಾನ್, ಹಿರಿಯರಾದ ಕೆ.ಪಿ ಭಟ್ ಕೋನಡ್ಕ, ಬಿ.ಆರ್ ದೇವಪ್ಪ ಗೌಡ, ಐತ್ತಪ್ಪ ಪೇರಲ್ತಡ್ಕ, ಗುತ್ತಿಗೆದಾರ ಆಲಿಕುಂಞಿ ಕೊರಿಂಗಿಲ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ರಾಜರಾಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬೃಹತ್ ಹೂ ಹಾರ ಹಾಕಿ ಶಾಸಕರಿಗೆ ಅಭಿನಂದನೆ:
ಚೆಲ್ಯಡ್ಕ ಸೇತುವ ಸೇರಿದಂತೆ ರಿಕ್ಷಾ ನಿಲ್ದಾಣ ಹಾಗೂ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಸುಮಾರು ರೂ.೫ಕೋಟಿ ಅನುದಾನ ಒದಗಿಸಿದ ಶಾಸಕ ಅಶೋಕ್ ಕುಮಾರ್ ರೈಯವರನ್ನು ಬೃಹತ್ ಹೂ ಹಾರ ಹಾಕಿ ಇರ್ದೆ, ಬೆಟ್ಟಂಪಾಡಿ ಗ್ರಾಮದ ವತಿಯಿಂದ ಅಭಿನಂದನೆ ಸಲ್ಲಿಸಿದರು.
ಮನವಿ ಸಲ್ಲಿಸಲು ಮುಗಿಬಿದ್ದ ಜನತೆ:
ಶಿಲಾನ್ಯಾಸ ನೆರವೇರಿಸಲು ಶಾಸಕ ಅಶೋಕ್ ಕುಮಾರ್ ರೈ ಬರುವುದನ್ನು ಅರಿತಿದ್ದು ಜನತೆ ತಮ್ಮ ತಮ್ಮ ಸಮಸ್ಯೆಗಳು, ಬೇಡಿಕೆಗಳಿಗೆ ಸಂಬಂಧಿಸಿದಂತೆ ಶಾಸಕರಿಗೆ ಮನವಿ ಸಲ್ಲಿಸಲು ನಿಗದಿತ ಸಮಯಕ್ಕೆ ಮೊದಲೇ ಬಂದು ಕಾದು ಕುಳಿತಿದ್ದರು. ಸಭಾ ಕಾರ್ಯಕ್ರಮ ಮುಗಿಸಿ ಶಾಸಕರು ಹೊರಡುವ ವೇಳೆಗೆ ನೂರಾರು ಮಂದಿ ಗ್ರಾಮಸ್ಥರು ತಮ್ಮ ತಮ್ಮ ಸಮಸ್ಯೆಗಳಿಗೆ ಸಂಬಂಧಿಸಿ ಮನವಿ ಸಲ್ಲಿಸಲು ಶಾಸಕರ ಸುತ್ತ ಮುಗಿಬಿದ್ದರು. ಎಲ್ಲರ ಮನವಿ ಸ್ವೀಕರಿಸಿದ ಬಳಿಕ ಶಾಸಕರು ಅಲ್ಲಿಂದ ತೆರಳಿದರು.
ಶಿಲಾನ್ಯಾಸಗೊಂಡ ಕಾಮಗಾರಿಗಳು:
ಚೆಲ್ಯಡ್ಕ ಸೇತುವೆಗೆ ರೂ.3ಕೋಟಿ, ರೆಂಜ ಆಟೋ ರಿಕ್ಷಾ ನಿಲ್ದಾಣ ರೂ.೫ಲಕ್ಷ, ಬೆಟ್ಟಂಪಾಡಿ ಗ್ರಾಮದ ಬಿಲ್ವಗಿರಿ ದೇವಮಣಿ, ಬಿಲ್ವಗಿರಿ, ಎಂಪೆಕಲ್ಲು ರಸ್ತೆಗೆ ರೂ.20ಲಕ್ಷ, ದೇವಸ್ಥಾನದ ರಸ್ತೆಗೆ ರೂ.15 ಲಕ್ಷ, ತೋಟದಮೂಲೆ ಮಡ್ಯಂಪಾಡಿ ರಸ್ತೆಗೆ ರೂ.5.೦5ಲಕ್ಷ, ಆನಡ್ಕ, ಕತ್ತಿಕೂಟುವಕಲ್ಲು ರಸ್ತೆಗೆ ರೂ.10ಲಕ್ಷ, ಇರ್ದೆ ಪಲ್ಲಿತ್ತಡ್ಕ, ಪೇರಲ್ತಡ್ಕ ಮಸೀದಿ ರಸ್ತೆಗೆ ರೂ.5.೦5 ಲಕ್ಷ, ರೆಂಜ ಮಸೀದಿ ದಫನ ಭೂಮಿ ರಸ್ತೆ ಅಭಿವೃದ್ಧಿಗೆ ರೂ.5.೦5ಲಕ್ಷ, ಪೇರಲ್ತಡ್ಕ, ಪಲ್ಲಿತ್ತಡ್ಕ ಬೆಂದ್ರ್‌ತೀರ್ಥ ರಸ್ತೆಗ ರೂ.10ಲಕ್ಷ, ಬಾಕಿತ್ತಿಮಾರು ರಸ್ತೆಗೆ ರೂ.15 ಲಕ್ಷ, ಗಾಂಧೀಕಟ್ಟೆ ಜನತಾ ಕಾಲೋನಿ ರಸ್ತೆಗೆ ರೂ.5.೦5ಲಕ್ಷ, ಸರಕಾರಿ ಪ್ರಥಮ ದರ್ಜೆ ಕಾಲೇಜು ರಸ್ತೆಗೆ ರೂ.05.05ಲಕ್ಷ, ರಂಗಯ್ಯಕಟ್ಟೆ ಅರಂತನಡ್ಕ ರಸ್ತೆಗೆ ರೂ.10ಲಕ್ಷ, ಡೆಮ್ಮಂಗರ ರಸ್ತೆಗೆ ರೂ.10ಲಕ್ಷದ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿತು.
ಭೂ ನ್ಯಾಯ ಮಂಡಳಿ ಸದಸ್ಯ ಕೃಷ್ಣಪ್ರಸಾದ್ ಆಳ್ವ ಕಾರ್ಯಕ್ರಮ ನಿರೂಪಿಸಿ, ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸದಾಶಿವ ರೈ ಗುಮ್ಮಟೆಗದ್ದೆ ವಂದಿಸಿದರು. ಪ್ರಮುಖರಾದ ಅಬೂಬಕ್ಕರ್ ಕೊರಿಂಗಿಲ, ನಾರಾಯಣ ರೈ ಕೆಲ್ಲಾಡಿ, ನಾಗರಾಜ ಭಟ್ ಘಾಟೆ, ಮೊದು ಕುಂಞಿ, ಶಿವಪ್ರಸಾದ್ ರೈ ಚೆಲ್ಯಡ್ಕ, ಹಮೀದ್ ಕೊಮ್ಮೆಮಾರ್, ಸಿದ್ದೀಕ್, ಕೃಷ್ಣಪ್ಪ ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು.